ಮಂಗಳವಾರ, ಸೆಪ್ಟೆಂಬರ್ 13, 2011

ವೇದಸುಧೆ ಡಾಟ್ ಕಾಂ

ಪ್ರಿಯ ಬಂಧುಗಳೇ 

"ನೆಮ್ಮದಿಗಾಗಿ " ಎಂಬ ಬ್ಲಾಗ್ ನಿಂದ ಆರಂಭಗೊಂಡ ನನ್ನ ಅಂತರ್ ಜಾಲ ಯಾತ್ರೆ  ಮುಂದುವರೆದಂತೆ ಸಂಪದದಲ್ಲಿ ಈಜಾಡಿ, "ವೇದಸುಧೆಯ "  ಆರಂಭಕ್ಕೆ ಕಾರಣವಾಗಿ  "ನಮ್ಮೂರು ನಮ್ಮನೆ"  ನಮ್ಮ  ಕೌಟುಂಬಿಕ  ಸಾಮರಸ್ಯಕ್ಕಾಗಿ ಶುರುವಾಗಿ  ಇದೀಗ   ಸ್ವಂತ ವೆಬ್ ಸೈಟ್  ಹೊಂದುವ ಹಂತ ತಲುಪಿದೆ. 
ಹೊಸದಾದ ಸ್ವಂತ ತಾಣ    vedasudhe.com  [ ವೇದಸುಧೆ ಡಾಟ್ ಕಾಂ] ಆರಂಭಗೊಂಡಿದೆ. ಇನ್ನೆರಡು ತಿಂಗಳಲ್ಲಿ  ನಮ್ಮ ಮನೆಯ ಗೃಹ ಪ್ರವೇಶ ಕಾರ್ಯಕ್ರಮಗಳು ಮುಗಿದ ಮೇಲೆ ಅದರ ಬೆಳವಣಿಗೆಯ ಬಗ್ಗೆ   ಚಿಂತನ ಮಂಥನ ನಡೆಸಲಾಗುವುದು. ಮಿತ್ರ  ಪ್ರಸನ್ನ ಶಂಕರಪುರ  ಅದಕ್ಕೊಂದು ರೂಪ ಕೊಡುತ್ತಿದ್ದಾರೆ. ನೀವು ತಾಣವನ್ನು ಭೇಟಿಯಾಗಿ ನಿಮ್ಮ ಅನಿಸಿಕೆ ಹಂಚಿಕೊಳ್ಳಬಹುದು  

ಸುದ್ಧಿ! ಶುದ್ಧಿ!

ಈ ಸಮಾಜವೇ ಹಾಗೆ
ಕೆಲವರನ್ನು ಹೀರೋ ಮಾಡಿಬಿಡುತ್ತದೆ ಅವರಲ್ಲಿ ಏನಿಲ್ಲದಿದ್ದರೂ!
ಹಲವರು ಇವರ ಕಣ್ಣಿಗೆ ಬೀಳುವುದೇ ಇಲ್ಲ  ಅವರಲ್ಲೆಲ್ಲಾ ಇದ್ದರೂ !!

 ಬಡ   ಬೋರೆ ಗೌಡನಿಗೆ  ತಿಂಗಳೆಲ್ಲಾ ಉಪವಾಸ
ಬೇಡ ನಮಗೆ ಅವನ ಸಹವಾಸ!
ಇಲ್ಲೊಬ್ಬ ಗಾಂಧೀ ಪ್ರತಿಮೆ ಎದಿರು ದಿನವೊಂದು ಕಳೆದು 
ಮಾಡಿದ ಉಪವಾಸ , ಅದೊಂದು ಪುಟಕ್ಕೆ ಸೇರಿದ ಇತಿಹಾಸ!

ಅವನಿಗೆ ಹೊಟ್ಟೆಗೆ ಸಿಗಲಿಲ್ಲ!
ಇವನಿಗೆ ಬೊಜ್ಜು ಕರಗಲಿಲ್ಲ!

ಲಕ್ಷಾಂತರ ಜನರ ಕೊಂಡೊಯ್ಯುವ ಬಸ್ಸುಗಳು ಆಗುವುದಿಲ್ಲ ಸುದ್ಧಿ!
ಮರಕ್ಕೆ ಡಿಕ್ಕಿ ಹೊಡೆದು ಒಬ್ಬನ ಕಾಲ್ಮುರಿದ ಬಸ್ಸಿನದೆ ಪತ್ರಿಕೆಯ ತುಂಬಾ ಸುದ್ಧಿ!!

ನೀವು ಸುದ್ಧಿಯಾಗಬೇಕೆ
ಶುದ್ಧಿ ಯಾಗಬೇಕೆ?
ಅದು ನಿಮಗೆ ಸೇರಿದ್ದು!!


ಸೋಮವಾರ, ಸೆಪ್ಟೆಂಬರ್ 5, 2011

ಹಬ್ಬದ ಸಡಗರ


ಹರಿಹರಪುರದಲ್ಲಿ ದುರ್ಗಾ ಪರಮೇಶ್ವರಿ ಸಿಡಿ ಜಾತ್ರೆ, ಗೌರಿ ಗಣೇಶನ ಹಬ್ಬ ಬಂದರೆ ಊರಿನ ಎಲ್ಲಾ ಗಂಡುಮಕ್ಕಳು, ಹಾಗೂ ಮದುವೆಯಾಗಿ ಹೋದ ಹೆಣ್ಣು ಮಕ್ಕಳು ಊರಿಗೆ ಬಂದೇ ಬರುತ್ತಾರೆ.  ನಾಳೆ ಜಾತ್ರೆ  ಆಥವಾ ಹಬ್ಬ ಎಂದರೆ ಹಿಂದಿನ ದಿನ ರಾತ್ರಿ ಎಲ್ಲರೂ ಅವರವರ ಮನೆಗೆ ಬಂದಿರುತ್ತಾರೆ.  ಮರು ದಿನ ಬೆಳಿಗ್ಗೆ ಎಲ್ಲರಿಗೂ ಯಾರ‍್ಯಾರು ಬಂದಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ.  ಮೊದಲು ದತ್ತ, ಪ್ರಸಾದಿ ಹಿರಣ್ಣ ಬೆಳಿಗ್ಗೆ ೭ ಗಂಟೆಗೆ ನಮ್ಮ ಮನೆಗೆ ಹಾಜರ್.  ನಮ್ಮ ಮನೆಯಲ್ಲೆಲ್ಲಾ ಇನ್ನೂ ಮಲಗಿದ್ದರೆ, ಹಾಸಿಗೆ ಹತ್ತಿರನೇ ಕುಳಿತು ಯಾವಾಗ ಬಂದ್ಯೋ ಶ್ರೀಕಂಠಮೂರ್ತಿ, ಎಷ್ಟು ಹೊತ್ತಿಗೆ ಬಂದೆ ಎಂದು ಮಾತನಾಡುವಿಕೆ. ಎಷ್ಟೊಂದು ಆತ್ಮೀಯತೆ, ಎಷ್ಟೊಂದು ಸಲಿಗೆ,  ಇಲ್ಲಿ ಅಧಿಕಾರ ಹಾಗೂ ಅಂತಸ್ತು ಗೌಣವಾಗುತ್ತದೆ.  ಶಾಮಣ್ಣ, ರಾಮಪ್ರಸಾದ್ ನೀವು ಎಷ್ಟು ಹೊತ್ತಿಗೆ ಬಂದ್ರಿ ಎಂದು ಕೇಳುವುದು.  ಒಂದು ಹತ್ತು ನಿಮಿಷ ಮಾತನಾಡಿ, ಆಮೇಲೆ ಬರುತ್ತೇನೆ ಇನ್ನು ಯಾರ‍್ಯಾರು ಬಂದಿದ್ದಾರೆ ನೋಡುತ್ತೇನೆ ಎಂದು ಹೊರಟಾಗ ನಮ್ಮ ಅತ್ತೆ ಅಡಿಗೆಮನೆಯಿಂದ,  ದತ್ತ ಸ್ವಲ್ಪ ಇರು ಕಾಫಿ ಕುಡಿದುಕೊಂಡು ಹೋಗುವಿರಂತೆ ಎಂದು ಹೇಳುವುದು ಇವೆಲ್ಲಾ ಸಾಮಾನ್ಯವಾಗಿ ನಡೆಯುವ ದೃಶ್ಯ.  ನಮ್ಮ ಅತ್ತೆ ಕಾಫಿ ತುಂಬಾ ರುಚಿಯಾಗಿ ಮಾಡುತ್ತಾರೆ.  ಜಾತ್ರೆಯ ಸಮಯದಲ್ಲಿ  ಊರಿನಲ್ಲೆಲ್ಲಾ ಸಂಭ್ರಮ.  ಎಲ್ಲರ ಮನೆಯಲ್ಲೂ ಜನ.  ನಮ್ಮ ಮನೆಯಲ್ಲಿಯೂ ಸಹ  ಎಲ್ಲರೂ ಸ್ನಾನ ಕಾಫಿ ಮುಗಿಸಿ ಇವರೆಲ್ಲರೂ ಒಂದು ಸುತ್ತು ಎಲ್ಲರ ಮನೆಗೂ ಹೊರಡುತ್ತಾರೆ.  ಯಾರ ಮನೆಯಲ್ಲಿ ತಿಂಡಿ ಆಗಿರುತ್ತೋ  ಅಲ್ಲೇ ತಿಂಡಿ.  ಹರಿಹರಪುರದ ಸ್ಪೆಷಲ್ ತಿಂಡಿ ಅಂದರೆ  ರೊಟ್ಟಿ, ಚಟ್ನಿ, ತುಪ್ಪ, ಮೊಸರು ಅಥವಾ ಇಡ್ಲಿ, ಚಟ್ನಿ, ತುಪ್ಪ ಮೊಸರು.  ತುಂಬಾ ಚೆನ್ನಾಗಿರುತ್ತದೆ.

 ಈ ತರಹದ ಸಂಬಂಧಗಳು ಈಗಲೂ ಹರಿಹರಪುರದಲ್ಲಿ ಉಳಿದಿದೆ.


                            ವಿಜಯ ಶ್ರೀಕಂಠಮೂರ್ತಿ