ಶುಕ್ರವಾರ, ಏಪ್ರಿಲ್ 29, 2011

ಎಲ್ಲಿ ಹುಡುಕಲಿ ನಿನ್ನ

ರಚನೆ: ಹರಿಹರಪುರಶ್ರೀಧರ್
ಗಾಯನ: ಶ್ರೀಮತಿ ಲಲಿತಾ ರಮೇಶ್


ಎಲ್ಲಿ ಹುಡುಕಲಿ ನಿನ್ನ
ನಾ ಹೇಗೆ ಅರ್ಚಿಸಲಿ?
ಯಾವ ಮಂತ್ರವಹೇಳಿ
ನಿನ್ನ ಮೆಚ್ಚಿಸಲಿ?

ನನ್ನಂತೆ ನಿನಗೂ
ಮಡಿಯಮಾಡಿಸಿ ನಾನು
ಹಸಿದು ಪೂಜೆಯ ಮಾಡಿ
ಪಡಿಯ ನಿಡುವೆ|

ಕಣ್ಮುಚ್ಚಿ ಕುಳಿತಿರುವ
ನಿನ್ನ ದೇಗುಲದಿ ಹುಡುಕಿ
ಕಾಣಲಾಗದೆ ಬಂದೆ
ಎಲ್ಲಿರುವೆ ತಂದೆ?

ಜಗವೆಲ್ಲ ಬೆಳಗುತ್ತ
ಜಗವ ರಕ್ಷಿಪ ನಿನ್ನ
ಹಣತೆಬೆಳಕಲಿ ಹುಡುಕಿ
ದೇಗುಲದಿ ಕೂಡಿಡುವೆ|

ಬಲ್ಲವರು ಹೇಳಿದರು
ಎಲ್ಲೆಲ್ಲು ನೀನಿರುವೆ|
ಅಹುದೇ ದೇವ ತೋರು
ನಿನ್ನ ರೂಪ|

ನನ್ನೊಳಗೆ ಇರುವಾ
ನಿನ್ನ ಮರೆತು ನಾನು
ಎಲ್ಲಿ ಕಾಣಲಿ ನಿನ್ನ
ನಿಜದ ರೂಪ?||

ಶುಕ್ರವಾರ, ಏಪ್ರಿಲ್ 15, 2011

ಇಷ್ಟು ದಿನ ನೆಚ್ಚಿ ನಂಬಿ


ಇಷ್ಟು ದಿನ ನೆಚ್ಚಿ ನಂಬಿ
ಕಷ್ಟ ಪಟ್ಟು ಪಟ್ಟು ಹಿಡಿದು
ಕೆಟ್ಟ ಚಿಂತೆ ಮಾಡಿದ್ದೆಲ್ಲ ಸಾಕು ಸಾಕು|
ಎಷ್ಟೋ ದಿನ ಗಟ್ಟಿಯಾಗಿ
ಕೆಟ್ಟಮಾತುಗಳನು ಆಡಿ
ಸಿಟ್ಟು ಮಾಡಿ ಕೆಟ್ಟಿದ್ದೆಲ್ಲ ಸಾಕು ಸಾಕು |ಪ|

ಯಾರೇ ಬರಲಿ ಊರೇ ಇರಲಿ
ಹೊಗಳಿ ಹೊಗಳಿ ಅಟ್ಟಕ್ಕೇರಿ
ಪಟ್ಟ ಕಟ್ಟಿ ಮೆರೆದಿದ್ದೆಲ್ಲಾ ಸಾಕು ಸಾಕು|
ಇಷ್ಟು ದಿನ ಮಾಡಿದ್ದೆಲ್ಲಾ
ಇಲ್ಲೇ ಬಿಟ್ಟು ಹೋಗುವಾಗ
ತಂಟೆಮಾಡ್ದೆ ಒಂಟಿಯಾಗಿ ಹೋಗ್ಲೇ ಬೇಕು |೧|

ಬಂದು ಬಳಗ ಬಂದಾರೆಂದು
ಮಂದಿ ಮಾತು ಕಟ್ಟಿಕೊಂಡು
ಕೂಟ ಮಾಡಿ ಕುಣಿದದ್ದೆಲ್ಲಾ ಸಾಕು ಸಾಕು|
ನೊಂದು ಬೆಂದು ಮುಂದೆ ಬಂದು
ಹಿಂದಿಂದೆಲ್ಲಾ ಮರೆತು ಕೊಂಡು
ಎಲ್ಲಾ ನಂದೇ ಎಂದಿದ್ದೆಲ್ಲಾ ಸಾಕು ಸಾಕು |೨|

ಸ್ನಾನ ಸಂಧ್ಯಾ ಜಪವ ತಪವ
ನಿತ್ಯಮಾಡಿದೆನೆಂದು ಬೀಗುತ
ಉತ್ತಮನೆಂದು ಮೆರೆದಿದ್ದೆಲ್ಲಾ ಸಾಕು ಸಾಕು|
ಹೇಳದೆ ಕೇಳದೆ ಅಂತ್ಯವು ಬರಲು
ಕಂತೆಯನೊಗೆಯುವ ಮುಂಚೆಯಾದರೂ
ಆತ್ಮನ ಚಿಂತನೆ ಕಿಂಚಿತ್ತಾದರು ಮಾಡ್ಲೇ ಬೇಕು ||೩||

ಮಂಗಳವಾರ, ಏಪ್ರಿಲ್ 12, 2011

ಹುಚ್ಚರ ಸಂತೆ:

ಹುಚ್ಚರ ಸಂತೆ:

ಏನಾದರೇನಂತೆ
ಇದು ಒಂದು ಸಂತೆ
ಚಿಂತೆ ಇಲ್ಲದೆ ವ್ಯಾಪಾರ
ಇಲ್ಲಿ ನಡೆದಿದೆಯ೦ತೆ
ಸತ್ಯಕ್ಕೆ ಸ೦ತೆಯಲಿ
ಬೆಲೆಇಲ್ಲವಂತೆ
ಸುಳ್ಳನ್ನೇ ಹೇಳಿದವ
ಶ್ರೀಮಂತ ನಂತೆ!!

ಪ್ರೀತಿ ಪ್ರೇಮಗಳಿಲ್ಲಿ
ವ್ಯಾಪಾರವಂತೆ
ನೀತಿ ನ್ಯಾಯಗಳ
ಹೆಸರಿಲ್ಲವಂತೆ
ಬಣ್ಣವಿಲ್ಲದೇ ನಾಟಕ
ಆಡುತಿಹರಂತೆ
ನೋಡುವಾ ನಾವೆಲ್ಲ
ಕುರಿಮಂದೆಯಂತೆ

ಜಗವೊ೦ದು ,
ನೂರಾರು ಜಗದ್ಗುರುಗಳ೦ತೆ
ಉಳ್ಳವರು ದರುಶನವ
ಮಾಡುವರಂತೆ
ಹಲವರಿಗೆ ಹಗಲಿರುಳು
ಹೊಟ್ಟೆಗಿಲ್ಲದ ಚಿಂತೆ
ಧರ್ಮ ವೆಂಬುದು
ಇಲ್ಲಿ ವ್ಯಾಪಾರವಂತೆ

ಹುಚ್ಚು ಕುದುರೆಯನೇರಿ
ಹೊರಟಿರುವರಂತೆ
ಸೇರುವುದು ಎಲ್ಲಿಗೆ
ಗೊತ್ತಿಲ್ಲವಂತೆ
ನಾಮುಂದು ,ತಾಮುಂದು
ನೂಕಾಟವಂತೆ
ಅಹುದಹುದು ಇದು ಒಂದು
ಹುಚ್ಚರಾ ಸಂತೆ

ಖಾಲಿ ಮತ್ತು ಪೂರ್ಣ

ಅಕ್ಕನ ಜೊತೆ ಹೀಗೇ ಮಾತಾಡ್ತಾ ಕೂತಿದ್ದೆ. ಟೀಪಾಯ್ ಮೇಲೆ ಒಂದು ಲಗ್ನಪತ್ರಿಕೆಕವರ್ ಕಣ್ಣಿಗೆ ಬಿತ್ತು. ಅಕ್ಕ ಕವರ್ ತೆರೆದರೆ ಒಳಗೆ ಖಾಲಿ. -" ಇದೇನೋ ಖಾಲಿ ಇದೆಯಲ್ಲಾ?..ಅಕ್ಕ ಕೇಳಿದ್ರು. -ಯಾವ್ದು ಖಾಲಿ? ಯಾವುದು ತುಂಬಿದೆ? ..ನನಗರಿವಿಲ್ಲದೆ ನನ್ನ ಮನಸ್ಸು ಏನೇನೋ ಹುಡುಕ್ತಾ ಇದೆ, ಖಾಲಿ ಇದೆ ಎಂಬುದು ಹೌದಾದರೆ ನನ್ನೊಳಗೆ ಪ್ರೀತಿ-ಪ್ರೇಮ-ಮಮಕಾರ-ಕರುಣೆ ಇಂತಾ ಸದ್ಗುಣಗಳಿಲ್ಲದೆ ಖಾಲಿಯಾಗಿದೆ ಎಂದು ಭಾವಿಸಲೇ? ಅಥವಾ ಪೂರ್ಣವಿದೆ ಎಂದರೆ ಕಾಮ,ಕ್ರೋಧ,ಲೋಭ,ಮೋಹ, ಮದ, ಮತ್ಸರ -ಎಂಬ ಅರಿಷಡ್ವರ್ಗಗಳಿಂದ ತುಂಬಿದ್ದೇನೆ ಎಂದೇ? ಮನಸ್ಸು ಏನೇನೋ ಚಿಂತಿಸಿತು. ಮನುಷ್ಯ ಯಾವುದನ್ನು ಖಾಲಿ ಮಾಡಬೇಕೋ ಅದನ್ನು ತುಂಬಿಕೊಂಡಿರ್ತಾನೆ, ಯಾವುದನ್ನು ತುಂಬಿಕೊಂಡಿರಬೇಕೋ ಅದನ್ನು ತುಂಬದೆ ಖಾಲಿಯಾಗಿರ್ತಾನೆ! ಆಲ್ವಾ? ಯೋಚನೆ ಮಾಡಿ, ಯಾವುದನ್ನು ತುಂಬಿಕೊಳ್ಳಬೇಕು? ಯಾವುದನ್ನು ಖಾಲಿ ಮಾಡಬೇಕೂ ಅನ್ನೋದನ್ನು ಸ್ವಲ್ಪ ಯೋಚಿಸಿ, ತನ್ನ ಆತ್ಮಸಾಕ್ಷಿಗನುಗುಣವಾಗಿ ನಡೆದುಕೊಂಡರೆ ಒಳ್ಳೇದು ಅಲ್ವೇ?

ಚಿನ್ನದಂತಾ ಮಕ್ಕಳು:

ಒಬ್ಬರು ಹಿರಿಯ ಸಮಾಜ ಸೇವಕರು ಬೆಂಗಳೂರಿನಲ್ಲಿ ಒಂದು ಮನೆಗೆ ಹೋಗಿದ್ದರು. ರಾತ್ರಿ ಅವರ ಮನೆಯಲ್ಲಿ ಮಲಗಿದ್ದು ಬೆಳಿಗ್ಗೆ ಎದ್ದು ಮಾಮೂಲಿನಂತೆ ಬೆಳಗಿನ ವಾಕ್ ಹೊರಟು ೮.೩೦ ಕ್ಕೆ ಮನೆಗೆ ಹಿಂದಿರುಗುತ್ತಾರೆ. ಮನೆಯಮುಂದೆ ಸಾರಿಸಿ ರಂಗವಲ್ಲಿ ಇಟ್ಟಿದೆ. ಮನೆಯೊಳಗೆ ಕಾಲಿಡುತ್ತಾರೆ. ಮನೆಯೆಲ್ಲಾ ಅಚ್ಚುಕಟ್ಟಾಗಿದೆ. ಇವರಿಗೆ ಆಶ್ಚರ್ಯ! ಅಲ್ಲಾ, ಮನೆಯಲ್ಲಿ ಇಬ್ಬರು ಅನಾರೋಗ್ಯ ಪೀಡಿತ ಪತಿ ಪತ್ನಿಯರು. ಇಬ್ಬರೂ ಹಾಸಿಗಿ ಹಿಡಿದು ಮಲಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲ. ಮನೆ ಮಾತ್ರ ಅಚ್ಚುಕಟ್ಟಾಗಿದೆ. ಈ ಮಹನೀಯರು ಮನೆಯೊಡತಿಯನ್ನು ಕೇಳುತ್ತಾರೆ. "ಅಮ್ಮಾ ಕೆಲಸದವರು ಬಂದು ಕೆಲಸ ಮಾಡಿ ಹೊಗಿಯಾಯ್ತಾ? -" ಇಲ್ಲಾ, ನಮ್ಮ ಮನೆಯಲ್ಲಿ ಕೆಲಸದವರೇ ಇಲ್ಲ." - ಹಾಗಾದರೆ ಮನೆ ಕೆಲಸಗಳನ್ನೆಲ್ಲಾ ಮಾಡುವವರು ಯಾರು? ನಿಮ್ಮ ಇಬ್ಬರು ಗಂಡುಮಕ್ಕಳು ಬಿ ಇ . ಓದುತ್ತಾ ಇದ್ದಾರೆ ಅಲ್ವೇ! -ಇಬ್ಬರೂ ಬಿ ಇ ಓದುತ್ತಾ ಇದ್ದಾರೆ ನಿಜ. ಆದರೆ ಮನೆಯ ಕೆಲಸಗಳನ್ನೆಲ್ಲಾ ಅವರೇ ಮಾಡ್ತಾರೆ. ದೊಡ್ಡೋನು [ರಾಮು] ಅವರಪ್ಪನಿಗೆ ಸ್ನಾನ ಮಾಡಿಸಿ ಅವರನ್ನು ಮಲಗಿಸಿ ಅಡಿಗೆ ಕೆಲಸ ನೋಡಿಕೊಳ್ತಾನೆ. ಚಿಕ್ಕೋನು [ಕಿಟ್ಟಿ] ನನಗೆ ಸ್ನಾನ ಮಾಡಿಸಿ,ನನ್ನ ಸೇವೆ ಎಲ್ಲಾ ಮಾಡಿ ಬಟ್ಟೆ ಎಲ್ಲಾ ಒಗೆದು , ಮನೆಯನ್ನು ಓರಣ ಮಾಡ್ತಾನೆ. ಅಡಿಗೆ ಎಲ್ಲಾ ಮಾಡಿಟ್ಟು ತಮ್ಮ ಊಟ ಬಾಕ್ಸ್ ಗೆ ಹಾಕಿಕೊಂಡು , ನಮಗೆ ನಮ್ಮ ಮಂಚದ ಹತ್ತಿರವೇ ಊಟ ಇಟ್ಟು , ಆದಷ್ಟೂ ಸೇವೆ ಮಾಡಿ ಕಾಲೇಜಿಗೆ ಹೋಗ್ತಾರೆ. ದೊಡ್ಡೋನುದ್ದು ಈ ವರ್ಷ ಫೈನಲ್ ಇಯರ್, ಯಾವುದೋ ಕಂಪನಿಗೆ ಸೆಲೆಕ್ಟ್ ಆಗಿದ್ದಾನಂತೆ. ನಮ್ಮ್ ಅದೃಷ್ಟಕ್ಕೆ ಬೆಂಗಳೂರಿನಲ್ಲೇ ಕೆಲಸ ಸಿಕ್ಕಿದೆ. ಇನ್ನೊಂದು ಆರು ತಿಂಗಳು ಅವನು ಕಷ್ಟ ಪಟ್ಟರೆ ಆಯ್ತು, ಆಮೇಲೆ ಹೇಗಾದರೂ ಮಾಡಿ ಯಾರನ್ನಾದರೂ ಕೆಲಸಕ್ಕೆ ಇಟ್ಟುಕೊಳ್ಳಬೇಕು. ಮಕ್ಕಳಿಗೆ ಎಷ್ಟೂ ಅಂತ ಕಷ್ಟ ಕೊಡೋದು! ಮಾತು ಮುಗಿಯುವಾಗ ಇಬ್ಬರ ಕಣ್ಣಲ್ಲೂ ನೀರು ತುಂಬಿತ್ತು. ಯಜಮಾನರು ಹೇಳಿದ್ರು " ಭಗವಂತ ನಮಗೆ ಅನಾರೋಗ್ಯ ಕೊಟ್ಟರೂ ಒಳ್ಳೆ ಮಕ್ಕಳು ಕೊಟ್ಟ. ಕಳೆದವಾರ ಹಾಸನವಾಣಿಯ ಭಾನುವಾರದ ಸಂಚಿಕೆಯಲ್ಲಿ ಮಿತ್ರ ಬೇಲೂರು ನವಾಬ್ ಇದೆ ವಿಚಾರದಲ್ಲಿ ಮನಮುಟ್ಟುವಂತೆ ಬರೆದಿದ್ದಾರೆ. ಸಾಮಾನ್ಯವಾಗಿ ಮಕ್ಕಳು ದೊಡ್ದೊರಾಗಿ ಒಂದು ಸ್ಥಾನಕ್ಕೆ ಬಂದಾಗ ಅವರಿಗೆ ಅಪ್ಪ-ಅಮ್ಮ ಮರೆತೆ ಹೋಗಿರುತ್ತೆ. ಅನೇಕ ವೇಳೆ ವೃದ್ಧಾಶ್ರಮವೇ ಅವರಿಗೆ ಗತಿ ಯಾಗಿರುತ್ತೆ. ಇಂತಾ ದಿನಗಳಲ್ಲಿ ನಮ್ಮ ರಾಮು-ಕಿಟ್ಟಿಯನ್ತೋರು ಕೂಡ ಇದ್ದಾರೆ ಅಂದ್ರೆ ಆಶ್ಚರ್ಯ ಆಗುತ್ತೆ ಆಲ್ವಾ? ರಾಮು-ಕಿಟ್ಟಿಯನ್ತೋರ ಸಂಖ್ಯೆ ಜಾಸ್ತಿಯಾಗಲೀ ಅಂತಾ ಭಗವಂತನಲ್ಲಿ ಪ್ರಾರ್ಥಿಸೋಣ ಅಲ್ವೇ? ನಿಮಗೇನು ಅನ್ನಿಸುತ್ತೆ ತಿಳಿಸ್ತೀರಾ?
-ಹರಿಹರಪುರಶ್ರೀಧರ್
ಗೌರತ್ತೆ
ಯಾಕೋ ಇವತ್ತು ನಮ್ಮ ಗೌರತ್ತೆ ನೆನಪು ತುಂಬಾ ಕಾಡ್ತಾ ಇದೆ. ಮನುಷ್ಯನ ಸ್ವಭಾವವೇ ಹಾಗೆ.ಮನೆಯಲ್ಲಿ ಮನೆಮಂದಿಯೆಲ್ಲಾ ಆರೋಗ್ಯವಾಗಿ ಸುಖವಾಗಿದ್ದಾಗ , ಕೈತುಂಬಾ ಕಾಸು ಓಡಾಡ್ತಾ ಇದ್ದಾಗ , ಯಾರ ನೆನಪೂ ಆಗುಲ್ಲಾ. ಅರೆ ನಾನು ಕಷ್ಟಪಟ್ಟು ಕೆಲಸ ಮಾಡ್ತೀನಿ, ಕೈತುಂಬಾ ದುಡೀತೀನಿ, ಯಾರ ಮುಲಾಜು ಏನು? ಸೋಮಾರಿಗಳಾದ್ರೆ ಅವರಿಗೆ ಬದುಕು ಕಷ್ಟ, ಕಷ್ಟ ಪಟ್ಟು ಕೆಲಸ ಮಾಡೋರು ಯಾಕೆ ಹೆದರಬೇಕು? ನಮ್ಮ ಮೂಗಿನ ನೇರಕ್ಕೆ ಎಷ್ಟೆಲ್ಲಾ ಮಾತನಾಡ್ತೀವಿ ರೀ. ಏನೋ ಆ ಭಗವಂತ ಎಲ್ಲವನ್ನೂ ಚೆನ್ನಾಗಿ ಕೊಟ್ಟಾಗ ಹೀಗೆ ನಾವು ಅವನನ್ನೂ ಮರೆತು ಮಾತನಾಡ್ತೀವಿ. ಆದರೆ ಒಂದು ಚಿಕ್ಕ ಕಷ್ಟ ಬಂತೂ ಅಂದ್ರೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಆಡ್ತೀವಿ. ಆಲ್ವಾ?
ಯಾಕೆ ಇಷ್ಟೆಲ್ಲಾ ಬರೀತಿದೀನಿ ಅಂದ್ರೆ , ಕಳೆದ ಎಂಟು ದಿನಗಳಿಂದ ನನಗೆ ವೈರಲ್ ಫೀವರ್, ನಿನ್ನೆಯಿಂದ ಹೆಂಡತಿ ಹಾಗೂ ಮಗ ಇಬ್ರಿಗೂ ಜ್ವರ ಶುರುವಾಗಿದೆ. ಎಲ್ಲರೂ ಒಟ್ಟಿಗೆ ಡಾಕ್ಟರ್ ಹತ್ತಿರ ಹೋಗಿ ಸೂಜಿ ಹಾಕಿಸಿಕೊಂಡು ಬಂದಿದ್ದಾಯ್ತು.ಮನೇಲಿ ಯಜಮಾನನಿಗೆ,ಮಕ್ಕಳಿಗೆ ಹುಷಾರು ತಪ್ಪಿದರೆ ಯಜಮಾಂತಿ ಎಲ್ಲರನ್ನೂ ಸುದಾರಿಸಿಬಿಡ್ತಾಳೆ. ಕಾಲಕಾಲಕ್ಕೆ ಹೊಟ್ಟೆಗೆ ಚೆನ್ನಾಗಿಯೇ ಆಗುತ್ತೆ.ಆದರೆ ಅದೇ ಯಜಮಾಂತಿಯೇ ಮಲಗಿಬಿಟ್ರೆ ದೇವರೇ ಗತಿ. ದೇವರೂ ಕಾಪಾಡುವುದಕ್ಕಾಗುಲ್ಲ. ಆಗಲೇ ಹೇಳಿದಂತೆ ಮನೇಲಿ ಎಲ್ಲರೂ ಹುಷಾರು ತಪ್ಪಿದ್ದೇವೆ. ಯಾರನ್ನು ಯಾರು ಸುದಾರಿಸಬೇಕು? ನನ್ನ ಮಕ್ಕಳಿಗೆ ಒಬ್ಬನಿಗೆ ೨೪ ವರ್ಷ, ಒಬ್ಬನಿಗೆ ೨೩ ವರ್ಷ. ದೊಡ್ಡೋನು ಬಿ.ಇ ಮಾಡಿ ಮೈಸೂರಲ್ಲಿ ಕೆಲಸದಲ್ಲಿದ್ದಾನೆ. ಚಿಕ್ಕೊನುದ್ದೂ ಬಿ.ಇ.ಆಗಿದೆ, ಎಂ.ಬಿ.ಎ ಮಾಡ್ತಾ ಇದ್ದಾನೆ. ಹುಷಾರು ಸ್ವಲ್ಪ ತಪ್ಪಿದರೆ ಸಾಕು ಇಬ್ಬರೂ ಎಳೆ ಮಕ್ಕಳಂತೆಯೇ; ಇವತ್ತು ಚಿಕ್ಕವನಿಗೆ ಹುಷಾರು ತಪ್ಪಿದ್ದರಿ೦ದಲೇ ನಮ್ಮ ಗೌರತ್ತೆ ನೆನಪಾದದ್ದು.ನನ್ನ ಮಗನಿಗೆ ಸ್ವಲ್ಪ ಜ್ವರ ತಲೆನೋವು ಬಂದರೆ ಸಾಕು ನನ್ನ ತೊಡೆ ಮೇಲೆ ಮಲಗಿ ಬಿಡ್ತಾನೆ. ಅವನಿಗೆ ನಿದ್ರೆ ಹತ್ತುವ ವರಗೂ ತಲೆ ಸವರುತ್ತಾ ಇರ್ಬೇಕು. ನನಗೂ ಹುಷಾರಿಲ್ಲ. ಇಂತಾ ಸ್ಥಿತಿಯಲ್ಲೂ ಮಗನಿಗೆ ಸುದಾರಿಸಲೇ ಬೇಕಲ್ಲಾ!!
ನಿಜವಾಗಲೂ ಇಂತಹ ಸಂದರ್ಭದಲ್ಲಿ ಎಲ್ಲಾ ಯೋಚನೆಗಳೂ ಬರುತ್ತೆ.
ನನ್ನ ಬಾಲ್ಯದ ನೆನಪು ಕಾಡುತ್ತೆ. .. . ...........
ನನ್ನ ಬಾಲ್ಯ.....ಅದೊಂದು ದೊಡ್ಡ ಅನುಭವ. ...ಕಿತ್ತು ತಿನ್ನುವ ಬಡತನ , ಒಂದೇ ಮಾತಲ್ಲಿ ಹೇಳಬೇಕೂ ಅಂದ್ರೆ ತುತ್ತು ಅನ್ನಕ್ಕೆ ಹಾಹಾಕಾರ. ಇಲ್ವೆ ಇಲ್ಲಾ ! ಆ ಕಾಲವೇ ಹಾಗೆ. ಅಂದರೆ ಸುಮಾರು ನಾಲ್ಕು ದಶಕಗಳ ಹಿಂದಿನ ಮಾತು. ಅವತ್ತಿನ ಬಡತನದ ಬಗೆಗೆ ಸಮಯ ಬಂದಾಗ ಬರೀತೀನಿ. ಆದರೆ ಈಗ ಕೇವಲ ನಮ್ಮ ಗೌರತ್ತೆ ಬಗ್ಗೆ ಮಾತ್ರ ನೆನಪು ಮಾಡಿಕೊಳ್ಳಬೇಕು, ಇವತ್ತಿಗೆ ಅಷ್ಟೆ ಸಾಕು.
ಗೌರತ್ತೆ ನಮ್ಮ ಅಪ್ಪನ ಅಕ್ಕ. ಅವಳ ಹತ್ತು ವರ್ಷಕ್ಕೆ ಅರಕಲಗೂಡು ಹತ್ತಿರ ಮಗ್ಗೆಗೆ ಕೊಟ್ಟು ಮದುವೆ ಯಾಗಿತ್ತ೦ತೆ. ಮದುವೆ ಯಾದ ಒ೦ದು ವರ್ಷದಲ್ಲಿ ಗಂಡ ಗೊಟಕ್. ಅವತ್ತಿನಿ೦ದ ಗೌರತ್ತೆ ನಮ್ಮ ಮನೆಯಲ್ಲೇ. ಮದುವೆ ಅ೦ದ್ರೆ ಏನು ಅ೦ತಾ ಗೊತ್ತಾಗುವುದಕ್ಕೆ ಮು೦ಚೆ ವಿಧವೆಯ ಪಟ್ಟ. ಅಬ್ಭಾ ಎಂತಾ ಅನ್ಯಾಯ? ಅವತ್ತಿನಿ೦ದ ಅವಳ ಸ್ವ೦ತ ಜೀವನ ಅ೦ದ್ರೆ ಏನು ಅ೦ತಾ ಅವಳಿಗೆ ಗೊತ್ತೇ ಇಲ್ಲ.ನಮ್ಮಪ್ಪನ ಮದುವೆ ಆಗಿ ನಾವೆಲ್ಲಾ ಹುಟ್ಟಿದಮೇಲೆ ನಮನ್ನು ನಮ್ಮಮ್ಮನಿಗಿ೦ತ ಚೆನ್ನಾಗಿ ಸಲಹಿದ್ದು ನಮ್ಮ ಗೌರತ್ತೆಯೇ. ನಮ್ಮ ಗೌರತ್ತೆ ಸಾಯುವ ವರೆಗೂ ನಮ್ಮ ಮನೆಯ ಮಕ್ಕಳೆಲ್ಲಾ ಬಾರೆ-ಹೋಗೆ ಅಂತಾನೆ ಅ೦ತಿದ್ದು. ಅವರಿಗೆ[ಅವಳಿಗೆ] ಅದೇ ಚೆನ್ನಾ.ನಮ್ಮ ಮನೆಯಲ್ಲಿ ಬಡತನವಿದ್ದರೂ ನಾಲ್ಕಾರು ದನಗಳು ಇದ್ದವು. ಹಾಗಾಗಿ ಕರಾವು ಇತ್ತು. ಅವತ್ತು ಊಟ ಮಾಡಿರಲಿ ಬಿಡಲೀ ಮಲಗುವಾಗ ಎಲ್ಲಾ ಮಕ್ಕಳಿಗೂ ನಮ್ಮ ಗೌರತ್ತೆ ಒಂದು ಬಟ್ಟಲು ಹಾಲು ಕುಡಿಸಿಯೇ ಮಲಗಿಸ್ತಾ ಇದ್ದಳು. ಒ೦ದುವೇಳೆ ನಿದ್ರೆ ಬಂದು ಮಲಗಿದ್ದರೂ ಎಬ್ಬಿಸಿ ಹಾಲು ಕುಡಿಸಿಯೇ ಮಲಗಿಸುತ್ತಿದ್ದಳು. ಸ್ವಲ್ಪಾ ತಲೆನೋವು ಅಂದ್ರೆ ಸಾಕು ತೊಡೆ ಮೇಲೆ ಮಲಗಿಸಿಕೊಂಡು ಹಿತವಾಗಿ ತಲೆ ನೇವರಿಸಿ ನಿದ್ರೆ ಮಾಡಿಸಿದಮೇಲೆ ನಮ್ಮಮ್ಮನನ್ನು ಕರೆದು " ನರಸಮ್ಮಾ, ಮಗುವನ್ನು ಹಾಸಿ ಮಲಗಿಸು, ನಿದ್ರೆ ಮಾಡಿದೆ ಅಂತಾ ಹೇಳಿ, ನಿದಾನವಾಗಿ ಹಾಸಿಗೆಯಲ್ಲಿ ಮಲಗಿಸುತ್ತಿದ್ದರು.[ಹಾಸಿಗೆ ಅ೦ದ್ರೆ ಹೇಗಿತ್ತು ಅನ್ನೋದಕ್ಕೆ ಒ೦ದು ಕಥೆ ಬರೀ ಬೇಕಾಗುತ್ತೆ , ಸಧ್ಯಕ್ಕೆ ಆರುಜನ ಮಕ್ಕಳು, ಅಮ್ಮ, ಅತ್ತೆ, ಅಜ್ಜಿ ಸೇರಿ ಒಂದು ಚಾಪೆಯ ಮೇಲೆ ಒ೦ದು ಹರಕಲು ಜಮಖಾನ.ಅಪ್ಪ ಮಾತ್ರ ಬೇರೆ ಮಲಗ್ತಾ ಇದ್ರು ] ಇನ್ನು ನಮ್ಮಪ್ಪನ ಬಗ್ಗೆ ಅವರಿಗಿದ್ದ ಪ್ರೀತಿ! ಅದನ್ನು ಅಳೆಯಲು ಸಾಧ್ಯವೇ ಇಲ್ಲ. ನಮ್ಮಪ್ಪ ಮಾತ್ರ ಅವರನ್ನು ಸಿಕ್ಕಾಪಟ್ಟೆ ಬೈತಿದ್ರು. ಆದರೆ ನಮ್ಮತ್ತೆ ಮಾತ್ರ ಅವಳ ತಮ್ಮನನ್ನು ಒ೦ದು ದಿನಾ ಬೈಲಿಲ್ಲ.ನಮ್ಮತ್ತೆ ಜೊತೆಗೆ ನಮ್ಮಜ್ಜಿ ,ನಮ್ಮ ದೊಡ್ಡಮ್ಮ ಎಲ್ಲಾ ಸೇರಿ ಐದುಜನ ದೊಡ್ಡೋರು ಮನೇಲಿದ್ರು. ಬಡತನ ಇದ್ದರೂ ಜೀವನಕ್ಕೆ ಸೆಕ್ಯೂರಿಟಿ ಹೇಗಿತ್ತು ಅಂದ್ರೆ ಮನೇಲಿ ಯಾರಿಗಾದರೂ ಹುಷಾರಿಲ್ಲ ಎಂದರೆ ಯೋಚಿಸಲೇ ಬೇಕಿರಲಿಲ್ಲ. ನೋಡೋದಕ್ಕೆ ಸದಾಕಾಲ ನಮ್ಮತ್ತೆ. ಇನ್ನೊಂದು ವಿಷಯ ಹೇಳಲೇ ಬೇಕು-ನಮ್ಮತ್ತೆಗೆ ಅವರು ಸಾಯೋ ವರಗೂ ಹುಶಾರೇ ತಪ್ಪಲಿಲ್ಲ. ಕಾರಣ ಗೊತ್ತೇ? ಅವರ ದೇಹದಬಗ್ಗೆ ಅವರಿಗೆ ಮಮಕಾರವೇ ಇರಲಿಲ್ಲ ವಲ್ಲ. ಅಧ್ಯಾತ್ಮದಲ್ಲಿ ಈ ದೇಹ ನಾನಲ್ಲ ಅಂತಾ ಹೇಳ್ತಾರೆ. ಆದ್ರೆ ಅಮ್ಮತ್ತೆಗೆ ಅಧ್ಯಾತ್ಮ ಅಂದ್ರೆ ಗೊತ್ತಿರಲಿಲ್ಲ. ಅವರಿಗೆ ಗೊತ್ತಿದ್ದ ವಿಷಯ ಅಂದ್ರೆ ಅವರ ತಮ್ಮನ ಮಕ್ಕಳು ಅಲ್ಲಲ್ಲ ಅವರ ಮಕ್ಕಳು ಸುಖವಾಗಿರಲಿ- ಎಂಬುದು ಅಷ್ಟೆ.
ಈಗ....ನಮ್ಮಪ್ಪ ಅಮ್ಮಾ , ನಮ್ಮತ್ತೆ ಕೂಡ ಇಲ್ಲ. ಹೋಗಿ ೮-೧೦ ವರ್ಷ ವಾಯ್ತು. ಜೀವನಕ್ಕೆ ಯೋಚನೆ ಇಲ್ಲ. ಆದರೆ ಗೌರತ್ತೆ ಅಂತಾ ತಾಯಿ ಇಲ್ಲದಿರುವ ಕೊರತೆ ನಿತ್ಯವೂ ಕಾಡುತ್ತೆ.
ಒಲೆಗೊ೦ದು ಒದೆಗೊರಡು ,ಮನೆಗೊ೦ದು ಮುದಿಗೊರದು ಇರಬೇಕೂ ಅಂತಾ ನಮ್ಮಮ್ಮ ಹೇಳ್ತಾ ಇದ್ದರು.
ಹರಿಹರಪುರಶ್ರೀಧರ್