ಭಾನುವಾರ, ಜುಲೈ 24, 2011

ಸಾಧನಾ ಪಂಚಕಮ್-ಭಾಗ -12


ಆತ್ಮೀಯ ಬಂಧುಗಳೇ, ಶ್ರೀ ಶಂಕರಾಚಾರ್ಯ ವಿರಚಿತ ಸಾಧನಾಪಂಚಕಮ್ ಕೃತಿಯ ಬಗ್ಗೆ ತಿಪಟೂರು ಚಿನ್ಮಯಾ ಮಿಶನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಹಾಸನದ ಶ್ರೀ ಶಂಕರ ಮಠದಲ್ಲಿ ಮಾಡಿದ ಉಪನ್ಯಾಸದ ಎಲ್ಲಾ ಧ್ವನಿ ಕ್ಲಿಪ್ ಗಳನ್ನೂ ಕಳೆದ ಮೂರು ವಾರಗಳಿಂದ ಪ್ರಕಟಿಸುತ್ತಾ ಇಂದು ಕೊನೆಯ ಕಂತನ್ನು ಪ್ರಕಟಿಸಲಾಗಿದೆ. ಅಧ್ಯಾತ್ಮಪಥದಲ್ಲಿ ಸಾಗುತ್ತಿರುವ ಸಾಧಕರಿಗಂತೂ ಬಹಳ ಉತ್ತಮವಾದ ಜೀವನ ಸೂತ್ರಗಳು ಸಾಧನಾ ಪಂಚಕಮ್ ಉಪನ್ಯಾಸದಲ್ಲಿ ಲಭ್ಯ. ಹಾಗಂದು ಸಾಮಾನ್ಯ ಲೌಕಿಗರಿಗೆ ಇದು ಬೇಡವೇ? ಶ್ರದ್ಧೆಯಿಂದ ಈ ಉಪನ್ಯಾಸ ಮಾಲಿಕೆಯನ್ನು ಕೇಳಿನೋಡಿ. ನಿಮ್ಮ ಹಲವು ಸಮಸ್ಯೆಗಳಿಗೆ ಇಲ್ಲಿ ಉತ್ತರವಿದೆ.ಆದ್ದರಿಂದ ಸಾಧನಾ ಪಂಚಕಮ್ ಉಪನ್ಯಾಸ ಮಾಲಿಕೆ ಇಂದಿಗೆ ಮುಗಿದರೂ ಅದನ್ನು ಯಾವಾಗ ಬೇಕಾದರೂ ಕೇಳಲು ಯೋಗ್ಯವಾಗಿದೆ. ನೀವು ಮಾಡಬೇಕಾದುದು ಇಷ್ಟೆ.ಬ್ಲಾಗಿನ ಎಡಬದಿಯಲ್ಲಿ "ಮಾಲಿಕೆಗಳು" ಎಂಬ ತಲೆಬರಹವಿದೆ. ಅದರಡಿಯಲ್ಲಿರುವ "ಸಾಧನಾ ಪಂಚಕಮ್" ಮೇಲೆ ಕ್ಲಿಕ್ ಮಾಡಿದರೆ ಅಷ್ಟೂ ಉಪನ್ಯಾಸದ ಕ್ಲಿಪ್ ಗಳು ನಿಮಗೆ ಕೇಳಲು ಲಭ್ಯವಾಗುತ್ತವೆ. ಅದರ ಉಪಯೋಗವನ್ನು ಎಲ್ಲರೂ ಪಡೆದರೆ ನಮ್ಮ ಪ್ರಯತ್ನ ಸಾರ್ಥಕವಾದೀತು.
------------------------------------------
ಸಾಧನಾ ಪಂಚಕಂ -ಮೆಟ್ಟಲು- 37+38+39+40
37. ಪ್ರಾಕ್ಕರ್ಮ ಪ್ರವಿಲಾಪ್ಯತಾಮ್
-ಸಂಚಿತ ಕರ್ಮಗಳ ಫಲವನ್ನು ಅನುಭವಿಸು
38. ಚಿತಿಬಲಾನ್ನಾಪ್ಯುತ್ತರೈ: ಶ್ಲಿಷ್ಯತಾಮ್
ಹಾಗೆಯೇ ಮನೋಬಲದಿಂದ ಭವಿಷ್ಯ ಬಗ್ಗೆಯೂ ಆತಂಕ ಪಡದಿರು
39. ಪ್ರಾರಬ್ಧಂ ತ್ವಿಹ ಭುಜ್ಯತಾಮ್
ಪ್ರಾರಬ್ಧ ಕರ್ಮಗಳನ್ನು ಇಲ್ಲಿ ಅನುಭವಿಸು.
40. ಅಥ ಪರಬ್ರಹ್ಮಾತ್ಮನಾ ಸ್ಥೀಯತಾಮ್
-ಅನಂತರ ಬ್ರಹ್ಮಾನುಭವದಲ್ಲಿ ಸ್ಥಿತನಾಗಿರು.

ಶನಿವಾರ, ಜುಲೈ 23, 2011

ಶ್ರೀ ಜೇಸುದಾಸ್ ರಿಂದ ಹರಿವರಾಸನಮ್

ಸಾಧನಾ ಪಂಚಕಮ್-ಭಾಗ -11

35. ಪೂರ್ಣಾತ್ಮಾ ಸುಸಮೀಕ್ಷತಾಮ್
ಸರ್ವವ್ಯಾಪಿಯಾಗಿರುವ ಆತ್ಮನನ್ನು ದರ್ಶಿಸು
36. ಜಗದಿದಂ ತದ್ಬಾಧಿತಂ ದೃಶ್ಯತಾಮ್
ಕ್ಷಣ ಭಂಗುರದ ಜಗತ್ತು ನಮ್ಮ ಮನಸ್ಸಿನ ಭ್ರಮೆ ಎಂಬುದನ್ನು ಮನಗಾಣು

ಶುಕ್ರವಾರ, ಜುಲೈ 22, 2011

ಇಲ್ಲಿ ಮಾತನಾಡಬೇಕು

ಆತ್ಮೀಯ ಬಂಧುಗಳೇ,
ನನ್ನೊಡನೆ ಬರೆಯಲು ಶ್ರೀಮತಿ ವಿಜಯ ಶ್ರೀಕಂಠಮೂರ್ತಿ ಮತ್ತು ಹಿರಿಯರಾದ ಕವಿನಾಗರಾಜ್ ಜೊತೆಗಿದ್ದಾರೆ. ನಾನು ಗಮನಿಸಿದಂತೆ ಕಳೆದ ಒಂದುತಿಂಗಳಿಂದೀಚೆಗೆ ಸುಮಾರು ಒಂದು ಸಹಸ್ರಕ್ಕೂ ಹೆಚ್ಚು ಜನರು ಬ್ಲಾಗಿಗೆ ಬೇಟಿಕೊಟ್ಟಿದ್ದಾರೆ.ನಮ್ಮ ಬಂಧುಗಳಲ್ಲದ ಅನೇಕ ಅಭಿಮಾನಿಗಳೂ ಭೇಟಿ ಕೂಟ್ಟಿರಬಹುದು. ನಮ್ಮ ಬಂಧುಗಳು ಇಲ್ಲಿ ಮಾತನಾಡಬೇಕು. ಕನಿಷ್ಟ ಪಕ್ಷ ಒಂದು ಕಾಮೆಂಟ್ ಆದರೂ ಮಾಡಬೇಕು. ಕ್ಷೇಮ ಸಮಾಚಾರ ತಿಳಿಸಬೇಕು. ಕನ್ನಡದಲ್ಲಿ ಬರೆಯಲು ಬಾರದವರಿಗಾಗಿ ಕನ್ನಡ ಸ್ಲೇಟ್ ಕೊಟ್ಟಿರುವೆ. ಅದರೊಟ್ಟಿಗೆ ಯಾವ ಕನ್ನಡ ಅಕ್ಷರಕ್ಕೆ ಯಾವ ಇಂಗ್ಳೀಶ್ ಅಕ್ಷರ ಕುಟ್ಟಬೇಕೆಂಬ ಪಟ್ಟಿಯೂ ಇದೆ.ವಿಜಯ ಅವರಂತ ಮಹಿಳೆಯೊಬ್ಬರು ತಮ್ಮ ಕಛೇರಿ ಕೆಲಸಗಳು ಮತ್ತು ಗೃಹಕೃತ್ಯದ ಜೊತೆಗೇ ಬ್ಲಾಗ್ ನಲ್ಲಿ ಬರೆಯುವ ಗಂಭೀರ ಪ್ರಯತ್ನ ಮಾಡಿದ್ದಾರೆ.ಅವರು ನಮಗೆಲ್ಲಾ ಸ್ಪೂರ್ತಿಯಾಗಬೇಡವೇ? ಎರಡು ಮಾತು ಬರೆಯಿರಿ ಪ್ಲೀಸ್.

ಧಾವಂತದ ಬದುಕಿನಲ್ಲಿ ಬಡವಾದ ಸಮಾಜ

ಸರ್ವೇ ಭವಂತು ಸುಖಿನ: ಸರ್ವೇ ಸಂತು ನಿರಾಮಯಾ:

ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದು: ಭಾಗ್ಭವೇತ್||

ಇದು ನಮ್ಮ ಪೂರ್ವಜರು ನಮಗೆ ನೀಡಿರುವ ನಿತ್ಯ ಸಂಕಲ್ಪ.ಇದರ ಅರ್ಥವನ್ನು ಸ್ವಲ್ಪ ನೋಡೋಣ. "ಎಲ್ಲರೂ ಸುಖವಾಗಿರಲಿ. ಎಲ್ಲರಿಗೂ ಒಳ್ಳೆಯ ಆರೋಗ್ಯ ಸಿಗಲಿ.ಯಾರೂ ದು: ಪಡುವುದು ಬೇಡ"

ಎಲ್ಲರೂ ಅಂದರೆ ಯಾರು? ನಮ್ಮ ಮನೆಯ ಎಲ್ಲಾ ಜನರೇ? ನಮ್ಮ ಜಾತಿಯ ಎಲ್ಲಾ ಜನರೇ? ನಮ್ಮ ಊರಿನ ಎಲ್ಲಾ ಜನರೇ? ನಮ್ಮ ಧರ್ಮದ ಎಲ್ಲಾ ಜನರೇ? ಅಥವಾ ಎಲ್ಲಾ ಮನುಕುಲವೇ?.....ನಮ್ಮ ಪೂರ್ವಜರ ಕಲ್ಪನೆ ಕೇವಲ ಮನುಷ್ಯ ರಿಗೂ ಸೀಮಿತಗೊಳ್ಳಲಿಲ್ಲ. ಭೂಮಂಡಲದಲ್ಲಿರುವ ಎಲ್ಲಾ ಜೀವ ಜಂತುಗಳು, ಗಿಡಮರ ಬಳ್ಳಿಗಳೂ ಕೂಡ ಸುಖವಾಗಿರಬೇಕೆಂಬ ಮಹತ್ತರ ಸಂಕಲ್ಪ. ಅಂದರೆ ಅಷ್ಟರ ಮಟ್ಟಿಗೆ ಉದಾರ ನೀತಿ. ಕೇವಲ ಮನುಷ್ಯ ಮಾತ್ರರೇ ಅಲ್ಲದೆ ಸಮಸ್ತ ಜೀವ ಜಂತುಗಳೂ ಸುಖವಾಗಿರಲೆನ್ನುವ ನಮ್ಮ ಪೂರ್ವಜರು ನಮಗೆ ಎಂತಹಾ ಉದಾರವಾದ ಬದುಕುವ ಶೈಲಿ ಕಲಿಸಿಕೊಟ್ಟಿದ್ದಾರಲ್ಲವೇ?

ಅದ್ವೇಷ್ಟಾ ಸರ್ವ ಭೂತಾನಾಮ್ ಮೈತ್ರ: ಕರುಣ ಏವ ....ಎಂದು ಗೀತೆಯು ಸಾರುತ್ತದೆ. ಅಂದರೆ ಏನು? ಯಾರಮೇಲೂ ದ್ವೇಷ ಬೇಡ, ಎಲ್ಲರಲ್ಲೂ ಮೈತ್ರಿ, ಕರುಣೆ ಯಂತಹ ಸದ್ಗುಣಗಳನ್ನು ಬೆಳೆಸಿಕೊಳ್ಳೋಣ.....

ಸಮ: ಶತ್ರೌ ಮಿತ್ರೇ ತಥಾ ಮಾನಾಪಮಾನಯೋ:......

ಶತ್ರು ಮಿತ್ರರನ್ನು ಹಾಗೂ ಮಾನ ಅಪಮಾನಗಳನ್ನು ಸಮಭಾವದಿಂದ ಕಾಣೋಣ.

.........ಇಂತಹ ಸಾಕಷ್ಟು ಪ್ರೇರಣಾ ದಾಯಕ ವಿಚಾರಗಳನ್ನು ವೇದ ಉಪನಿಷತ್ತುಗಳಲ್ಲಿ, ಭಗವದ್ಗೀತೆಯಲ್ಲಿ ನಾವು ಕಾಣ ಬಹುದಾಗಿದೆ......

ಇವೆಲ್ಲಾ ನಮ್ಮ ಧಾರ್ಮಿಕ ಜೀವನಕ್ಕೆ ಪ್ರೇರಣಾದಾಯಕ ಅಂಶಗಳು. ಪರ ಮತವನ್ನು ದ್ವೇಶಿಸು, ಹಿಂದು ವಿಚಾರವನ್ನು ಒಪ್ಪದ ಅಥವಾ ನಮ್ಮ ಧಾರ್ಮಿಕ ಗ್ರಂಥಗಳನ್ನು ಒಪ್ಪದವರು ನರಕಕ್ಕೆ ಹೋಗಬೇಕಾಗುತ್ತದೆಂದು ನಮ್ಮ ಯಾವುದೇ ಧಾರ್ಮಿಕ ಗ್ರಂಥಗಳಲ್ಲಿ ಎಲ್ಲೂ ಹೇಳಿಲ್ಲ. ಅಥವಾ ಹಿಂದು ಧಾರ್ಮಿಕ ಗ್ರಂಥಗಳನ್ನು ಓದುವುದರಿಂದ ಮಾತ್ರ ನಿಮಗೆ ಸ್ವರ್ಗ ಸಿಗುತ್ತದೆಂದೂ ಕೂಡ ಎಲ್ಲೂ ಹೇಳಿಲ್ಲ.ಇಷ್ಟು ಭವ್ಯವಾದ ನಮ್ಮ ನೆಲದ ವಿಚಾರಗಳನ್ನು ನಾವು ಪ್ರಚಾರ ಮಾಡಲೇ ಇಲ್ಲವಲ್ಲ! ಇರಲಿ... ನಮ್ಮ ಮಕ್ಕಳಿಗೂ ಕಲಿಸಲಿಲ್ಲವಲ್ಲಾ!

ಈಗಿನ ನಮ್ಮ ಸಾಮಾಜಿಕ ಪರಿಸ್ಥಿತಿಯನ್ನು ನೋಡಿ.ವೃದ್ಧಾಶ್ರಮ ಸೇರುತ್ತಿರುವ ಅಪ್ಪ-ಅಮ್ಮ. ಹೆತ್ತ ಅಪ್ಪ-ಅಮ್ಮನ ಪ್ರೀತಿ ಕಾಣದೆ ಆಯಾಗಳ ಪೋಷಣೆಯಲ್ಲಿ ಯಾಂತ್ರಿಕವಾಗಿ ಬೆಳೆಯುವ ಮಕ್ಕಳು. ಇಂತಹ ಮಕ್ಕಳು ಬೆಳೆದು ದೊಡ್ದವರಾದಂತೆ ಅವರ ಕಣ್ಮುಂದಿನ ಆದರ್ಶವಾದರೂ ಏನು? ಕೈತುಂಬಾ ಸಂಬಳ ಸಿಗುವ ನೌಕರಿ.ಐಶಾರಾಮ ಜೀವನ. ಪ್ರೀತಿ ಪ್ರೇಮ, ಕಾಮದ ದೃಶ್ಯಗಳೇ ತುಂಬಿತುಳುಕುವ ದೂರದರ್ಶನ ದಾರಾವಾಹಿಗಳು! ಅಥವಾ ಕ್ರಿಕೆಟ್ ಆಟಗಳು!! ಕ್ರೈಮ್ ಡೈರಿಯೇ ಮೊದಲಾದ ಅಪರಾಧವನ್ನೇ ವೈಭವೀ ಕರಿಸುವ ದೃಶ್ಯಗಳು. ಇಷ್ಟಕ್ಕಿಂತ ಹೆಚ್ಚು ಚಟುವಟಿಕೆಗಳಿಗೆ ಬಿಡುವೆಲ್ಲಿಂದ ಬರಬೇಕು? ಮನಸ್ಸಿಗೆ ಮುದವನ್ನು ನೀಡಬಹುದಾದ ಪ್ರವಚನಗಳು, ಸಂಗೀತ-ನೃತ್ಯಗಳು, ಕಥೆ ಕಾದಂಬರಿಯನ್ನು ಓದುವ ಹವ್ಯಾಸಗಳು.... ಇವಕ್ಕೆಲ್ಲಾ ಸಮಯ ಎಲ್ಲಿಂದ ಬರಬೇಕು? ಹೀಗೆ ಸಮಾಜವು ದಿಕ್ಕುತಪ್ಪಿ ಧಾವಿಸುತ್ತಿರುವಾಗ ಸಹಜವಾಗಿ ಅಪರಾಧಗಳು, ಹೊಡೆದಾಟ ಬಡಿದಾಟಗಳು, ಕೋಮು ಗಲಭೆಗಳು, ಅಗ್ನಿ ಸ್ಪರ್ಷಗಳು, ಎಲ್ಲವೂ ಕಿಚ್ಚಿನಂತೆ ಹರಡಿ ಬಿಡುತ್ತವೆ. ಇದೆಲ್ಲಾ ಅತಿರೇಕವಾದಾಗ ಅದನ್ನು ನಿರ್ಬಂಧುಸಲು ಸರ್ಕಾರವು ಹೆಣಗುವ ಪರಿಸ್ಥಿತಿ!!

ಹೀಗೆ ಸಾಮಾಜಿಕವಾಗಿ ನೆಮ್ಮದಿ ಹಾಳಾಗುವುದನ್ನು ನಾವು ನೋಡುತ್ತಿರುವಂತೆಯೇ ವೈಯಕ್ತಿಕವಾಗಿಯೂ ಶಾಂತಿ ಇಲ್ಲದ ಜೀವನವನ್ನು ನೋಡುತ್ತಿದ್ದೇವೆ. ಮಾನಸಿಕವಾಗಿ ಶಾರೀರಿಕವಾಗಿಯೂ ಕೂಡ ಸ್ವಾಸ್ಥ್ಯವನ್ನು ಹಾಳುಮಾಡಿಕೊಂಡಿರುವ ಹಲವಾರು ಉಧಾಹರಣೆಗಳನ್ನು ಇಂದಿನ ಪೀಳಿಗೆಯಲ್ಲಿ ಕಾಣಬಹುದಾಗಿದೆ. ಪರಿಸ್ಥಿತಿಗೆ ಕಾರಣ ನಮಗೆ ಅರಿವಾಗಿದೆಯೇ?

ನಮಗೆ ಸ್ವಾತಂತ್ರ್ಯ ಬಂದು ಆರು ದಶಕಗಳಲ್ಲಿ ನಾವು ನಮ್ಮ ಮಣ್ಣಿನ ಸಂಸ್ಕೃತಿ ಪರಂಪರೆಯನ್ನು ಮರೆತದ್ದೇ ಇಂದಿನ ವಿಶಮ ಸ್ಥಿತಿಗೆ ಕಾರಣ ಎನಿಸುವುದಿಲ್ಲವೇ? ನಾವು ನಿಜವಾಗಿ ಒಬ್ಬ ಮುಗ್ಧ ತಂದೆ ತಾಯಿಯ ಸ್ಥಾನದಲ್ಲಿ ನಿಂತು ಚಿಂತನೆ ಮಾಡಿದಾಗ ನಮ್ಮ ಮಕ್ಕಳ ಭವಿಷ್ಯವು ಮುಸುಕಾಗಿ ನಮಗೆ ಕಾಣುವುದಿಲ್ಲವೇ? ಈ ನೆಲದ ಉದಾರವಾದ ಸಂಸ್ಕೃತಿ ಪರಂಪರೆಯನ್ನು ಬದಿಗಿಟ್ಟು ಈಗಾಗಲೇ ಕೆಟ್ಟಿರುವುದು ಸಾಲದೇ? ಭಗವದ್ಗೀತೆಯ ಸಾರವನ್ನು ತಿಳಿಯದೆ ಅದನ್ನು ವಿರೋಧಿಸುವವರಿಗೆ ಏನೆನ್ನೋಣ? ಇಡೀ ಮನುಕುಲದ ಒಳಿತಿಗಾಗಿ ನಮ್ಮ ಋಷಿಮುನಿಗಳ ತಪ್ಪಸ್ಸಿನ ಫಲವಾಗಿ ಮೂಡಿಬಂದ ಹಿಂದು ಧರ್ಮವನ್ನು ಅನುಸರಿಸುವ ಹಿಂದು ಮತೀಯರಲ್ಲಿಯೇ ಕೆಲವರನ್ನು ಅಲ್ಲಿಂದ ಬೇರ್ಪಡಿಸಿ ಅನ್ಯಮತೀಯ ಗುಂಪುಗಳೊಡನೆ ಸೇರಿಸುವ ಪ್ರಯತ್ನಕ್ಕೆ ಏನೆನ್ನೋಣ?

ಗುರುವಾರ, ಜುಲೈ 21, 2011

ಸಂಪಾದಕೀಯ

ಹರಿಹರಪುರದಲ್ಲಿ ಜನ್ಮ ತಾಳಿದ ಅಥವಾ ಹರಿಹರಪುರದ ಸಂಬಂಧ ಹೊಂದಿದ ಪ್ರಸಿದ್ಧ ವ್ಯಕ್ತಿಗಳ ಪರಿಚಯ ಮಾಲಿಕೆ ಆರಂಭವಾಗಿದೆ. ಅದರ ಶುಭಾರಂಭವಾಗಿ ಶಿವಮೊಗ್ಗದಿಂದ ಶ್ರೀಮತಿ ವಿಜಯ ಶ್ರೀಕಂಠಮೂರ್ತಿಯವರು ಅವರ ತಂದೆ ಶ್ರೀ ಬಿ.ಎಸ್.ರಾಮಭಟ್ಟರ ಪರಿಚಯ ಲೇಖನವನ್ನು ಪ್ರಕಟಿಸಿದ್ದಾರೆ. ದಯಮಾಡಿ ಓದಿ ನಮ್ಮ ಸಂಬಂಧಿಕರಲ್ಲಿರುವ ಸಾಧಕರನ್ನು ಗುರುತಿಸೋಣ.ಗ್ರಾಮ ದೇವತೆ ಶ್ರೀದುರ್ಗಾಪರಮೇಶ್ವರಿಯು ಶ್ರೀ ರಾಮಭಟ್ಟರಿಗೂ ಅವರ ಕುಟುಂಬಕ್ಕೂ ಧೀರ್ಘಾಯುಷ್ಯವನ್ನೂ , ಆನಂದ ಆರೋಗ್ಯವನ್ನೂ ಕರುಣಿಸಲೆಂದು ಪ್ರಾರ್ಥಿಸುವೆ. ಸಾಧನೆ ಎಂದಾಗ ಹತ್ತಾರು ಗ್ರಂಥಗಳನ್ನು ಬರೆದಿರಬೇಕು, ಅತ್ಯಂತ ಉನ್ನತ ಹುದ್ಧೆಯಲ್ಲಿರಬೇಕು, ಎಂಬ ಭಾವನೆ ಏನೂ ಬೇಡ.ನಿಮ್ಮ ಕುಟುಂಬದಲ್ಲಿ ಯಾರಾದರೂ ಸಂಗೀತಗಾರರೇ, ಕ್ರೀಢಾಪಟುಗಳೇ, ನೃತ್ಯ ಕಲಾವಿದರೇ, ಉತ್ತಮ ಭಾಷಣಕಾರರೇ......ಯಾರನ್ನು ನಮ್ಮ ಬಂಧುಗಳಿಗೆ ಪರಿಚಯಿಸಬೇಕೆಂಬ ಆಸೆ ಇದೆಯೋ ಅವರಿಗೆಲ್ಲಾ ಸ್ವಾಗತವಿದೆ.
-ಹರಿಹರಪುರಶ್ರೀಧರ್

ಸಾಧನಾ ಪಂಚಕಮ್-ಭಾಗ -10

33 ಏಕಾಂತೇ ಸುಖಮಾಸ್ಯತಾಮ್
-ಏಕಾಂತದ ಬದುಕನ್ನು ಆಶ್ರಯಿಸು
34. ಪರತರೇ ಚೇತ: ಸಮಾಧೀಯತಾಮ್
-ಚಿತ್ತವನ್ನು ಪರಮಾತ್ಮನಲ್ಲಿ ಲೀನಗೊಳಿಸು



ಇತಿಹಾಸ ಸಂಶೋಧಕ ಶ್ರೀ ಬಿ.ಎಸ್. ರಾಮಭಟ್ಟರ ಪರಿಚಯ


ನಮ್ಮ ತಂದೆಯವರಾದ ಶ್ರೀ ಬಿ.ಎಸ್. ರಾಮಭಟ್ಟರು ಹರಿಹರಪುರದ ದಿವಂಗತ ಬಿ.ಎನ್.ರಾಮಚಂದ್ರಯ್ಯನವರ ಬೀಗರು. ವಯಸ್ಸು ೮೨ವರ್ಷ . ಬೊಬ್ಬೂರುಕಮ್ಮೆ ಪಂಗಡಕ್ಕೆ ಸೇರಿದವರು. ಇವರ ಮನೆತನಕ್ಕೆ ಏಕಸಂತೆ ಎಂದು ಪ್ರಶಸ್ತಿ ಬಂದಿದೆ. ನಮ್ಮ ತಾಯಿಯವರ ಹೆಸರು ಬಿ. ಆರ್. ನಾಗರತ್ನ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ಮೊದಲನೆಯ ಮಗಳು ನಾನು [ಬಿ. ಆರ್. ವಿಜಯ.] ಬಿ.ಎಸ್.ಸಿ. ಪದವೀಧರೆ. ಶಿವಮೊಗ್ಗದ ನೀರಾವರಿ ಇಲಾಖೆಯ ಕೆಲಸ ನಿರ್ವಹಿಸುತ್ತಿದ್ದೇನೆ. ನಮ್ಮ ಮನೆಯವರು ಬಿ. ಆರ್. ಶ್ರೀಕಂಠಮೂರ್ತಿ, ಇವರು ತಹಶೀಲ್ದಾರ್‌ರಾಗಿ ಶಿವಮೊಗ್ಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಎರಡನೆಯ ಮಗಳು ಬಿ. ಆರ್. ಪದ್ಮ., ಇವಳು ಬಿ.ಕಾಂ. ಪದವೀಧರೆ. ಐ.ಜಿ.ಪಿ. ಕಛೇರಿ, ಬೆಂಗಳೂರು ಇಲ್ಲಿ ಕ್ಯಾಷಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಳೆ. ಇವಳ ಮನೆಯವರಾದ ಹೆಚ್,ಎಸ್, ಪದ್ಮನಾಭಜೋಯ್ಸ್ ಇವರು ಡೈರೆಕ್ಟರೇಟ್ ಆಫ್ ಆಯುಷ್, ಬೆಂಗಳೂರು ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿಗೂ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ದಾರೆ.

ನಮ್ಮ ತಂದೆಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿದ್ದು, ಸರಕಾರವು ಇವರಿಗೆ ಸ್ವಾತಂತ್ರ್ಯ ಹೋರಾಟಗಾರರ ಗೌರವ ಧನ ನೀಡುತ್ತಿದೆ. ಇವರು ಕ್ಷೇತ್ರ ಕಾರ್ಯಗಳ ಮೂಲಕ ಹಲವಾರು ಐತಿಹಾಸಿಕ ಅವಶೇಷಗಳನ್ನು ಶೋಧಿಸಿ ಇವುಗಳ ಬಗ್ಗೆ ಲೇಖನಗಳನ್ನು ಪ್ರಕಟಿಸಿರುತ್ತಾರೆ. ೮೨ ವರ್ಷಗಳ ವಯಸ್ಸಿನಲ್ಲಿ ಈಗಲೂ ಸಹ ಸಾಹಿತ್ಯ ಮತ್ತು ಐತಿಹಾಸಿಕ ಕ್ಷೇತ್ರದಲ್ಲಿ ನಿರತರು. ದೂರದರ್ಶನದಲ್ಲಿ ಇವರ ಸಂದರ್ಶನಗಳು ನಡೆದಿವೆ. ಭದ್ರಾವತಿ ಆಕಾಶವಾಣಿಯಲ್ಲೂ ಇವರ ಹಲವಾರು ಭಾಷಣಗಳು, ಎರಡು ರೂಪಕಗಳು ಒಂದು ನಾಟಕ ಪ್ರಸಾರವಾಗಿದೆ. ಪಿ.ಹೆಚ್.ಡಿ ವಿದ್ಯಾರ್ಥಿಗಳು ಇತಿಹಾಸದ ಬಗ್ಗೆ ವಿವರ ಪಡೆದುಕೊಳ್ಳಲು ಇವರ ಹತ್ತಿರ ಈಗಲೂ ಬರುತ್ತಿದ್ದಾರೆ. ಅಮೆರಿಕಾದ ಒಬ್ಬಳು ವಿದ್ಯಾರ್ಥಿ ಭಾರತದಲ್ಲಿ ಪಿ.ಹೆಚ್.ಡಿ ಪಡೆಯಲು ಬಂದಿದ್ದು, ಅವರು ನಮ್ಮ ತಂದೆಯವರ ಹತ್ತಿರ ಬಂದು ಇತಿಹಾಸದ ಬಗ್ಗೆ ತಮಗೆ ಬೇಕಾದ ವಿಷಯಗಳನ್ನು ಪಡೆದು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕ ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೆ ಶಾಸನಗಳ ಸಂಗ್ರಹಣಾ ಕಾರ್ಯಗಳನ್ನು ಮಾಡಿರುತ್ತಾರೆ.

ವಿವರಗಳನ್ನು ಹಾಗೂ ಅವರು ಮಾಡಿದ ಸಾಧನೆಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಕೆಳಗೆ ಹಾಕಿರುತ್ತೇನೆ.
೧ ಹೆಸರು : ಬಿ.ಎಸ್. ರಾಮಭಟ್ಟ
೨ ಶಿಕ್ಷಣ : ಎಂ.ಎ. ಬಿ.ಎಡ್. ಆರ್. ಬಿ. ವಿ
೩ ಉದ್ಯೋಗ : ನಿವೃತ್ತ ಅಧ್ಯಾಪಕ ( ನಿವೃತ್ತಿ-೧೯೮೮)
೪ ಹುಟ್ಟಿದ ದಿನಾಂಕ : ೧೦-೬-೧೯೨೯
೫ ವಯಸ್ಸು : ೮೨ ವರ್ಷ
೬ ಹುಟ್ಟಿದ ಸ್ಥಳ : ತೀರ್ಥಹಳ್ಳಿ ತಾ. ಮೇಗರವಳ್ಳಿ ಬಳಿಯ ಗನವಳ್ಳಿ-ಅಗಳಿಬೈಲು
೭ ವಾಸಸ್ಥಳ : ಶಿವಮೊಗ್ಗ
೮ ವಿಳಾಸ : ಬಿ.ಎಸ್. ರಾಮಭಟ್ಟ, ‘ ಪದ್ಮಶ್ರೀ ‘ ೧೩೯ ಇ, ೩ ನೇ ಕ್ರಾಸ್, ಗೋಪಾಳಗೌಡ ಬಡಾವಣೆ, ಗೋಪಾಳ, ಶಿವಮೊಗ್ಗ-೫೭೭೨೦೫.
೯ ಫೋನ್ ನಂ. : ೦೮೧೮೨-೨೫೫೯೭೪
೧೦ ಸ್ವಾತಂತ್ರ್ಯ ಹೋರಾಟಗಾರ : ಸರಕಾರದಿಂದ ಗೌರವಧನ ಪಡೆಯುತ್ತಿರುತ್ತಾರೆ
೧೧ ಪ್ರಶಸ್ತಿ : ಶ್ರೀಮದ್ ರಂಭಾಪುರಿ ಮಹಾಸಂಸ್ಥಾನ ಮಠ, ಬಾಳೆಹೊನ್ನೂರು ಇವರಿಂದ ‘ ಸಾಹಿತ್ಯ ನಿಧಿ ‘ ಪ್ರಶಸ್ತಿಲಭಿಸಿದೆ.
ಸನ್ಮಾನ ಪತ್ರಗಳು : ನಗರ ಸಭೆ, ಶಿವಮೊಗ್ಗ
ವಿಪ್ರ ಟ್ರಸ್ಟ್, ಶಿವಮೊಗ್ಗ
೧೨ ಸಂಘ ಸಂಸ್ಥೆಗಳು :
೧) ಆಜೀವ ಸದಸ್ಯ : ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
೨) ಆಜೀವ ಸದಸ್ಯ : ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು
೩) ಆಜೀವ ಸದಸ್ಯ : ಕರ್ನಾಟಕ ಸಂಘ, ಶಿವಮೊಗ್ಗ
ಸಾಮಾಜಿಕ ಸೇವೆ
೧) ಸ್ಕೌಟ್ಸ್ : ಶಾಲಾ ಕಾಲೇಜುಗಳಲ್ಲಿ ಸ್ಕೌಟ್ಸ್ ಚಟುವಟಿಕೆಗಳು ೧೯೭೦-೧೯೮೦
೨) ಸೇವಾದಳ : ೧೯೬೮-೧೯೮೦
೩) ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ : ೧೯೭೦-೧೯೮೦

ಪ್ರಕಟವಾಗಿರುವ ಗ್ರಂಥಗಳು
ಹೆಸರು ಪ್ರಕಾಶಕರು ವರ್ಷ
೧ ಬಾಳಿನ ಬಯಕೆ ಎಸ್.ಎಸ್.ಎನ್. ಬುಕ್ ಡಿಪೋ, ಸಿಟಿ ಮಾರ್ಕೆಟ್, ಬೆಂಗಳೂರು ೧೯೯೬
೨ ಅಸ್ತಮಾನ ಶಿವಮೊಗ್ಗ ಪ್ರಿಂಟರ‍್ಸ್, ದುರ್ಗಿಗುಡಿ, ಶಿವಮೊಗ್ಗ ೧೯೮೫
೩ ನಗರ ಪ್ರಾಂತ್ಯದ ರೈತರ ಬಂಡಾಯ ದೀಪಕ್ ಪ್ರಕಾಶನ, ಶಿವಮೊಗ್ಗ ೧೯೯೬
೪ ಶಿವಮೊಗ್ಗ ಜಿಲ್ಲೆಯ ಸಂಗೀತ ಪರಂಪರೆ ಶ್ರೀ ರಾಮ ಸೇವಾ ಸಮಿತಿ, ಶಿವಮೊಗ್ಗ ೨೦೦೧
೫ ಶಿವಮೊಗ್ಗ ಜಿಲ್ಲೆಯ ಇತಿಹಾಸ ಸಂಸ್ಕೃತಿ ರಾಷ್ಟ್ರೀಯ ಶಿಕ್ಷಣ ಸಮಿತಿ, ಶಿವಮೊಗ್ಗ ೨೦೦೧
೬ ಬೆಳಗುತ್ತಿಯ ಅರಸೊತ್ತಿಗೆ ಅರಸು ಪ್ರಕಾಶನ, ಶಿವಮೊಗ್ಗ ೨೦೦೪
೭ ಕನಸಿನ ಬುತ್ತಿ ಏಕಸಂತೆ ಪ್ರಕಾಶನ, ಶಿವಮೊಗ್ಗ ೨೦೦೬
೮ ವಿಪ್ರ ಪ್ರಾಚೀನ ಪರಂಪರೆ ವಿಪ್ರ ಟ್ರಸ್ಟ್, ಶಿವಮೊಗ್ಗ ೨೦೦೮
೯ ಶಿವಮೊಗ್ಗ ನಗರದ ಇತಿಹಾಸ ದರ್ಶನ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೨೦೦೮
೧೦ ಮಲೆನಾಡಿನ ಜೈನ ದಾರ್ಶನಿಕ ನೆಲೆಗಳು ಮತ್ತು ಜಿನಮುನಿಗಳು ಕನಕಗಿರಿ ಶ್ರೀ ಜೈನ ಮಹಾಸಂಸ್ಥಾನ ಮಠ( ಚಾಮರಾಜನಗರ ಜಿಲ್ಲೆ) ೨೦೧೧



ಸಂಪಾದಿತ ಗ್ರಂಥಗಳು

೧ ಕೆಳದಿ ಸಂಸ್ಥಾನ ಸಮಗ್ರ ಅಧ್ಯಯನ ಡಾ ಎಂ.ಎಂ. ಕಲಬುರ್ಗಿ, ಬಿ.ಎಸ್. ರಾಮಭಟ್ಟ ಜಗದ್ಗುರು ಶ್ರೀ ಮುರುಘರಾಜೇಂದ್ರಮಠ, ಆನಂದಪುರ ೧೯೯೦
೨ ಶಿವಶ್ರೀ ಬಿ.ಎಸ್. ರಾಮಭಟ್ಟ ಜಗದ್ಗುರು ಶ್ರೀ ಮುರುಘರಾಜೇಂದ್ರಮಠ, ಆನಂದಪುರ ೧೯೯೦
೩ ಸಿಮೊಗೆ ಬಿ.ಎಸ್. ರಾಮಭಟ್ಟ ಡಾ. ಶ್ರೀಕಂಠಕೊಡಿಗೆ ಪ್ರೊ. ನಟರಾಜ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ ೨೦೦೮
೪ ಶಿವಮೊಗೆಯ ಸಿರಿ ಟಿ.ಎನ್. ನಾರಾಯಣಶಾಸ್ತ್ರಿ ಬಿ.ಎಸ್. ರಾಮಭಟ್ಟ ವಿಪ್ರ ಟ್ರಸ್ಟ್, ಶಿವಮೊಗ್ಗ ೨೦೦೮
ಪ್ರಕಟವಾಗಿರುವ ಲೇಖನಗಳು
ಹೆಸರು ಪ್ರಕಾಶಕರು ವರ್ಷ
೧ ಪ್ರರ್ಣಯ್ಯನವರ ಕಾರ್ಯಭಾರ ತಾಯಿನಾಡು ಪತ್ರಿಕೆ ೧೯೬೨
೨ ಬಂದನಾ ಹುಲಿರಾಯನು ಸುಧಾ ವಾರಪತ್ರಿಕೆ ೧೯೭೨
೩ ಕುಂದಾದ್ರಿ ತಾಯಿನಾಡು ಪತ್ರಿಕೆ ೧೯೮೧
೪ ಭಗ್ನಾವಶೇಷಗಳ ಬಿದನೂರು ಉದಯವಾಣಿ ಪತ್ರಿಕೆ ೧೯೮೧
೫ ಮುನಿವೃಂದ ಯಾತ್ರಿಕ ೧೯೮೪
೬ ಅವನತಿಯ ಅಂಚಿನಲ್ಲಿ ಐತಿಹಾಸಿಕ ಪ್ರಜ್ಞೆ ಯಾತ್ರಿಕ ೧೯೮೪
೭ ಮಹಾ ಚೇತನ ಸ್ಮರಣ ಸಂಚಿಕೆ ೧೯೮೦
೮ ಪ್ರವಾಸ-ಚೈತನ್ಯ ಸ್ವರೂಪಿ ಯಾತ್ರಿಕ ೧೯೮೫
೯ ಸಹ್ಯಾದ್ರಿಯ ಶ್ರೇಣಿಗಳು ಯಾತ್ರಿಕ ೧೯೮೫
೧೦ ಶಿವಮೊಗ್ಗ ಜಿಲ್ಲೆಯ ಜನಮೇಜಯನ ಶಾಸನಗಳು ಉದಯವಾಣಿ ೧೯೮೫
೧೧ ಭವ್ಯ ಪರಂಪರೆಯ ಶಿವಮೊಗ್ಗ ಬೃಹಸ್ಪತಿವಾಣಿ ೧೯೭೭
೧೨ ಶಾಂತಿಸಾಗರ ಉದಯವಾಣಿ ೧೯೮೦
೧೩ ಅಚ್ಚುತಪ್ರೇಕ್ಷರ ಪರಂಪರೆ ಕನ್ನಡಪ್ರಭ ೧೯೮೦
೧೪ ಪ್ರವಾಸಿ ಕೇಂದ್ರ ಕೊಡಚಾದ್ರಿ ಯಾತ್ರಿಕ ೧೯೮೬
೧೫ ಮೃಗವಧೆ ಪ್ರಾಚೀನ ಕ್ಷೇತ್ರ ಯಾತ್ರಿಕ ೧೯೮೬
೧೬ ಅಳಿವಿನ ಅಂಚಿನಲ್ಲಿ ಭುವನಗಿರಿ ಯಾತ್ರಿಕ ೧೯೮೬
೧೭ ಮಹಾಚೇತನದ ಬದುಕಿನ ಯಾತ್ರೆ ಯಾತ್ರಿಕ ೧೯೮೬
೧೮ ತುಂಗೆ ಪಾವನತರಂಗೆ ಯಾತ್ರಿಕ ೧೯೮೫
೧೯ ಅಮ್ಮನಘಟ್ಟ ಯಾತ್ರಿಕ ೧೯೮೭
೨೦ ಗೊಂಡಾರಣ್ಯದ ಗಿರಿಗಳು ಯಾತ್ರಿಕ ೧೯೮೭
೨೧ ಹಕ್ಕುಗಳಿಗೆ ಬಡಿದಾಡುವೆವು ನಾವು ಯಾತ್ರಿಕ ೧೯೮೧
೨೨ ವನಸಿರಿಯ ಮಡಿಲಿನ ಇಕ್ಕೇರಿ ಯಾತ್ರಿಕ ೧೯೮೭
೨೩ ಮಲೆಯಶಂಕರ ಯಾತ್ರಿಕ ೧೯೮೭
ಭಾರತದ ಭವಿಷ್ಯವನ್ನು ರೂಪಿಸಿದ ವಾಯವ್ಯದ ಕಣಿವೆಗಳು ಯಾತ್ರಿಕ ೧೯೮೮ ೧೯೮೭
೨೫ ಹರತಾಳು ಯಾತ್ರಿಕ ೧೯೮೭
೨೬ ಮಲೆನಾಡಿನ ರೈತರ ಹೋರಾಟ ಪ್ರಜಾವಾಣಿ ಪತ್ರಿಕೆ ೧೯೮೭
೨೭
೨೮ ಧರ್ಮ-ಸರ್ವವ್ಯಾಪಿ ಯಾತ್ರಿಕ ೧೯೮೬
೨೯ ಹರಿಹರಪುರ ಯಾತ್ರಿಕ ೧೯೮೮
೩೦ ವೇದಕಾವ್ಯ ಸಂಹಿತೆಯಲ್ಲಿ ಸೀತ ಯಾತ್ರಿಕ ೧೯೮೮
೩೧ ಪ್ರಾಚೀನ ಭಾರತದ ಷೋಡಶ ಮಹಾ ಜನಪದಗಳು ಯಾತ್ರಿಕ ೧೯೮೮
೩೨ ಭಗ್ನಾವಶೇಷಗಳ ಬಂದಳಿಕೆ ಉದಯವಾಣಿ ೧೯೮೯
೩೩ ಬುಕ್ಕರಾಯನ ತೆಲುಗು ಶಾಸನ ಉದಯವಾಣಿ ೧೯೮೮
೩೪ ಕುರುವದ ಅಪೂರ್ವ ಶಿಲ್ಪಗಳು ಪ್ರಜಾವಾಣಿ ೧೯೯೦
೩೫ ಪಾಳು ಬಿದ್ದ ಸಿದ್ದೇಶ್ವರ ದೇವಾಲಯ ಕನ್ನಡಪ್ರಭ ೧೯೯೦
೩೬ ಜ್ಯೋತಿಷ್ಯ ಅವ್ಶೆಜ್ಞಾನಿಕವೆ? ಋಷ್ಯಶೃಂಗ ೧೯೯೦
೩೭ ಮಂಡಳಿಯ ಇತಿಹಾಸ ಪ್ರಜಾಮತ ೧೯೯೧
೩೮ ಮಲೆನಾಡಿನ ಅಭಿವೃದ್ಧಿಗೆ ಮಾರ್ಗ ಪ್ರಜಾಮತ ೧೯೯೧
೩೯ ಗಣೇಶಾಯಿಣಿ ಕನ್ನಡಪ್ರಭ ೧೯೯೨
೪೦ ಕೆಳದಿ ಅರಸರ ಸಮಾಧಿಗಳು ಕನ್ನಡಪ್ರಭ ೧೯೯೨
೪೧ ಹವ್ಯಕ ಪರಂಪರೆ ಹೈವಪ್ರಭ ( ಸ್ಮರಣ ಸಂಚಿಕೆ) ೧೯೯೧
೪೨ ಕೆಳದಿ ಸಂಸ್ಥಾನದ ಆಡಳಿತ ಸ್ವರೂಪ ಶಿವಶ್ರೀ ೧೯೯೧
೪೩ ಕೆಳದಿರಾಣಿ ಚೆನ್ನಮ್ಮಾಜಿ ತರಳಬಾಳು ಹುಣ್ಣಿಮೆ ( ಸ್ಮರಣ ಸಂಚಿಕೆ) ೧೯೯೨
೪೪ ಶಿವಮೊಗ್ಗ ಜಿಲ್ಲೆಯ ಸಾಂಸ್ಕೃತಿಕ ಸಾಹಿತ್ಯ ವಿಕಾಸ ವಜ್ರಪಥ ( ಶಿವಮೊಗ್ಗ ಕರ್ನಾಟಕ ಸಂಘದ ಸ್ಮರಣ ಸಂಚಿಕೆ) ೧೯೯೩
೪೫ ಬಂಡೆ ( ಕವನ) ನಾವಿಕ ೧೯೯೫
೪೬ ಶಿವಮೊಗ್ಗ ಜಿಲ್ಲೆಯ ಶೈಕ್ಷಣಿಕ ಇತಿಹಾಸ ಜ್ಞಾನಾಮೃತ (ಕುವೆಂಪು ವಿಶ್ವವಿದ್ಯಾಲಯ ಸಂಪುಟ) ೧೯೯೫
೪೭ ಚೆಲುವ ರಂಗಪ್ಪ ಹೊನ್ನತೇರು (ಹೊನ್ನಾಳಿ ತಾ. ಕ.ಸಾ. ಪರಿಷತ್ತಿನ ಸ್ಮರಣ ಸಂಚಿಕೆ) ೧೯೯೫
೪೮ ಕೆಳದಿ ಅರಸು ಮನೆತನ ಸಾರಂಗಶ್ರೀ ೧೯೯೫
೪೯ ಪ್ರಗತಿ ಕಾಣದ ಪ್ರವಾಸೋದ್ಯಮ ಜನವಾರ್ತೆ ೧೯೯೬
೫೦ ಶಿವಪ್ಪನಾಯಕನ ಅರಮನೆ ಜನವಾರ್ತೆ ೧೯೯೬
೫೧ ಕರ್ನಾಟಕದ ಪ್ರಮುಖ ಮಾನಸ್ಥಂಭಗಳು ಜನವಾರ್ತೆ ೧೯೯೬
೫೨ ಮಲುಹಣ ಕನ್ನಡಪ್ರಭ ೧೯೯೬
೫೩ ಅಜಾಗರೂಕತೆ ಅನಾಹುತ ಜನವಾರ್ತೆ ೧೯೯೬
೫೪ ಕುರುವ ಕಾಳಾಮುಖ ತವರು ಜನವಾರ್ತೆ ೧೯೯೬
೫೫ ಜ್ಯೋತಿರ್ಮಯ ದೀಪಾವಳಿ ಜನವಾರ್ತೆ ೧೯೯೬
೫೬ ಕರ್ನಾಟಕ ಏಕೀಕರಣದ ಇತಿಹಾಸ ಜನವಾರ್ತೆ ೧೯೯೬
೫೭ ವರದಕ್ಷಿಣೆಯ ಪಿಡುಗಿಗೆ ಪರಿಹಾರವಿಲ್ಲವೆ? ಜನವಾರ್ತೆ ೧೯೯೬
೫೮ ಈಶಾನ್ಯದ ಅಪಾಯಕಾರಿ ಉಲ್ಫಾಸಮಸ್ಯೆ ಜನವಾರ್ತೆ ೧೯೯೬
೫೯ ಕೃತಿಕಾರ ಕುಕ್ಕೆ ಸೀತಾರಾಮಶಾಸ್ತ್ರಿ ಜನವಾರ್ತೆ ೧೯೯೬
೬೦ ಮಹಾ ಮುತ್ಸುದ್ಧಿ ಶ್ರೀ ಕೃಷ್ಣ ಜನವಾರ್ತೆ ೧೯೯೬
೬೧ ಅನಾಥಳಾಗಿರುವ ಅಕ್ಕಮ್ಮ ನಾವಿಕ ೧೯೯೬
೬೨ ಮರಳಿ ಬಂದ ಯುಗಾದಿ ನಾವಿಕ ೧೯೯೭
೬೩ ಶಿವಮೊಗ್ಗದ ಬೆಕ್ಕಿನಕಲ್ಮಠ ಜನವಾರ್ತೆ ೧೯೯೭
೬೪ ನೈಸರ್ಗಿಕ ಕೃಶಿಯ ಹರಿಕಾರ ಪುಕುಒಕ ಜನವಾರ್ತೆ ೧೯೯೭
೬೫ ಕಾಶಿಪುರದ ಶಿಲಾಶಾಸನ ನಾವಿಕ ೧೯೯೭
೬೬ ಕೆಳದಿಕಾಲದ ಜೈನ ಧರ್ಮ ಶ್ರೀ ಗುಂಡಾಜೋಯ್ಸ್ ಅಭಿನಂದನಾ ಗ್ರಂಥ ೧೯೯೭
೬೭ ಮಹಾದಾರ್ಶನಿಕ ರಾಧಾಕೃಷ್ಣನ್ ಜನವಾರ್ತೆ ೧೯೯೮
೬೮ ಅಡಗಿರುವ ಆದಿ ರಂಗನಾಥಸ್ವಾಮಿ ಜನವಾರ್ತೆ ೧೯೯೮
೬೯ ಮರ ( ಕವಿತೆ) ಜನವಾರ್ತೆ ೧೯೯೮
೭೦ ವಿಜಯನಗರ ಸಾಮ್ರಾಜ್ಯ ಕುತೂಹಲಕರ ಆಧಾರ ಉದಯವಾಣಿ ೧೯೯೯
೭೧ ಮಕರ ಸಂಕ್ರಾಂತಿ ಸಂಭ್ರಮ ಜನವಾರ್ತೆ ೧೯೯೯
೭೨ ನಮ್ಮ ಮನೆ ಶಿವಮೊಗ್ಗ ಹೌಸಿಂಗ್ ಸೊಸೈಟಿ ಸ್ಮರಣ ಸಂಚಿಕೆ ೨೦೦೦
೭೩ ಗವಿ ಮಠ:ಐತಿಹಾಸಿಕ ಹಿನ್ನೆಲೆ ತರಳಬಾಳು ಸಂಚಿಕೆ ೨೦೦೦
೭೪ ಶಿವಮೊಗ್ಗ ನಗರದ ಕೈಗಾರಿಕಾ ಇತಿಹಾಸ ನಗರಸಭೆ ಶತಮಾನೋತ್ಸವ ಸಂಚಿಕೆ ೨೦೦೦
೭೫ ಹೀಗಿತ್ತು ಶಿವಮೊಗ್ಗ ನಾವಿಕ ೨೦೦೦
೭೬ ೧೭೮ ವರ್ಷಗಳ ಹಿಂದಿನ ಅಂಚೆಕಾರ್ಡು ನಾವಿಕ ೨೦೦೦
೭೭ ಒಂದು ಅಭೂತಪೂರ್ವ ಪಟ್ಟಾಭಿಷೇಕ ಮಹೋತ್ಸವ ಸಂಯುಕ್ತ ಕರ್ನಾಟಕ ೨೦೦೦
೭೮ ಶಾಸನದಲ್ಲಿ ನೆಲೆನಿಂತ ಸೌಳಂಗ ನಾವಿಕ ೨೦೦೦
೭೯ ದೆಹಲಿಯ ಮೆಹರೂಲಿ ಸ್ಥಂಭ ವಿಜಯ ಕರ್ನಾಟಕ ೨೦೦೦
೮೦ ತಾಳಿಕೋಟೆ ಕದನ ಕರ್ಮಕಥೆ ಕಸ್ತೂರಿ ೨೦೦೧
೮೧ ಕೆಳದಿ ಅರಸೊತ್ತಿಗೆಯ ಕೊನೆಯ ದಿನ ಕಸ್ತೂರಿ ೨೦೦೧
೮೨ ಆತ್ಮಾರ್ಪಣೆಯ ಕ್ರೂರ ಸಂಪ್ರದಾಯ ಕಸ್ತೂರಿ ೨೦೦೨
೮೩ ಜೈನಾಗಮಗಳಲ್ಲಿ ಮೂರ್ತಿಶಿಲ್ಪ ಕಸ್ತೂರಿ ೨೦೦೦
೮೪ ಬುಡಕಟ್ಟು ಜನಾಂಗದ ಕುರುಬರು ಕಸ್ತೂರಿ ೨೦೦೩
೮೫ ಪುರಂದರದಾಸರ ಜನ್ಮ ದಿನ ನಾವಿಕ ೨೦೦೪
೮೬ ಮುದ್ದೇನಹಳ್ಳಿ ಸ್ಮಾರಕಗಳು ವಿಜಯ ಕರ್ನಾಟಕ ೨೦೦೪
೮೭ ಬುದ್ಧನ ನಾಡಿನ ಬೌದ್ಧ ಯಾತ್ರಿಕರು ಕಸ್ತೂರಿ ೨೦೦೪
೮೮ ಮಲೆನಾಡಿನ ಶಾಸನೋಕ್ತ ಕವಿಗಳು ಕಸ್ತೂರಿ ೨೦೦೪
೮೯ ಕಾಳಾಮುಖರು ಒಂದು ಅಧ್ಯಯನ ಕಸ್ತೂರಿ ೨೦೦೩
೯೦ ಕುರುಕ್ಷೇತ್ರ ಕದನದ ಕರ್ಮಕಥೆ ಮಲ್ಲಾರ ೨೦೦೫
೯೧ ದಂತಕಥೆಯಾದ ದಾನವರು ಮಲ್ಲಾರ ೨೦೦೫
೯೨ ಶಿವಮೊಗ್ಗ ರೈಲ್ವೆ ಯೋಜನೆ ನಾವಿಕ ೨೦೦೬
೯೩ ಮಹಾಭಾರತದಲ್ಲಿ ಬಲರಾಮ ಮಲ್ಲಾರ ೨೦೦೬
೯೪ ಮಹದಾಜಿ ಸಿಂಧ್ಯನ ಅಂತಿಮ ದಿನ ಕಸ್ತೂರಿ ೨೦೦೬
೯೫ ಶಾಸನದೇವತೆ ಪದ್ಮಾವತಿ ಮಲ್ಲಾರ ೨೦೦೭
೯೬ ಪೊಂಬುಚದ ಪಂಚಕೂಟ ಬಸದಿ ಕಸ್ತೂರಿ ೨೦೦೭
೯೭ ಸಪ್ತಸಿಂಧುವಿನ ಪುರಾತನರು ಮಲ್ಲಾರ ೨೦೦೭
೯೮ ಕೈಕೆ ಮಲ್ಲಾರ ೨೦೧೦
೯೯ ಗೋರಖನಾಥ ಮಲ್ಲಾರ ೨೦೧೦
೧೦೦ ವಿಜಯನಗರದ ಪೂರ್ವೇತಿಹಾಸ ಮಲ್ಲಾರ ೨೦೧೧
೧೦೧ ಮಾರಾಟವಾಗುತ್ತಿದ್ದ ಮಹಿಳೆಯರು ಕರವೇನಲ್ನುಡಿ ೨೦೧೧
೧೦೨ ಮೈಸೂರು ಸಂಸ್ಥಾನದ ಸಾರಿಗೆ ಸಂಪರ್ಕದ ರೋಚಕದ ಕಥೆ ನಾವಿಕ ೨೦೦೬
೧೦೩ ಜಲದಾಹ ನಾವಿಕ ೨೦೧೦
೧೦೪ ಪೊಂಬುಚದ ಕಮಠೇಶ್ವರ ದೇವಾಲಯ ಮಲ್ಲಾರ ೨೦೦೭
೧೦೫ ಕುಮಾರವ್ಯಾಸ ಭಾರತದಲ್ಲಿ ಗಾಯಾಳುಗಳ ಚಿಕಿತ್ಸೆ ತಾಂತ್ರಿಕಥೆ ಸಂಯುಕ್ತ ಕರ್ನಾಟಕ ೨೦೦೫
೧೦೬ ದಂತಕಥೆಯಾದ ಅಸುರ ದೈತ್ಯ ದಾನವರು ಮಲ್ಲಾರ ೨೦೦೫
೧೦೭ ದೇವಾಲಯಗಳು ಮಲ್ಲಾರ ೨೦೦೮
೧೦೮ ಹಿಮಾಲಯದ ಹೆಬ್ಬಾಗಿಲು ಹೃಶಿಕೇಶ ಸಂಯುಕ್ತ ಕರ್ನಾಟಕ ೨೦೦೭
೧೦೯ ವೇದಕಾಲೀನ ರುದ್ರ ಮಲ್ಲಾರ ೨೦೦೮
ಪುಸ್ತಕ ವಿಭಾಗ
೧ ಶ್ರೀರಂಗಪಟ್ಟಣದ ಪತನ ಕಸ್ತೂರಿ ೧೯೮೮
೨ ನಗರ ಪ್ರಾಂತ್ಯದ ರೈತರ ಬಂಡಾಯ ಕಸ್ತೂರಿ ೧೯೮೯
೩ ಅನ್ವೇಷಣೆಯ ಹಾದಿಯಲ್ಲಿ ಕಸ್ತೂರಿ ೧೯೯೫
೪ ಪಶ್ಚಿಮ ಕರಾವಳಿಯಲ್ಲಿ ಪೋರ್ಚುಗೀಸರು ಕಸ್ತೂರಿ ೧೯೯೯
೫ ದಿವಾನ್ ಪ್ರರ್ಣಯ್ಯನವರು ಕಸ್ತೂರಿ ೨೦೦೦
೬ ಕೆಳದಿ ಅರಸೊತ್ತಿಗೆಯ ಕೊನೆಯ ದಿನಗಳು ಕಸ್ತೂರಿ ೨೦೦೧



ಪ್ರಬಂಧಗಳು
೧ ವೃಕ್ಷ ಪುರಾಣಂ ಋಷ್ಯಶೃಂಗ ೧೯೯೬
೨ ನಾಸಿಕ ಪುರಾಣಂ ಜನವಾರ್ತೆ ೨೦೦೦
೩ ದಿಬ್ಬಣದ ಗಾಡಿಗಳು ಕಸ್ತೂರಿ ೨೦೦೨
೪ ಆತಿಥ್ಯ ವಿಜಯ ಕರ್ನಾಟಕ ೨೦೧೦
೫ ಸಂತೆ ಸಂಯುಕ್ತ ಕರ್ನಾಟಕ ೨೦೧೦
೬ ಜಮಾಬಂಧಿ ವಿಜಯ ಕರ್ನಾಟಕ ೨೦೧೦
೭ ಅವಸಾನದ ಅಂಚಿನಲ್ಲಿರುವ ಹಳೆ ಡಿ.ಸಿ. ಕಟ್ಟಡ ನಾವಿಕ ದಿನ ಪತ್ರಿಕೆ ೨೦೦೭
ಸಂಶೋಧನಾ ಲೇಖನಗಳು
೧ ಕಲ್ಮನೆ-ಉಜ್ಜಯಿನಿ ಕ್ಷತ್ರಪರ ನೆಲೆ-ನಾಣ್ಯಗಳು-ಶೋಧನೆ ನಾವಿಕ ೨೦೦೫
೨ ತೀರ್ಥಹಳ್ಳಿ-ಜೈನಶಿಲ್ಪ ನಾವಿಕ ೨೦೦೬
೩ ಶಿವಮೊಗ್ಗದ ಮಂಡಳಿಯ ಕಲ್ಲೂರು ಗುಡ್ಡದ ಶಾಸನ ಇತಿಹಾಸ ದರ್ಶನ ೨೦೦೯
೪ ಪಾಳು ಬಿದ್ದ ಕೆಳದಿ ಅರಸರ ಸಮಾಧಿಗಳನ್ನು ಕಂಡುಹಿಡಿದು ವಿವರಗಳನ್ನು ನೀಡಿದ್ದು, ಜೀರ್ಣೋದ್ಧಾರಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಿರುತ್ತಾರೆ.
೫ ಶಿಕಾರಿಪುರ ತಾಲ್ಲೂಕ್ ಮುದ್ದನಹಳ್ಳಿಯ ಪ್ರಾಚ್ಯಾವಶೇಷಗಳ ಸಂಶೋಧನೆ
೬ ಕುರುವ ಕಾಳಾಮುಖರು
ಸಣ್ಣಕಥೆಗಳು
೧ ಶಾಪ ಜನವಾರ್ತೆ ೧೯೮೭
೨ ಕಡುಗಲಿ ನಾವಿಕ ೧೯೮೭
೩ ಅನಿರೀಕ್ಷಿತ ನಾವಿಕ ೧೯೮೮
೪ ಕಳಚಿತು ಕರ್ಮಬಂಧನ ನಾವಿಕ ೧೯೮೮
೫ ಮಾನಸ ನಾವಿಕ ೧೯೮೮
೬ ಅಕ್ಕಮಚೌಕಿ ತಾಯಿನಾಡು ೧೯೭೫
೭ ಚೆಂಗುಲಿ ನಾವಿಕ ೧೯೮೯
೮ ಗಿಡಮೂಲಿಕೆಗಳೆಡೆಯಲ್ಲಿ ಕಸ್ತೂರಿ ೧೯೮೨
೯ ಕಾರ್ನೇಲಿಯ ಮಂಗಳ ೧೯೮೨
೧೦ ಜೈನ ಕವಿತ್ರಿಯ ಜೀವನಗಾಥೆ ಕಸ್ತೂರಿ ೨೦೦೫
೧೧ ರಾವಣನಿಗೆ ಸೆರೆಯಾದ ಶ್ರೀರಾಮ ಮಲ್ಲಾರ ೨೦೦೭
೧೨ ಆತ್ಮಾಹುತಿ ಸಂಯುಕ್ತ ಕರ್ನಾಟಕ ೨೦೦೭
೧೩ ಪರಿವರ್ತನೆ ಸಂಯುಕ್ತ ಕರ್ನಾಟಕ ೨೦೦೮
೧೪ ಶಕುನ ಮಲ್ಲಾರ ೨೦೧೦
೧೫ ಮಹಾಮಂಥನ ಮಲ್ಲಾರ ೨೦೧೦
೧೬ ಅಗ್ರಪೂಜೆ ಶಿವಮೊಗ್ಗ ಟೈಮ್ಸ್ ೨೦೧೦

ವಿಮರ್ಶೆ
೧ ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ತಮಸೋಮ ೧೯೮೪
೨ ಪ್ರಾಚೀನ ಭಾರತದ ಯುದ್ಧ ಕಲೆ ಕಸ್ತೂರಿ ೨೦೦೬
೩ ಭೂಪಾಳಂ ಬದುಕು ಬರಹ ಬಳ್ಳೆಕೆರೆ ಹನುಮಂತಪ್ಪ(ಸಂಪಾದಕ) ೨೦೦
ಆಕಾಶವಾಣಿ
೧) ಪ್ರಸಾರವಾದ ರೂಪಕಗಳು - ೨
೨) ನಾಟಕ - ೧
೩) ಭಾಷಣಗಳು- ೨೫ ( ಸೇತುವೆ, ಶಿಲ್ಪ, ದಾನಧರ್ಮ ಬಹುರೂಪಿ ವಜ್ರಗಳು ಇತ್ಯಾದಿ)
ದೂರದರ್ಶನ
ಸಂದರ್ಶನ: ದೂರದರ್ಶನ - ಚಂದನ ಕಾರ್ಯಕ್ರಮ
೧) ಸಂದರ್ಶನ-೧ ೨೦೦೬
೨) ಈ ಟಿ.ವಿ, ಸುವರ್ಣ- ಛಾನಲ್ ನಲ್ಲಿ ಸಂದರ್ಶನ-೨
೨೦೧೦ ನೇ ವರ್ಷದಲ್ಲಿ ಇವರ ಪ್ರಕಟವಾದ ಬರಹಗಳನ್ನು ಸಂಗ್ರಹಿಸಿ, ವಿಂಗಡಿಸಿ ಒಂದು ಕೃತಿಯ ರೂಪವನ್ನು ನೀಡಿ ಇದಕ್ಕೆ ಗೊಂಚಲು‘ ಎಂಬ ಶೀರ್ಷಿಕೆಯನ್ನಿಟ್ಟಿದ್ದಾರೆ. ಈ ಗೊಂಚಲು ಕೃತಿಯನ್ನು ಕಂಪ್ಯೂಟರ್‌ಗೊಳಿಸಿದ್ದು ನಾನು ಎಂಬ ಹೆಮ್ಮೆ ನನಗಿದೆ.
ಇತ್ತೀಚೆಗೆ ಇವರು ರಚಿಸಿದ ‘ ಯ ವ ನಿ ಕ ‘ ಎಂಬ ನಾಟಕವನ್ನು ಭದ್ರಾವತಿ ಆಕಾಶವಾಣಿ ಕಲಾವಿದರು ಅಭಿನಯಿಸಿದ್ದು, ಇದು ಭದ್ರಾವತಿ ಆಕಾಶವಾಣಿಯಲ್ಲಿ ಈ ವಾರದಲ್ಲಿ ಪ್ರಸಾರವಾಗಲಿದೆ.
ಹೀಗೆ ಹಲವಾರು ಚಟುವಟಿಕೆಗಳಲ್ಲಿ ಈಗಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ವಿಜಯ ಶ್ರೀಕಂಠಮೂರ್ತಿ.

‘ ಏಕಸಂತೆ ‘


ನಮ್ಮ ತಂದೆಯವರಾದ ಬಿ.ಎಸ್. ರಾಮಭಟ್ಟರವರ ಪೂರ್ವಜರು, ಯಾರಾದರೂ ವೇದವನ್ನು ಒಂದು ಸಾರಿ ಹೇಳಿದ್ದನ್ನು ಕೇಳಿದರೆ, ಅದನ್ನು ಅದೇ ರೀತಿಯಲ್ಲಿ ಪುನರುಚ್ಛರಿಸುತ್ತಿದ್ದರಂತೆ. ಅದಕ್ಕೆ ಅವರ ಮನೆತನಕ್ಕೆ ‘ ಏಕಸಂತೆ ‘ ಎಂಬ ಪ್ರಶಸ್ತಿ ಬಂದಿತ್ತು ಎಂದು ಹೇಳುತ್ತಾರೆ. ಇದನ್ನು ( ಹನಸ್‌ಸಂತೆ ಎಂದೂ ಹೇಳುತ್ತಾರೆ ಎಂದು ಹೇಳಿದರು). ನಮ್ಮ ತಂದೆಯವರ ಅಣ್ಣನವರಿಗೆ ಏಕಸಂತೆ ನಾಗಾಭಟ್ಟ ಎಂದೇ ಹೆಸರಿತ್ತು.
ನಮ್ಮ ತಂದೆಯವರ “ ಏಕಸಂತೆ “ ಎಂಬ ವಿದ್ವಾಂಸರ ಮನೆತನದ ಪ್ರಶಸ್ತಿಯ ಹೆಸರನ್ನೇ ನಮ್ಮ ಬ್ಲಾಗ್‌ಗೆ ‘ ಏಕಸಂತೆ ‘ ಎಂದು ಹೆಸರಿಸಿದ್ದೇನೆ.
ವಿಜಯ ಶ್ರೀಕಂಠಮೂರ್ತಿ

ಬುಧವಾರ, ಜುಲೈ 20, 2011

ಸೋನಿಯಾ ಗಾ೦ಧಿ ಗೆ 3 ಪ್ರಶ್ನೆ

ಸೋನಿಯಾ ಗಾ೦ಧಿ ಒ೦ದು ಶಾಲೆಗೆ ಭೇಟಿ ಕೊಟ್ರು, ಒ೦ದು ಕ್ಲಾಸ್ ನಲ್ಲಿ ಬ೦ದು ಹೇಳಿದ್ರು...
ಮಕ್ಕಳೇ ನನ್ನಲ್ಲಿ ಏನಾದರು ಪ್ರಶ್ನೆ ಕೇಳಬೇಕೆ೦ದಿದ್ದರೆ ಕೇಳಿ.....
ಆ ಮಕ್ಕಳ ಮಧ್ಯದಿ೦ದ ’ರಾಮ’ ಅನ್ನೊ ಹುಡುಗ ಎದ್ದು ನಿ೦ತು ಕೇಳಿದ...ಮೇಡಮ್ ನಾನು ನಿಮಗೆ 3 ಪ್ರಶ್ನೆಗಳನ್ನು ಕೇಳುತ್ತೇನೆ..
1. ನೀವು ಪ್ರಧಾನಮ೦ತ್ರಿ ಹುದ್ದೆ ಏಕೆ ತಿರಸ್ಕರಿಸಿದಿರಿ...?
2. ರಾಮ್ ಲೀಲಾ ಮೈದಾನದಲ್ಲಿ ರಾಮ್ ದೇವ್ ಅವರನ್ನು ಬ೦ಧಿಸಲು ಅನುಮತಿ ನೀಡಿದವರಾರು..?
3. ಸ್ವಿಸ್ ಬ್ಯಾ೦ಕ್ ನಲ್ಲಿ ನಿಮ್ಮ ಕುಟು೦ಬದ ಎಷ್ಟು ಅಕೌ೦ಟ್ ಗಳಿವೆ...?
ಈ ಮೂರು ಪ್ರಶ್ನೆಗಳನ್ನು ಕೇಳುವಷ್ಟರಲ್ಲಿ ಶಾಲೆಯ ಇ೦ಟರ್ವೆಲ್ ಬೆಲ್ ಹೊಡೆಯಿತು....
ಮತ್ತೆ 10 ನಿಮಿಷದ ಬಿಡುವಿನ ನ೦ತರ ಸೋನಿಯಾ ಗಾ೦ಧಿ ಮತ್ತೆ ಅದೇ ತರಗತಿಗೆ ಬ೦ದು ಮತ್ತೆ ಅದೇ ಪ್ರಶ್ನೆ ಕೇಳಿದರು...ಯಾರಿಗಾದರು ಏನಾದರು ಪ್ರಶ್ನೆಗಳಿದ್ದರೆ ಕೇಳಿ ಎ೦ದು....
ಆಗ ’ಲಕ್ಷ್ಮಣ’ ಅನ್ನೋ ಹುಡುಗ ಎದ್ದು ನಿ೦ತು ...ಮೇಡಮ್ ನಾನು 5 ಪ್ರಶ್ನೆಗಳನ್ನು ಕೇಳುತ್ತೇನೆ.....
ಮೊದಲು ’ರಾಮ’ ಕೇಳಿದ ೩ ಪ್ರಶ್ನೆಗಳ ಜೊತೆ..
4. ಶಾಲೆಯ ಇ೦ಟರ್ವೆಲ್ ಬೆಲ್ 15 ನಿಮಿಷ ಮು೦ಚಿತವಾಗಿ ಹೊಡೆದಿದ್ದು ಮತ್ತು ಹೊಡೆಸಿದ್ದು ಯಾರು..?
5. ಈ ಮೊದಲು ಪ್ರಶ್ನೆ ಕೇಳಿದ ’ರಾಮ’ ನಾಪತ್ತೆ ಯಾಗಿದ್ದಾನೆ...! ಅವನೆಲ್ಲಿ...?!!!!!!!!

ಸಾಧನಾ ಪಂಚಕಮ್: ಭಾಗ -9




ಸಾಧನಾ ಪಂಚಕಂ -ಮೆಟ್ಟಲು- 29+30+31+32

29. ಶೀತೋತೋಷ್ಣಾದಿ ವಿಷಹ್ಯತಾಮ್
ಶೀತ-ಉಷ್ಣ ಇತ್ಯಾದಿಗಳನ್ನು ಸಹಿಸಿಕೊ
30. ನತು ವೃಥಾ ವಾಕ್ಯಂ ಸಮುಚ್ಚಾರ್ಯತಾಮ್
ಹಾಗೆಯೇ ಅನುಚಿತ/ಅನುಪಯುಕ್ತಮಾತುಗಳನ್ನು ಆಡದಿರು
31. ಔದಾಸೀನ್ಯಮಭೀಪ್ಸ್ಯತಾಮ್
ಉದಾಸೀನತೆಯ ನಿಸ್ಪೃಹ ದೃಷ್ಟಿಯನ್ನು ಹೊಂದು
32. ಜನಕೃಪಾನೈಷ್ಠುರ್ಯಮುತ್ಸೃಜಾಮ್
ದಯೆ ಅಥವಾ ಬಿರುನುಡಿಗೆ ಗಮನ ಕೊಡದಿರು

ಭಾನುವಾರ, ಜುಲೈ 17, 2011

ಉತ್ತಮ ಬಾಂಧವ್ಯದೆಡೆಗೆ

     ಮಿತ್ರ ಶ್ರೀಧರರ ಈ ತಾಣ 'ನಮ್ಮೂರು ನಮ್ಮನೆ ನಮ್ ಜನ' ಅವರ ಸದಭಿರುಚಿಗೆ ಸಾಕ್ಷಿಯಾಗಿದೆ. ನಮ್ಮವರನ್ನು ಸದ್ವಿಚಾರದೆಡೆಗೆ ಒಯ್ಯುವ ಕಿಂಚಿತ್ ಪ್ರಯತ್ನ ನಮ್ಮ ಕುಟುಂಬದವರಿಂದಲೂ ನಡೆಯುತ್ತಿದೆ. ಪ್ರತಿ ವರ್ಷ ಎಲ್ಲಾ ಬಂಧು-ಬಳಗ-ಮಿತ್ರರನ್ನು ಸೇರಿಸಿ ಒಳ್ಳೆಯ ವಿಚಾರಗಳನ್ನು ಹರಿಬಿಡುವ, ಬಾಂಧವ್ಯಗಳನ್ನು ಬೆಸೆಯುವ ಪ್ರಯತ್ನ ನಡೆಯುತ್ತಿದೆ. ಕೆಳದಿ ಕವಿ ಮನೆತನದವರಾದ ನಾವು ಪರಸ್ಪರರ ಸಂವಹನಾ ಮಾಧ್ಯಮವಾಗಿ 'ಕವಿಕಿರಣ' ಎಂಬ ಅರ್ಧವಾರ್ಷಿಕ ಪತ್ರಿಕೆಯನ್ನೂ ಹೊರತರುತ್ತಿದ್ದೇವೆ. ನಮ್ಮ 'ಕವಿ ಪ್ರಕಾಶನ'ದ ಪ್ರಕಟನೆಗಳನ್ನು 'kavikirana,blogspot.com' ತಾಣದಲ್ಲಿ ನೋಡಬಹುದಾಗಿದೆ. ಮಿತ್ರ ಶ್ರೀಧರರ ಎಲ್ಲಾ ಬಂಧು-ಮಿತ್ರರಿಗೆ ಇದರಿಂದ ಕಿಂಚಿತ್ ಪ್ರೇರಣೆ ಸಿಗಲಿ, ಶ್ರೀಧರರ ಪ್ರಯತ್ನಕ್ಕೆ ಯಶ ಸಿಗಲಿ ಎಂದು ನನ್ನ ಆಸೆ. 'ಕವಿಕಿರಣ' ಪತ್ರಿಕೆಯ ಡಿಸೆಂಬರ್, 2008ರ ಸಂಚಿಕೆಯ ಸಂಪಾದಕೀಯ ಇಲ್ಲಿ ಪ್ರಸ್ತುತವೆನಿಸುವುದರಿಂದ  ಹಾಕಿರುವೆ. ಈ ತಾಣದಲ್ಲಿ ಸಹಲೇಖಕನಾಗಿ ಆಹ್ವಾನಿತನಾಗಿರುವ ನಾನು ಅವರಿಗೆ ಆಭಾರಿ.
      "ವಾವ್!, ನಿಜಕ್ಕೂ ಹೊಸ ಅನುಭವ. ಇಂತಹ ಕಾರ್ಯಕ್ರಮ ನಾನು ಮೊದಲು ನೋಡಿರಲಿಲ್ಲ. ಬಹಳ ಉತ್ತಮವಾದ ಕಾರ್ಯಕ್ರಮ, ಅಭಿನಂದನೆಗಳು! "
     ಇದು ದಿನಾಂಕ ೨೮-೧೨-೨೦೦೮ರಂದು ಬೆಂಗಳೂರಿನಲ್ಲಿ ನಡೆದ ಕೆಳದಿ ಕವಿ ಮನೆತನದವರ ಮತ್ತು ಬಂಧು ಬಳಗದವರ ಮೂರನೆಯ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿದ್ದವರೊಬ್ಬರ ಪ್ತತಿಕ್ರಿಯೆ. ಉಳಿದವರಿಂದಲೂ ಇದೇ ರೀತಿಯ ಉದ್ಗಾರಗಳು, ಪ್ರತಿಕ್ರಿಯೆಗಳು! ನಿಜ, ಈ ಕಾರ್ಯಕ್ರಮ ಅನುಕರಣೀಯವಾಗಿತ್ತು ಮತ್ತು ಭಿನ್ನವಾಗಿತ್ತು. ಈ ಸಮಾರಂಭದಲ್ಲಿ ಕುಟುಂಬಗಳ ಸಂವಹನಾ ಮಾಧ್ಯಮವಾಗಿ, ಉತ್ತಮ ಬಾಂಧವ್ಯ ವೃದ್ಧಿ ಹಾಗೂ ಸಜ್ಜನಶಕ್ತಿಯ ಜಾಗರಣೆಗಾಗಿ, ಕವಿ ಪ್ರತಿಭೆಗಳ ಅನಾವರಣಕ್ಕಾಗಿ ರೂಪಿಸಿದ ಈ ಪತ್ರಿಕೆ ಕವಿಕಿರಣ ಬಿಡುಗಡೆಯಾಯಿತು. ಗೊತ್ತ್ತಿಲ್ಲದೇ ಇದ್ದ ಅನೇಕ ಬಂಧುಗಳು ಪ್ರಥಮ ಬಾರಿಗೆ ಭೇಟಿಯಾಗಿ ಪರಸ್ಪರ ಪರಿಚಯ ಮಾಡಿಕೊಂಡರು. ಹಿರಿಯರನ್ನು ಸ್ಮರಿಸಿಕೊಂಡರು. ನಾವೂ ಏನನ್ನಾದರೂ ಮಾಡಬೇಕೆಂಬ ಪ್ರೇರಣೆ ಪಡೆದರು. ಪರಸ್ಪರ ಉತ್ತಮ ಬಾಂಧವ್ಯ ಮುಂದುವರೆಸುವ ಪ್ರಯತ್ನಕ್ಕೆ ಮನಸಾರೆ ಬೆಂಬಲಿಸಿದರು.

     ಮನುಷ್ಯನ ಜೀವನದಲ್ಲಿ ಸಂಬಂಧಗಳು - ತಾಯಿ, ತಂದೆ, ಮಕ್ಕಳು, ಅಜ್ಜ, ಅಜ್ಜಿ, ಅಣ್ಣ, ತಂಗಿ, ಅಕ್ಕ, ತಮ್ಮ, ಗಂಡ, ಹೆಂಡತಿ, ಇತ್ಯಾದಿ - ಹಾಸುಹೊಕ್ಕಾಗಿದೆ. ಈ ಸಂಬಂಧಗಳು ಮಧುರವಾಗಿದ್ದರೆ ಚೆನ್ನ. ಇಲ್ಲದಿದ್ದರೆ. . . .? ನನ್ನ ಸ್ನೇಹಿತರೊಬ್ಬರು ಹೇಳುತ್ತಿದ್ದಂತೆ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಮುಂದೊಮ್ಮೆ ಚಿಕ್ಕಪ್ಪ, ದೊಡ್ಡಮ್ಮ, ಷಡ್ಡಕ, ಓರಗಿತ್ತಿ, ಅತ್ತಿಗೆ, ಮೈದುನ, ದಾಯಾದಿ, ಸೋದರತ್ತೆ, ಇತ್ಯಾದಿ ಸಂಬಂಧಗಳ ಅರ್ಥವೇ ಮಕ್ಕಳಿಗೆ ತಿಳಿಯದೇ ಹೋಗಬಹುದು. ಈಗ ಹೆಚ್ಚಿನ ಕುಟುಂಬಗಳಲ್ಲಿ ಒಂದೇ ಮಗುವಿರುವುದರಿಂದ ಅಣ್ಣ, ತಮ್ಮ, ಅಕ್ಕ, ತಂಗಿಯರ ಪ್ರೀತಿಯ ಅನುಬಂಧಗಳ ಅನುಭವಗಳೂ ಸಹ ಆ ಮಕ್ಕಳಿಗೆ ಆಗುತ್ತಿಲ್ಲ. ಗಂಡ, ಹೆಂಡತಿ ಇಬ್ಬರೂ ಒಟ್ಟಿಗೆ ಇದ್ದರೆ ಅದೇ ಅವಿಭಕ್ತ ಕುಟುಂಬ ಎಂದು ಹೇಳುವ ಪರಿಸ್ಥಿತಿ ಇಂದು ಇದೆ. ಸಂಬಂಧಗಳು ಚೆನ್ನಾಗಿರಬೇಕೆಂದರೆ ನಾವು ಎಲ್ಲರೊಂದಿಗೆ ಚೆನ್ನಾಗಿರಬೇಕೆಂಬ ಮೂಲ ತತ್ವ ನೆನಪಿಡಬೇಕು.
     ಬಾಂಧವ್ಯಗಳು ಸುಮಧುರವಾಗಿರಲು ಕೆಲವು ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳಬಹುದು. ೧.ಒಳ್ಳೆಯ ಕೆಲಸಗಳನ್ನು ಮಾಡಿದಾಗ  ಮೆಚ್ಚುಗೆ ವ್ಯಕ್ತಪಡಿಸುವುದು, ಪ್ರೋತ್ಸಾಹಿಸುವುದು. ೨.ತಪ್ಪಾದಾಗ ಸರಿಪಡಿಸಲು ಪ್ರಾಮಾಣಿಕ ಯತ್ನ ಮಾಡುವುದು. ೩.ಮಾಡಿದ ತಪ್ಪನ್ನು ಒಪ್ಪಿಕೊಳ್ಳಲು ಹಿಂಜರಿಯದಿರುವುದು. ೪.ಸಂಬಂಧಗಳು ಕೆಡುವಂತಹ ಯಾವುದೇ ಕೆಲಸಗಳನ್ನು ಮಾಡದಿರುವುದು. ೫.ಬಂಧುಗಳೊಳಗೆ ಸಾಧ್ಯವಾದಷ್ಟೂ ಹಣಕಾಸಿನ ವ್ಯವಹಾರಗಳನ್ನು ಇಟ್ಟುಕೊಳ್ಳದಿರುವುದು. ೬.ಸಭೆ, ಸಮಾರಂಭಗಳಿಗೆ ಆಹ್ವಾನ ಬಂದಾಗ ಹಾಜರಾಗುವುದು. ೭.ಹುಟ್ಟುಹಬ್ಬ, ವಿವಾಹದ ದಿನ, ಹಬ್ಬ ಹರಿದಿನಗಳು, ಇತ್ಯಾದಿ ದಿನಗಳಲ್ಲಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು. ೮.ಕಷ್ಟ ಕಾಲದಲ್ಲಿ ನೆರವಾಗುವುದು, ಸಾಧ್ಯವಿಲ್ಲದಿದ್ದಲ್ಲಿ ಸಾಂತ್ವನ ಹೇಳುವುದು. ೯.ನೇರವಾಗಿ ಅಥವಾ ಹಿಂದಿನಿಂದ ದೂರದಿರುವುದು. ೧೦.ಭಿನ್ನಾಭಿಪ್ರಾಯ ಬಂದಾಗ ಮುಖಾಮುಖಿ ಮಾತನಾಡಿ ಭಿನ್ನತೆ ಪರಿಹರಿಸಿಕೊಳ್ಳುವುದು. ೧೧.ಹೇಳುವುದಕ್ಕಿಂತ ಕೇಳುವುದಕ್ಕೆ ಆದ್ಯತೆ ನೀಡುವುದು. . . . .ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಒಟ್ಟಿನಲ್ಲಿ ಸಮಯ, ಸಂದರ್ಭ, ಪರಿಸರಕ್ಕೆ ಅನುಗುಣವಾಗಿ ನಡೆಯುತ್ತಾ ನಮ್ಮ ಕಡೆಯಿಂದ ತಪ್ಪಾಗದಿರುವಂತೆ ನೋಡಿಕೊಂಡರೆ ಬಾಂಧವ್ಯಗಳು ಎಲ್ಲರಿಗೂ ಹಿತಕಾರಿಯಾಗಿರುತ್ತದೆ.
     ದ್ವೇಷಿಸಲು ನಮಗೆ ಹಲವಾರು ಕಾರಣಗಳು ಸಿಗುತ್ತವೆ. ಆದರೆ ಪ್ರೀತಿಸಲೂ ನಮಗೆ ಕಾರಣಗಳು ಇರುತ್ತವೆಂಬುದನ್ನು ಮರೆಯದಿರೋಣ. ಇದು ನಾವು ನೋಡುವ ದೃಷ್ಟಿಯನ್ನು ಅವಲಂಬಿಸಿದೆ. ದ್ವೇಷದ ಪರಿಣಾಮ ಇತರರನನ್ನೂ ಹಾಳು ಮಾಡಿ ನಮ್ಮನ್ನೂ ಹಾಳು ಮಾಡುತ್ತದೆ ಎಂಬುದನ್ನು ಮರೆಯಬಾರದು. ದ್ವೇಷದಿಂದ ಇತರರಿಗೆ ಆಗುವ ಹಾನಿಗಿಂತ ಸ್ವಂತಕ್ಕೆ ಮತ್ತು ತನ್ನ ಕುಟುಂಬದ ಸದಸ್ಯರಿಗೆ ಆಗುವ ಹಾನಿಯೇ ಹೆಚ್ಚು. ಕತ್ತಲೆಯನ್ನು ಕತ್ತಲೆಯಿಂದ ಓಡಿಸಲಾಗುವುದಿಲ್ಲ. ಅದಕ್ಕೆ ಬೆಳಕೇ ಬರಬೇಕು. ಹಾಗೆಯೇ ದ್ವೇಷವನ್ನು ದ್ವೇಷದಿಂದ ತೊಡೆಯಲಾಗುವುದಿಲ್ಲ. ಹಾಗೆ ಮಾಡಿದರೆ ದ್ವೇಷ ಇನ್ನೂ ಹೆಚ್ಚುವುದಲ್ಲದೆ ಅದರ ವ್ಯಾಪ್ತಿ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗೂ ಹಬ್ಬುತ್ತದೆ. ದೊಡ್ಡವರ ತಪ್ಪಿಗೆ ಮಕ್ಕಳು ಬಲಿಯಾಗಬಾರದಲ್ಲವೇ? ದ್ವೇಷವನ್ನು ಗೆಲ್ಲಲು ಪ್ರೀತಿಗೆ ಮಾತ್ರ ಸಾಧ್ಯ. ತಪ್ಪು ಮಾಡಿಯೂ, ತಪ್ಪೆಂದು ಗೊತ್ತಿದ್ದೂ ತಿದ್ದಿಕೊಂಡು ನಡೆಯಲು ಬಯಸದವರು, ಅವರದೇ ಆದ ಕಾರಣಗಳಿಗಾಗಿ ಸುಳ್ಳು ಆರೋಪಗಳನ್ನು ಮಾಡಿ ಸಂಬಂಧಗಳನ್ನು ಕೆಡಿಸುವವರು ಕೆಲವರು ಇರುತ್ತಾರೆ. ಅಂತಹವರಿಂದ ದೂರವಿರುವುದು ಒಳ್ಳೆಯದು. ಅವರನ್ನೂ ಸಾಧ್ಯವಾದರೆ ಪ್ರೀತಿಸೋಣ; ಆಗದಿದ್ದರೆ ಸುಮ್ಮನಿರೋಣ! ಆದರೆ ಯಾವ ಕಾರಣಕ್ಕೂ ದ್ವೇಷಿಸದಿರೋಣ!! ಇತರರು ಇಷ್ಟಪಡುವ ವ್ಯಕ್ತಿತ್ವ ಬೆಳೆಸಿಕೊಳ್ಳೋಣ!!! ಇತರರು ಇಷ್ಟಪಡುವ ವ್ಯಕ್ತಿತ್ವ ನಮ್ಮದಾಗಬೇಕೆಂದರೆ ಇತರರನ್ನು ಇಷ್ಟಪಡುವ ಮನೋಭಾವ ನಾವು ಬೆಳೆಸಿಕೊಂಡರೆ ಮಾತ್ರ ಸಾಧ್ಯ. ಇತರರ ಪ್ರೀತಿ, ವಿಶ್ವಾಸ, ಸ್ನೇಹ, ಸಹಕಾರ ನಮಗೆ ಬೇಕೆಂದರೆ ಮೊದಲು ಅದನ್ನು ಇತರರಿಗೆ ನಾವು ನೀಡಬೇಕು. ಹಣ ಖರ್ಚು ಮಾಡಿದಷ್ಟೂ ಕಡಿಮೆಯಾಗುತ್ತದೆ. ಆದರೆ ಪ್ರೀತಿ, ವಿಶ್ವಾಸಗಳು ನೀಡಿದಷ್ಟೂ ಹೆಚ್ಚಾಗುತ್ತಾ ಹೋಗುತ್ತದೆ. ಪ್ರೀತಿಗೆ ಮಾಂತ್ರಿಕ ಶಕ್ತಿಯಿದೆ. ಪ್ರೀತಿಯ ಭಾಷೆಯನ್ನು ಮೂಕ ಮಾತನಾಡಬಲ್ಲ; ಕಿವುಡ ಕೇಳಬಲ್ಲ; ಪ್ರೀತಿಯ ಹಾಡಿಗೆ ಹೆಳವ ಕುಣಿಯಬಲ್ಲ; ಪ್ರೀತಿಯ ಕಣ್ಣಿನಲ್ಲಿ ಕುರುಡ ನೋಡಬಲ್ಲ. ಜೀವನವನ್ನು ನೋಡುವ ರೀತಿ ಬದಲಾಯಿಸಿಕೊಂಡಲ್ಲಿ, ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿ ತಪ್ಪು ಹುಡುಕದೆ ಒಳ್ಳೆಯ ಅಂಶಗಳನ್ನು ಗುರುತಿಸುವ ಅಭ್ಯಾಸ ಬೆಳೆಸಿಕೊಂಡಲ್ಲಿ, ನಮ್ಮನ್ನು ಇತರರು ಇಷ್ಟಪಡದಿದ್ದರೂ ದ್ವೇಷಿಸುವುದಿಲ್ಲ.
     ವೈರಿಯ ಅಬ್ಬರಕೆ ಬರೆಯೆಳೆಯಬಹುದು|
     ಕಪಟಿಯಾಟವನು ಮೊಟಕಿಬಿಡಬಹುದು||
     ಮನೆಮುರುಕರನು ತರುಬಿಬಿಡಬಹುದು|
     ಪ್ರೀತಿಯ ಆಯುಧಕೆ ಎಣೆಯುಂಟೆ ಮೂಢ||
     ಕವಿ ಕುಟುಂಬಗಳ ವಾರ್ಷಿಕ ಸಮಾವೇಶಗಳ ಪ್ರಮುಖ ಉದ್ದೇಶ ಸಹ ಬಾಂಧವ್ಯಗಳನ್ನು ಉತ್ತಮಗೊಳಿಸುವುದೇ ಆಗಿದೆ. ನಮ್ಮ ಪೂರ್ವಜರ, ಹಿರಿಯರ ಒಳ್ಳೆಯ ಸಾಧನೆಗಳನ್ನು ನೆನೆಸಿಕೊಂಡು ನಾವೂ ಸಹ ಏನನ್ನಾದರೂ ಸಾಧಿಸಲು ಪ್ರೇರಿಸಬೇಕೆಂಬುದು ಇದರ ಹಿನ್ನೆಲೆಯಾಗಿದೆ. ಒಂದೇ ಕುಟುಂಬದ ಒಟ್ಟಿಗೆ ಸೇರದ ಸದಸ್ಯರುಗಳೂ ಸಹ ಸಮಾವೇಶದಲ್ಲಿ ಒಟ್ಟಿಗೆ ಸೇರುತ್ತಿರುವುದು ಒಳ್ಳೆಯ ಬೆಳವಣಿಗೆ.  ಒಳ್ಳೆಯ ಸಂಗತಿಗಳಿಗೆ ಪ್ರಾಧಾನ್ಯತೆ ನೀಡಿದಷ್ಟೂ ಕೆಟ್ಟ ಸಂಗತಿಗಳಿಗೆ ಹಿನ್ನಡೆಯಾಗುತ್ತದೆ. ವಾರ್ಷಿಕ ಸಮಾವೇಶಗಳಲ್ಲಿ ನಮ್ಮ ಪೂರ್ವಜರ ಕೃತಿಗಳನ್ನು ಆಧರಿಸಿದ ರೂಪಕ, ನಾಟಕ, ಸಂಗೀತ, ಇತ್ಯಾದಿಗಳನ್ನು ಏರ್ಪಡಿಸಬಹುದು. ಇದಕ್ಕೆ ಪೂರ್ವ ತಯಾರಿ ಮಾಡಬಹುದು. ಪ್ರತಿ ಕುಟುಂಬದ ಕಡೆಯಿಂದ ವರ್ಷದ ಸಾಧನೆಯಾಗಿ ಏನನ್ನಾದರೂ ಮಾಡಲು ಕುಟುಂಬದ ಒಬ್ಬರು ಸದಸ್ಯರಾದರೂ ಮನಸ್ಸು ಮಾಡಬೇಕು. ಆ ಸಾಧನೆ ಬರವಣಿಗೆಯಿರಬಹುದು,  ನಟನೆ, ಆಟೋಟ, ಸಂಗೀತ,ನಾಟ್ಯವಿರಬಹುದು, ಚಿತ್ರಕಲೆಯಾಗಿರಬಹುದು, ನಾವು ತೊಡಗಿಕೊಂಡಿರುವ ವೃತ್ತಿ ಅಥವಾ ಪ್ರವೃತ್ತಿಯಲ್ಲಿರಬಹುದು,  ಗಮನಿಸಬಹುದಾದ ಯಾವುದೇ ಸಂಗತಿಯಿರಬಹುದು. ಸಮಾವೇಶಗಳಲ್ಲಿ ಇಂತಹ ಸಾಧನೆಗಳನ್ನು ಮಾಡಿದವರನ್ನು ಗುರುತಿಸಿ ಬೆನ್ನು ತಟ್ಟಬಹುದು, ಗೌರವಿಸಬಹುದು. ಇತರರು ಮಾಡಲಿ, ನಾವು ಪ್ರೋತ್ಸಾಹಿಸೋಣ ಎಂಬುದರ ಬದಲಿಗೆ ನಾವೂ ಏನನ್ನಾದರೂ ಜೀವಿತಕಾಲದಲ್ಲಿ ಸಾಧಿಸೋಣ ಎಂಬ ಭಾವನೆ ಬಂದಲ್ಲಿ ಉತ್ತಮ ಬೆಳವಣಿಗೆಯೇ ಸರಿ. ಕವಿ ಕುಟುಂಬಗಳವರು ಮನಸ್ಸು ಮಾಡಿ ಕಾರ್ಯ ಪ್ರವೃತ್ತರಾಗುತ್ತಾರೆ, ವಾರ್ಷಿಕ ಸಮಾವೇಶಗಳು ಇಂತಹ ಆರೋಗ್ಯಕರ ಸ್ಪರ್ಧೆಗೆ ಉತ್ತಮ ವೇದಿಕೆಯಾಗುತ್ತದೆ ಎಂಬುದು ನನ್ನ ನಿರೀಕ್ಷೆ.
-ಕ.ವೆಂ. ನಾಗರಾಜ್.
********************

ಹರಿಹರಪುರದ ನಮ್ಮ ಮನೆಯ ಮುಂದುವರಿದ ಭಾಗ. . . . . .



ನನ್ನ ಚಿಕ್ಕ ನಾದಿನಿ ಲಲಿತಳ ಬಗ್ಗೆ ಎರಡು ಮಾತು ಬರೆಯದೆ ಇದ್ದರೆ ಲೇಖನ ಅಪೂರ್ಣವಾಗುತ್ತದೆ. ಲಲತ ರಮೇಶ್ ಈಗಾಗಲೇ ಶ್ರೀಧರ್‌ರವರ ವೇದಸುಧೆ ಬ್ಕಾಗ್‌ನಲ್ಲಿ ಅವರು ಬರೆದ ಕವನಗಳಗೆ ರಾಗ ಹಾಕಿ ಹಾಡಿದ್ದಾಳೆ. ಅವಳ ಹಾಡನ್ನು ಎಲ್ಲರೂ ಕೇಳಿರಬಹುದು. ಅವಳ ಕಿರು ಪರಿಚಯ. ಲಲಿತ ನಮ್ಮ ಮನೆಯಲ್ಲಿ ಎಲ್ಲರಿಗಿಂತಾ ಚಿಕ್ಕವಳು. ಎಲ್ಲರ ಪ್ರೀತಿಗೆ ಪಾತ್ರಳು. ಅವಳ ಸಂಸಾರ ಚಿಕ್ಕದಾದ ಚೊಕ್ಕ ಸಂಸಾರ. ಸಂಸಾರದಲ್ಲಿ ಬಲು ಜಾಣೆ. ಅವಳಿಗೆ ಒಬ್ಬ ಮಗಳು ಸಹನಾ. ಸಹನಾ ಎಂದರೆ ನಮ್ಮ ಮನೆಯವರಿಗೆಲ್ಲಾ ಬಹಳ ಅಚ್ಚುಮೆಚ್ಚು. ನಮ್ಮ ಮನೆತನದ ಮೊಮ್ಮಕ್ಕಳಲ್ಲಿ ಅವಳೊಬ್ಬಳೇ ಹೆಣ್ಣು ಹುಡುಗಿ. ಅವಳ ನಾಲ್ಕು ಜನ ಸೋದರಮಾವರಿಗಂತೂ ಅವಳನ್ನು ಕಂಡರೆ ಬಹಳ ಪ್ರೀತಿ. ಲಲಿತಳ ಪತಿ, ರಮೇಶ್ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅವರು ನಮ್ಮ ಮನೆಯ ಗಂಡು ಮಕ್ಕಳಲ್ಲಿ ಅವರೂ ಒಬ್ಬರು ಎಂದು ನನ್ನ ಭಾವನೆ. ನಮ್ಮ ಮನೆಯವರೆಲ್ಲರ ಜೊತೆ ಆತ್ಮೀಯವಾಗಿ ಎಲ್ಲರೊಂದಿಗೆ ಬೆರೆಯುತ್ತಾರೆ. ಕಷ್ಟ್ಲಸುಖಗಳಲ್ಲಿ ಭಾಗಿಯಾಗುತ್ತಾರೆ. ಸಂತೋಷಪಡುವ ವ್ಯಕ್ತಿ. ಈ ಹಿಂದೆಯೇ ಬರೆದಂತೆ, ನಾವೆಲ್ಲರೂ ಒಟ್ಟಿಗೆ ಸೇರಿದಾಗ ಮನೆಯಿಂದ ತಿಂಡಿ ಮಾಡಿಕೊಂಡು ಎಲ್ಲರೂ ವಿಹಾರಕ್ಕೆಂದು ಹೋಗುತ್ತೇವೆ. ಒಟ್ಟಿನಲ್ಲಿ ಎಲ್ಲರೂ ಸಂತೋಷವನ್ನು ಹಂಚಿಕೊಳ್ಳುತ್ತೇವೆ. ಹೀಗೆ ನಮ್ಮೆಲ್ಲರ ಸಂಸಾರವನ್ನು ದೇವರು ಚೆನ್ನಾಗಿಟ್ಟಿರಲಿ ಎಂದು ನಮ್ಮಿಬ್ಬರ ಪ್ರಾರ್ಥನೆ.
ಹರಿಹರಪುರದಲ್ಲಿದ್ದು, ಈಗ ಬೇರೆ ಕಡೆ ನೆಲೆಸಿರುವ ಉಳಿದ ಎಲ್ಲಾ ಫ್ಯಾಮಿಲಿಗಳು ಅವರವರ ಮನೆತನದ ಬಗ್ಗೆ ಬರೆದು ಭಾವನೆಗಳನ್ನು ಈ ಬ್ಲಾಗ್‌ನಲ್ಲಿ ಹಂಚಿಕೊಂಡರೆ ಚೆನ್ನಾಗಿರುತ್ತದೆ. ಎಲ್ಲರೂ ಒಂದೇ ಗೂಡಿನಲ್ಲಿದ್ದು ಬೇರೆ ಬೇರೆ ದಿಕ್ಕುಗಳಲ್ಲಿ ಹೇಗೆ ಹರಡಿಕೊಂಡಿದೆ ಎಂದು ಎಲ್ಲರಿಗೂ ಪರಿಚಯಿಸಿದ ಹಾಗೆ ಆಗುತ್ತದೆ ಎಂದು ನನ್ನ ಭಾವನೆ.
ಮುಂದಿನ ದಿನಗಳಲ್ಲಿ ಹರಿಹರಪುರದ ನಮಗೆ ಆತ್ಮೀಯರಾದ ವ್ಯಕ್ತಿಗಳ ಬಗ್ಗೆ, ಅವರ ವ್ಯಕ್ತಿತ್ವ ಹಾಗೂ ಅವರ ಬಗ್ಗೆ ನಮ್ಮ ಅನಿಸಿಕೆಗಳನ್ನು ಈ ಬ್ಲಾಗ್‌ನಲ್ಲಿ ಹಂಚಿಕೆಕೊಳ್ಳಲು ಪ್ರಯತ್ನಪಡುತ್ತೇವೆ.
ಇದಕ್ಕಿಂತ ಮೊದಲು ನಮ್ಮ ತಂದೆಯವರ ಕಿರು ಪರಿಚಯ ಹಾಗೂ ನಮ್ಮ ಬ್ಲಾಗ್‌ಗೆ ಏಕಸಂತೆ ಎಂದು ಏಕೆ ಇಟ್ಟುಕೊಂಡಿದ್ದೇನೆ ಎಂದು ಈ ಬ್ಲಾಗ್‌ನಲ್ಲಿ ಬರೆಯುತ್ತೇನೆ.



- ವಿಜಯ ಶ್ರೀಕಂಠಮೂರ್ತಿ.