ಮಂಗಳವಾರ, ಜನವರಿ 31, 2012


ಮನವಿ:
ವೇದಸುಧೆಯ, ವಾಕ್ಪಥದ, ಮತ್ತು ಸಂಪದದ ಬೆಂಗಳೂರಿನಲ್ಲಿರುವ ನನ್ನ ಮಿತ್ರರೇ,
ಅಂತರ್ಜಾಲತಾಣದಲ್ಲಿ ಸಾಮಾಜಿಕ ಕಳಕಳಿ ಇರುವ   ಮಿತ್ರರು ಪರಿಚಯವಾದಾಗ  ಬಲು  ಸಂತೋಷವಾಗುತ್ತೆ.  ನಾವು ಕೆಲವರು ಬೆಂಗಳೂರಿನಿಂದ ಹೊರಗಿದ್ದೇವೆ. ಅಪರೂಪಕ್ಕೆ ಯಾವುದಾದರೂ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಾಗ ಒಮ್ಮೆ ಭೇಟಿಯಾದರೆ ಸಿಗುವ ಸಂತೋಷಕ್ಕೆ ಪಾರವಿಲ್ಲ. ಹಾಗೊಂದು ಅವಕಾಶ ಇಲ್ಲಿದೆ. ನನ್ನ ಮಗನ ವಿವಾಹ ನಿಶ್ಚಿತಾರ್ಥವು 5.2.2012  ಭಾನುವಾರ ಬೆಂಗಳೂರಿನಲ್ಲಿ ನಡೆಯುತ್ತೆ. ವಿವರ ತಿಳಿಸುವೆ. ಸುಮಾರು 12.00 ಕ್ಕೆ  ನಾನು ಬಿಡುವಾಗಬಹುದು. ಆ ಹೊತ್ತಿಗೆ ಮಿತ್ರರು  ದಯಮಾಡಿ ಬನ್ನಿ. ಒಂದಿಷ್ಟು ಹರಟೆ, ಪರಿಚಯ ನಂತರ ಊಟ ಮುಗಿಸಿ ಹಿಂದಿರುಗೋಣ.

ಸ್ಥಳ: ಶ್ರೀ ಸಾಯಿ ಕಮ್ಯುನಿಟಿ ಹಾಲ್, ಮಾರುತಿ ವೃತ್ತ.
4 ನೆ ಅಡ್ಡರಸ್ತೆ, 14  ನೆ ಮುಖ್ಯರಸ್ತೆ,  ಹನುಮಂತನಗರ , ಬೆಂಗಳೂರು-19 

ದಿನಾಂಕ: 5.2.2012  ಭಾನುವಾರ

ನಿಮ್ಮ 
ಹರಿಹರಪುರಶ್ರೀಧರ್
ಮೊ: 9663572406 

ಸೋಮವಾರ, ಜನವರಿ 30, 2012

ಭಾನುವಾರ, ಜನವರಿ 15, 2012

ಗುರುವಾರ, ಜನವರಿ 12, 2012

ಸ್ವಗತ

ಆರ್.ಎಸ್.ಎಸ್. ಮೂಲಕ ಸಾಮಾಜಿಕ ಚಟುವಟಿಕೆ ಆರಂಭಿಸಿ ನಾಲ್ಕು ದಶಕಗಳಿಂದ ಒಂದಲ್ಲಾ ಒಂದು ಚಟುವಟಿಕೆ ಮಾಡಿಕೊಂಡೇ ಬಂದಿದ್ದಾಯ್ತು. ಹಾಗೇ ಒಮ್ಮೆ ಸಿಂಹಾವಲೋಕನ ಮಾಡಿಕೊಂಡರೆ ಆದ ಪರಿಣಾಮದ ಬಗ್ಗೆ ಸಮಾಧಾನ ಇದೆಯಾ ಎಂದರೆ ಇಲ್ಲಾ ಅಂತಾನೇ ಅನ್ನಿಸುತ್ತೆ. ಯಾವುದಾದರೂ ಕಾರ್ಯಕ್ರಮ ಹಮ್ಮಿಕೊಂಡರೆ ಎಲ್ಲದಕ್ಕೂ ಹಣ ಬೇಕಲ್ಲಾ! ಸರಿ, ಯಾವಾಗ್ಲೂ ಕೇಳಿದವರನ್ನೇ ಕೇಳುವುದಕ್ಕೂ ಬೇಸರ. ಆದರೆ ವಿಧಿ ಇರುತ್ತಿರಲಿಲ್ಲ. ಕಾರ್ಯಕ್ರಮ ಯಶಸ್ವಿಯಾಗಬೇಕಲ್ಲಾ! ಹಾಗಾಗಿ ಸಹೃದಯಿಗಳ ಹತ್ತಿರ ನಮ್ಮ ಅಹವಾಲು ಮಂಡಿಸಿ ಹಣವನ್ನು ಪಡೆದು ಕಾರ್ಯಕ್ರಮ ಮುಗಿಸುವಹೊತ್ತಿಗೆ, ಇನ್ನುಮುಂದೆ ಯಾವ ಕಾರ್ಯಕ್ರಮವೂ ಬೇಡ ಅಂದುಕೊಳ್ಳುವುದು, ಪುನ: ಯಾರೋ ಸ್ನೇಹಿತರ ಹತ್ತಿರ ಮಾತನಾಡುವಾಗ ಯಾವುದಾದರೂ ಒಂದು ಕಾರ್ಯಕ್ರಮ ನಿರ್ಧರಿಸಿ ಮತ್ತೆ ಬಿಕ್ಷಾಪಾತ್ರೆ ಹಿಡಿದು ಅವರಿವರ ಮನೆ ಸುತ್ತುವುದು.
ಇದು ನನ್ನಂತಹ ಎಲ್ಲಾ ಸಾಮಾಜಿಕ ಕಾರ್ಯಕರ್ತರ ಅನುಭವವೇ ಹೌದು. ಆದರೆ  ಒಂದು ಕಾರ್ಯಕ್ರಮಮಾಡಿ ಖರ್ಚಿನ ಹತ್ತು ಪಟ್ಟು ವಸೂಲಿಮಾಡಿ ಹಣ ಮಾಡುವವರಿಗೇನೂ ಕೊರತೆ ಇಲ್ಲ. ಆದರೆ ನನ್ನ ಅನುಭವದಲ್ಲಿ ನಾನು ಯಾರ್ಯಾರ ಜೊತೆ ಕಾರ್ಯಕ್ರಮ ಮಾಡಿದರೂ ನಾವೆಲ್ಲಾ ಸೇರಿ ಕೊರತೆ ತುಂಬುವುದೇ ಸಾಮಾನ್ಯ ಅನುಭವ. ಆದರೆ ಕಾರ್ಯಕ್ರಮಗಳಮೂಲಕ ಹಲವಾರು ವಿದ್ವಾಂಸರ ಮಾತುಗಳು ಕಿವಿಯ ಮೇಲೆ ಬಿದ್ದು ನಮ್ಮ ಜೀನನಕ್ಕೆ ಒಳಿತಾಗಿರುವುದೂ  ಅಷ್ಟೇ ಸತ್ಯ.
ಆದರೆ ಕೆಲವು ಸಾರ್ವಜನಿಕ ಸಮಾರಂಭಗಳಲ್ಲಿ ಅಪಾತ್ರರಿಂದ ಹಣ ತೆಗೆದುಕೊಂಡ ತಪ್ಪಿಗೆ ಅವರನ್ನು ವೇದಿಕೆಯ ಮೇಲೆ ಕುಳಿಸಿ ಅವರ ಮಾತು ಕೇಳುವಾಗಲಂತೂ ಬಲು ಬೇಸರವಾಗಿದೆ. ಅಬ್ಭಾ! ಕೆಲವರಂತೂ ಐವತ್ತು ಸಾವಿರದಿಂದ ಲಕ್ಷ ರೂಪಾಯಿ ಹಣ ಖರ್ಚು ಮಾಡಲು ರಡಿ. ಅವರನ್ನು ಹೊಗಳಿ ಮೇಲೇರಿಸಬೇಕು ,ಅಷ್ಟೆ. ಸಾಮಾಜಿಕ ಕಳಕಳಿಯಿಂದ ಊಟ,ನಿದ್ರೆ ಬಿಟ್ಟು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಹಲವರಿಗೆ ಇವೆಲ್ಲಾ ನುಂಗಲಾರದ ತುತ್ತು. ಯಾರೋ ಬಡಪಾಯಿ ವಿದ್ಯಾರ್ಥಿಗೆ ಸಹಾಯ ಮಾಡಬೇಕೆನಿಸುತ್ತೆ, ಕೆಲವರು ಅದಕ್ಕಾಗಿ ಹಣ ಕೊಡುತ್ತಾರೆ, ಆದರೆ ಹಣಕೊಡುವವರ ಹಣದ ಮೂಲದ ಬಗ್ಗೆ ಯೋಚಿಸಿದಾಗ, ಅಯ್ಯೋ ಇಂತವರಿಂದ ಹಣ ತೆಗೆದುಕೊಂಡು ಇಂತಹಾ ಸತ್ಕಾರ್ಯ ಮಾಡುವ ಪರಿಸ್ಥಿತಿ ಬಂತಲ್ಲಾ, ಎಂದು ನೋವು ಅನುಭವಿಸಿರುವ ದಿನಗಳು ಹಲವಾರು.
ಲೋಕ ಕಲ್ಯಾಣಾರ್ಥ ಒಂದು ಹೋಮದ ಯೋಜನೆಯಾಯ್ತು. ಹೋಮದ ಖರ್ಚು ಸುಮಾರು25ಸಾವಿರ. ಉಳಿದ ಖರ್ಚು 40 ಸಾವಿರ. ಒಟ್ಟು ಸುಮಾರು 60 ರಿಂದ70 ಸಾವಿರ ರೂಪಾಯಿಯ ಅಂದಾಜು. ಶ್ರೀಮಂತರೊಬ್ಬರು ಹೋಮದ ಖರ್ಚು ನನಗಿರಲಿ, ಎಂದರು. ಕಾರ್ಯಕರ್ತರ ಸಂತೋಷಕ್ಕೆ ಪಾರವೇ ಇಲ್ಲ. ಪ್ರಮುಖ ಖರ್ಚಿಗೆ ದಾರಿಯಾದಮೇಲೆ ಉಳಿದದ್ದನ್ನು ಜನರಿಂದ ಸಂಗ್ರಹಿಸಿದರಾಯ್ತೆಂಬ ವಿಶ್ವಾಸ. ಸಾರ್ವಜನಿಕರಿಂದ ಸುಮಾರು ಐವತ್ತು ಸಾವಿರ ರೂಪಾಯಿ ಸಂಗ್ರಹ ವಾಯ್ತು. ಈ ಶ್ರೀಮಂತರೊಬ್ಬರಿಂದಲೇ 25 ಸಾವಿರ ರೂಪಾಯಿ ಬಂದಿದ್ದಾಯ್ತು. ಹೋಮಕ್ಕೆ ಪ್ರಧಾನವಾಗಿ ಯಾರು ಕುಳಿತುಕೊಳ್ಳ ಬೇಕು?           ಸೇವಾರ್ಥದಾರರು ತಾನೇ?
ಅವರ ಹಣದ ಮೂಲದ ಪರಿಚಯವಿದ್ದ ನನಗೆ ಆದ ದು:ಖ ಅಷ್ಟಿಷ್ಟಲ್ಲಾ. ಅಂದು ನಾನು ನಿರ್ಧರಿಸಿದೆ. ಇನ್ನು ಈ ರೀತಿಯ ಖರ್ಚುಬರುವ ಕಾರ್ಯಕ್ರಮವನ್ನು ಮಾಡುವುದೂ ಬೇಡ. ಅನೈತಿಕ ಗಳಿಕೆಯ ಹಣವನ್ನು ಪಡೆಯುವುದೂ ಬೇಡ. ಅಂದಿನಿಂದ ನಾನೇನೋ ಅಂತಹ ಕಾರ್ಯಕ್ರಮ ನಿಲ್ಲಿಸಿದೆ. ಆದರೆ ಇಂತಹ ಕಾರ್ಯಕ್ರಮಗಳನ್ನು ಮಾಡುವ ಜನರಿಗೇನೂ ಕೊರತೆಇಲ್ಲವಲ್ಲಾ! ಮುಂದಿನ ವರ್ಷ ಹೋಮ ಇನ್ನೂ ಅದ್ಧೂರಿಯಾಗೇ ನಡೆಯಿತು. ನನ್ನನ್ನೂ ಕರೆದಿದ್ದರು. ಕೊನೆಗೆ ಭರ್ಜರಿ ಊಟವೂ ಆಯ್ತು. ಅಂದು ಸಂಜೆಯೇ ಕಾರ್ಯಕರ್ತರಿಗೆ ಪಾರ್ಟಿ ಬೇರೆ ಅರೆಂಜ್ ಆಗಿತ್ತೆಂಬ ಸುದ್ಧಿ ತಿಳಿದಕೂಡಲೇ ಮಧ್ಯಾಹ್ನ ಮಾಡಿದ ಊಟವನ್ನೆಲ್ಲಾ ಕಕ್ಕಿಬಿಡಲೇ ಎನ್ನುವಷ್ಟು ದು:ಖವಾಯ್ತು.
ಕಳೆದ ಹತ್ತಾರು ವರ್ಷದಿಂದ ಇಂತಹ ಹಲವು ಅನುಭವವಾಗುತ್ತಲೇ ಇದೆ. ಅರವತ್ತರ ಗಡಿ ಸಮೀಪಿಸುತ್ತಿರುವ ಈಗ ಒಂದು ಕಟು ನಿರ್ಧಾರ ಮಾಡಿರುವೆ. ಇನ್ನು ಸಾರ್ವಜನಿಕರಿಂದ ಹಣ ಪಡೆದು ಮಾಡುವ ಕಾರ್ಯಕ್ರಮ ನನ್ನಿಂದಾಗುವುದು ಬೇಡ. ಇನ್ನಾದರೂ ವೈಯಕ್ತಿಕ ಸಾಧನೆಗೆ ಗಮನ ಕೊಡೋಣವೆಂದು ಆ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿರುವೆ. ಸಾಮಾಜಿಕ ಕಾರ್ಯಕರ್ತರು ಮತ್ತೆ ಮತ್ತೆ ನನ್ನನ್ನು ಹಿಂದಕ್ಕೆ ಎಳಿಯದಿದ್ದರೆ ಅದು ನನಗೆ ಮಾಡುವ ಮಹದುಪಕಾರ.