ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ [ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕಿಂತ ಮಿಗಿಲು] ಹರಿಹರಪುರದಲ್ಲಿ ಜನ್ಮ ತಾಳಿರುವ ಎಲ್ಲರಿಗಾಗಿ...ಹಾಗೂ ಅವರ ಬಂಧುಬಳಗಕ್ಕಾಗಿ...
ಶುಕ್ರವಾರ, ಸೆಪ್ಟೆಂಬರ್ 24, 2010
ವಿಶ್ವ ಗುರು ಭಾರತ
"ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್|
ತೇನ ತ್ಯಕ್ತೇನ ಭುಂಜೀತಾ: ಮಾಗೃಧ: ತಸ್ಯ ಸ್ವಿದ್ ಧನಮ್||
ಈ ಜಗತ್ತೆಲ್ಲಾ ಈಶ್ವರ ಮಯ. ಅವನಿಂದಲೇ ಎಲ್ಲವೂ. ಅವನಿಂದ ಅಂದರೆ ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೇ ಅರ್ಪಿಸಿ ಮಿಕ್ಕಿದ್ದನ್ನು ಪ್ರಸಾದ ರೂಪದಲ್ಲಿ ಅನುಭವಿಸು. ಯಾರ ಧನಕ್ಕೂ ಆಸೆ ಪಡಬೇಡ.
ಇದು ನಮ್ಮ ದೃಷ್ಟಿಕೋನ. ಅಂದರೆ ನನ್ನದು ಎಂಬುದು ಏನೂ ಇಲ್ಲ. ಎಲ್ಲವೂ ಭಗವಂತನ ಕೃಪೆಯಿಂದ ಪ್ರಕೃತಿಯು ನಮಗೆ ಕೊಟ್ಟಿದೆ. ಆದ್ದರಿಂದ ಅವನಿಂದ ಪಡೆದದ್ದನ್ನು ಅವನಿಗೇ ಅರ್ಪಿಸಿ ಮಿಕ್ಕಿದ್ದನ್ನು ಪ್ರಸಾದ ರೂಪದಲ್ಲಿ ಅನುಭವಿಸುವಾಗ ಅದರಲ್ಲಿ ಸಿಗುವ ಆನಂದವು ಅಪಾರ. ಅಷ್ಟೇ ಅಲ್ಲ. ಇನ್ನೂ ಒಂದು ಮಾತಿದೆ...
ಯಾವತ್ ಭ್ರಿಯೇತ ಜಠರಮ್ ತಾವತ್ ಸ್ವತ್ವಮ್ ದೇಹಿನಾಮ್|
ಅಧಿಕಮ್ ಯೋಭಿ ಮನ್ಯೇತ ಸ ಸ್ತೇನೋ ದಂಡ ಮರ್ಹತಿ||
ದೇಹ ಧಾರಣೆಗೆ ಎಷ್ಟು ಅಗತ್ಯವೋ ಅಷ್ಟನ್ನು ತೆಗೆದುಕೋ, ಇದಕ್ಕಿಂತ ಹೆಚ್ಚಿನ ಆಸೆ ಪಡುವವನು ಕಳ್ಳ. ಅವನು ಶಿಕ್ಷಾರ್ಹ.
ಇದು ನಮ್ಮ ಹೆಚ್ಚುಗಾರಿಕೆ. ನಮ್ಮದು ತ್ಯಾಗದ ಸಂಸ್ಕೃತಿ.ತ್ಯಾಗಮಯ ಜೀವನದಲ್ಲೇ ಆನಂದ ಪಡುವ ಸಂಸ್ಕೃತಿ ನಮ್ಮದು. ಪ್ರಕೃತಿಯಲ್ಲಿ ಯಥೇಚ್ಛವಾಗಿ ಸಂಪತ್ತು ಇದೆ , ಎಂದು ಅದನ್ನು ಲೂಟಿಮಾಡುವಂತಿಲ್ಲ. ತನ್ನ ದೇಹಧಾರಣೆಗೆ ಅಗತ್ಯವಿರುವಷ್ಟು ಮಾತ್ರ ಪಡೆದುಕೋ, ಅದಕ್ಕಿಂತ ಹೆಚ್ಚಿನ ಆಸೆಪಟ್ಟರೆ ಅದು ಶಿಕ್ಷಾರ್ಹ ಅಪರಾಧ.ಎಂತಹಾ ಅದ್ಭುತ ಚಿಂತನೆ ನಮ್ಮದು!! ಹೀಗೆ ಸರಳವಾಗಿ ಬದುಕುವಾಗ ಇತರರ ಬಗ್ಗೆ ನಮ್ಮ ಧೋರಣೆ ಏನು? ಅದಕ್ಕಾಗಿಯೇ ನಿತ್ಯವೂ ಸಂಕಲ್ಪ ಮಾಡುವಾಗ ನಾವು ಹೇಳುತ್ತೇವೆ.....
ಸರ್ವೇಪಿ ಸುಖಿನ: ಸಂತು
ಸರ್ವೇ ಸಂತು ನಿರಾಮಯಾ:
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದು:ಖ ಭಾಗ್ಭವೇತ್||
ಎಲ್ಲರೂ /ಎಲ್ಲವೂ ಸುಖವಾಗಿರಲಿ. ಎಲ್ಲರೂ ನೆಮ್ಮದಿಯಿಂದಿರಲಿ. ಎಲ್ಲವೂ ಸಮೃದ್ಧವಾಗಿರಲಿ. ಯಾರೂ ದು:ಖಿತರಾಗುವುದು ಬೇಡ.
ನಾವು ಸಂಕಲ್ಪ ಮಾಡುವಾಗ ಕೇವಲ ನನ್ನ ಕುಟುಂಬ, ನನ್ನ ಬಂಧುಬಳಗ, ನನ್ನ ಜಾತಿ, ನನ್ನ ಮತ, ನನ್ನ ಊರಿಗೆ ಒಳ್ಳೆಯದಾಗಲೀ ಎಂದು ಪ್ರಾರ್ಥಿಸಲಿಲ್ಲ. ಬದಲಿಗೆ " ಸರ್ವೇಪಿ" ಅಂದರೆ
"ಶನ್ನೋ ಅಸ್ತು ದ್ವಿಪದೇ ಶಂ ಚತುಷ್ಪದೇ" ಎಂದೂ ಹೇಳಿದೆವು. ಎರಡು ಕಾಲಿನ ಮನುಷ್ಯರಿಗಷ್ಟೇ ಅಲ್ಲ, ನಾಲ್ಕು ಕಾಲಿನ ಪ್ರಾಣಿ ಸಂಕುಲಕ್ಕೂ, ಪಶು-ಪಕ್ಷಿಗಳಿಗೂ, ಕ್ರಿಮಿಕೀಟ ಗಳಿಗೂ ,ಸಸ್ಯ ಸಂಕುಲಕ್ಕೂ ಒಳ್ಳೆಯದಾಗಲೆಂದು ನಿತ್ಯ ಪ್ರಾರ್ಥಿಸುವ ನಾವು ಅದಕ್ಕೆ ಅನುಗುಣವಾಗಿ ಪ್ರಕೃತಿಯ ದುರುಪಯೋಗ ವಾಗದಂತೆ ಜೀವನ ನಡೆಸುತ್ತಿದ್ದೆವು.
ವಸುಧೈವ ಕುಟುಂಬಕಮ್- ಅಂದರೆ ಇಡೀ ವಿಶ್ವವೇ ಒಂದು ಕುಟುಂಬವೆನ್ನುವ ನಾವು ಉಳಿದ ದೇಶಗಳಿಗೆ ಆದರ್ಶವಾಗಿ ಜೀವನ ನಡೆಸುತ್ತ ಭಾರತವು "ವಿಶ್ವಗುರು" ಎಂಬ ಮಾನ್ಯತೆಗೆ ಕಾರಣರಾಗಿದ್ದೆವು. ವಿಶ್ವ ಮಂಗಲದ ಚಿಂತನೆ ನಡೆಸುವಾಗ ಈ ನಮ್ಮ ಚಿಂತನೆಗಳು ನಮಗೆ ದಾರಿ ದೀಪವಾಗಬೇಕು.
ಆದರೆ ಕಾಲ ಕಳೆದಂತೆ ಪಶ್ಚಿಮದತ್ತ ವಾಲುತ್ತಾ ಬಂದೆವು.ನಮ್ಮ ಚಿಂತನೆಗೆ ವಿರುದ್ಧವಾಗಿ ಬದುಕುತ್ತಾ ಬಂದೆವು.ಭೋಗ ಜೀವನದ ದಾಸರಾದೆವು. " ಆತ್ಮವತ್ ಸರ್ವ ಭೂತೇಶು" ಎಂಬ ಮಾತನ್ನು ಮರೆತು ದುರ್ಬಲರನ್ನು ಶೋಷಣೆ ಮಾಡಿದೆವು. ಬೇಕು-ಬೇಕೆಂಬ ದುರಾಸೆಯಿಂದ ಪ್ರಕೃತಿಯಮೇಲೆ ದೌರ್ಜನ್ಯ ನಡೆಸಿದೆವು.ನಮ್ಮ ಭೋಗದ ಜೀವನಕ್ಕೆ ಸಿಲುಕಿ ಕಾಡುಗಳು ನಾಷವಾಯ್ತು. ನಮ್ಮ ಪೂರ್ವಜರು ಕಟ್ಟಿದ ಕೆರೆಕಟ್ಟೆಗಳನ್ನು ಒಡೆದು ಕಟ್ಟಡ ನಿಮಿಸಿದೆವು. ಪ್ರಕೃತಿ ಮುನಿದು ಮಳೆ ಬೆಳೆ ಇಲ್ಲ ದಂತಾಯ್ತು. ಆಗಲೂ ನಾವು ಎಚ್ಚೆತ್ತುಕೊಳ್ಳದೆ ಭೂಮಿಯನ್ನೇ ಸೀಳಿ ನೀರು ತಂದೆವು.ಹತ್ತಾರು ವರ್ಷಗಳು ಭೂತಾಯಿಯ ಅಂತರ್ಜಲ ಬಸಿದು ಬರಿದಾದಯ್ತು. ಭೂಕಂಪಗಳಿಗೆ, ಪ್ರಕೃತಿ ವಿಕೋಪಕ್ಕೆ ತುತ್ತಾದೆವು. ಆದರೂ ನಾವು ಬದಲಗಲಿಲ್ಲ.
ಅಮೃತದಂತಹ ಹಾಲನ್ನು ಕರೆಯುತ್ತಿದ್ದ ನಾಡತಳಿ ಹಸುಗಳ ಸಂಖ್ಯೆ ನಮ್ಮ ದುರಾಸೆಗೆ ಬಲಿಯಾಯ್ತು. ಗೋಮಾತೆಯೆಂಬ ಶ್ರದ್ಧೆಯಿಂದ ಪೂಜಿಸುತ್ತಿದ್ದ ನಾವೇ ಗೋವುಗಳನ್ನು ಕಟುಕರ ಪಾಲು ಮಾಡಿದೆವು. ಅಧಿಕ ಹಾಲಿನ ಇಳುವರಿಗಾಗಿ ನಾಡಹಸುಗಳನ್ನು ವಿದೇಶಿ ತಳಿಗಳೊಡನೆ ಸಂಕರ ಗೊಳಿಸಿದೆವು.ಪರಿಣಾಮವಾಗಿ ಹಾಲಿನ ಬಣ್ಣದ ದ್ರವವನ್ನೇ ಹಾಲೆಂದು ಕರೆದು ನಮ್ಮ ಮಕ್ಕಳನ್ನು ನಿಜವಾದ ಹಾಲಿನಿಂದ ವಂಚಿಸಿದೆವು.
ರೈತನೊಬ್ಬ ನಾಡಹಸುವಿನಿಂದ ಹಾಲು, ಮೊಸರು , ಬೆಣ್ಣೆ, ತುಪ್ಪ ಸವಿಯುವುದರಜೊತೆಗೆ ಎತ್ತುಗಳಿಂದ ಭೂಮಿ ಉತ್ತು, ಸರಕು ಸಾಗಿಸಲು ಗಾಡಿಗೆ ಕಟ್ಟಿ,ಅವುಗಳ ಸಗಣಿಯನ್ನು ಕೃಷಿಗೆ ಗೊಬ್ಬರವಾಗಿ ಬಳಸಿ, ಅವುಗಳ ಗಂಜಲವನ್ನೇ ಔಷಧಿಯಾಗಿ ಬಳಸುತ್ತಾ ಆನಂದವಾಗಿ ಬದುಕು ಸಾಗಿಸುತ್ತಿದ್ದ. ಅವರಲ್ಲಿದ್ದ ಗೋವಿನ ಸಂಖ್ಯೆಯೇ ನಮ್ಮ ಪೂರ್ವಿಕರ ಸಂಪತ್ತಿಗೆ ಮಾನದಂಡವಾಗಿತ್ತು. ನಮ್ಮ ರೈತರು ಉಪಯೀಗಿಸುತ್ತಿದ್ದ ಗೋವಿನ ಸತ್ವಪೂರ್ಣ ಸಗಣಿ ಗೊಬ್ಬರದ ಪರಿಣಾಮವಾಗಿ ಆಹಾರಧಾನ್ಯಗಳು ಸತ್ವಪೂರ್ಣವಾಗಿರುತ್ತಿತ್ತು.
ಆದರೆ ಗೋಸಂಪತ್ತು ನಶಿಸುತ್ತಾ ಬಂದಂತೆ ರೈತನು ಕೃಷಿಗಾಗಿ ಅನಿವಾರ್ಯವಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಾ ಬಂದ. ಪರಿಣಾಮವಾಗಿ ಮಣ್ಣು ವಿಷಯುಕ್ತ ವಾಯ್ತು. ಬೆಳೆಯ ಕೀಟಗಳನ್ನು ನಾಶಪಡಿಸಲು ಕೀಟನಾಷಕಗಳನ್ನು ಸಿಂಪಡಿಸಲು ಪ್ರಾರಂಭಿಸಿದ.ಅದರ ಪರಿಣಾಮವಾಗಿ ಆಹಾರಧಾನ್ಯಗಳೂ ವಿಷಯುಕ್ತವಾಯ್ತು.
ಈಗ ನಾವೆಲ್ಲಾ ಅದರ ಫಲವನ್ನು ನಿತ್ಯವೂ ಅನುಭವಿಸುತ್ತಿದ್ದೇವೆ. ವಿಷಮುಕ್ತ ಆಹಾರ ಧಾನ್ಯಗಳು ದುರ್ಲಭವಾಗಿದೆ. ಇದೇ ಆಹಾರವನ್ನು ಸೇವಿಸುತ್ತಾ ಹಿಂದೆಂದೂ ಕಾಣದಂತಹ ರೋಗಗಳು ಕಾಡುತ್ತಿವೆ. ಸಕ್ಕರೆ ಖಾಯಿಲೆ, ರಕ್ತದೊತ್ತಡ,ಕ್ಯಾನ್ಸರ್,ಕಿಡ್ನಿ ವೈಫಲ್ಯ ಮುಂತಾದ ರೋಗಗಳು ನಿತ್ಯದ ಮಾತಾಗಿದೆ. ಇವೆಲ್ಲಾ ಒಂದು ಮುಖವಾದರೆ ಮತ್ತೊಂದು ಇನ್ನೂ ಭಯಾನಕ ಮುಖವು ನಿತ್ಯವೂ ನಮ್ಮ ನಿದ್ರೆಗೆಡಿಸುತ್ತಿದೆ.
ಕುಟುಂಬ ಒಂದರಲ್ಲಿ ಕಾಣುತ್ತಿದ್ದ ಪ್ರೀತಿ, ವಾತ್ಸಲ್ಯ,ವಿಶ್ವಾಸ, ಮಮಕಾರ,ಹಿರಿಯರ ಬಗ್ಗೆ ಗೌರವ-ಇಂತಹ ಸದ್ಗುಣಗಳು ಮರೆಯಾಗುತ್ತಿವೆ.ಕೌಟುಂಬಿಕ ಸಾಮರಸ್ಯ ಏರು ಪೇರಾಗುತ್ತಿರುವ ಉಧಾಹರಣೆಗಳನ್ನು ನೋಡುತ್ತಿದ್ದೇವೆ.ನಮ್ಮ ಆಹಾರ ಪದ್ದತಿ,ಉಡುಪು, ನಮ್ಮ ಜೀವನ ಶೈಲಿ ಎಲ್ಲವೂ ಬದಲಾಗುತ್ತಿದೆ. ಪರಿಣಾಮವಾಗಿ ಸಂಸಾರದ ನೆಮ್ಮದಿ ಹಾಳಾಗುತ್ತಿದೆ. ಲಜ್ಜಾರಹಿತ ಜೀವನಕ್ಕೆ ಒಗ್ಗಿಕೊಳ್ಳುವ ಪರಿಸ್ಥಿತಿ ಎದಿರಾಗುತ್ತಿದೆ. ಹಡೆದ ಮಕ್ಕಳು ತಂದೆ ತಾಯಿಯರ ಲಾಲನೆ ಪೋಷಣೆ ಕಾಣದೆ ಅನಾಥರಾಗಿ ದಾದಿಯರೊಡನೆ ಬೆಳೆಯುತ್ತಿರುವ ಉಧಾಹರಣೆಗಳು ಹೆಚ್ಚುತ್ತಿವೆ, ಅದೇ ಸಮಯದಲ್ಲಿ ನೋಡುವವರಿಲ್ಲದೆ ವೃದ್ಧ ತಂದೆತಾಯಿಯರು ವೃದ್ಧಾಶ್ರಮಗಳನ್ನು ಸೇರುವ ಪರಿಸ್ಥಿತಿ ಬಂದೊದಗಿದೆ.
ಕೇವಲ ಮೂರು ನಾಲ್ಕು ದಶಕಗಳ ಹಿಂದೆ ನಮ್ಮ ಕುಟುಂಬಗಳು ಹೇಗಿದ್ದವು! ಎಂಬುದನ್ನು ಒಮ್ಮೆ ನೆನಪು ಮಾಡಿಕೊಂಡರೆ ನಮ್ಮ ಹೃದಯ ಒಡೆದು ಹೋಗದಿರದು. ಅಪ್ಪ-ಅಮ್ಮನ ಜೊತೆಗೆ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ದಪ್ಪ-ದೊಡ್ದಮ್ಮ ,ಅಜ್ಜ-ಅಜ್ಜಿ, ಮಕ್ಕಳು-ಮೊಮ್ಮಕ್ಕಳು-ಮರಿಮಕ್ಕಳು. ಇಂತಹಾ ಅವಿಭಕ್ತ ಕುಟುಂಬಗಳಲ್ಲಿ ಇಪ್ಪತ್ತು-ಮೂವತ್ತು ಜನರು ಒಂದೇ ಮನೆಯಲ್ಲಿ ಇರುತ್ತಿದ್ದರು. ಕುಟುಂಬಕ್ಕೆ ಭದ್ರತೆ ಇತ್ತು. ಹಿರಿಯರಾಗಿದ್ದವರು ಮನೆಯ ಯಾವುದೇ ಮಗುವಿನ ಲಾಲನೆ ಪೋಷಣೆ ಮಾಡುತ್ತಿದ್ದರು.ಎಲ್ಲರೂ ಮನೆಗೆಲಸವನ್ನು ಹಂಚಿಕೊಂಡು ಮಾಡುತ್ತಿದ್ದುದರಿಂದ ಎಲ್ಲವೂ ಸುಗಮವಾಗಿ ಸಂಸಾರ ನಡೆಯುತ್ತಿತ್ತು. ಮನೆಯಲ್ಲಿ ಬರುತ್ತಿದ್ದ ಓರೆ ಕೋರೆ ಮಾತುಗಳನ್ನು ಕೇಳಿದ ಮನೆಯ ಯಜಮಾನ ತಪ್ಪಿತಸ್ತರಿಗೆ ತಿದ್ದಿ ಬುದ್ಧಿ ಹೇಳುತ್ತಿದ್ದ. ಹಬ್ಬ-ಹರಿದಿನಗಳೆಂದರೆ ಅಂದು ಮನೆಯು ಸ್ವರ್ಗಸದೃಶವಾಗಿರುತ್ತಿತ್ತು. ಬದುಕಿನಲ್ಲಿ ಸದಾ ಉತ್ಸಾಹವಿರುತ್ತಿತ್ತು. ಒಂದು ಮನೆಯಲ್ಲಿ ಹತ್ತಾರು ದನಕರುಗಳಿರುತ್ತಿದ್ದು, ಹಾಲು ಮೊಸರು, ಬೆಣ್ಣೆ-ತುಪ್ಪ ಸಂಮೃದ್ಧ ವಾಗಿರುತ್ತಿತ್ತು. ಬಡತನ ವಿದ್ದರೂ ನೆಮ್ಮದಿಗೆ ಕೊರತೆ ಇರಲಿಲ್ಲ.
ಈಗ ಎಲ್ಲವೂ ಬದಲಾಗಿದೆ. ಆದರ್ಶ ಕುಟುಂಬದ ಹೆಸರಿನಲ್ಲಿ ಪತಿ-ಪತ್ನಿ ಮತ್ತು ಒಂದು ಮಗುವಿರುವ ಮನೆಗಳು ಹೆಚ್ಚುತ್ತಿವೆ. ಆಹಾರ-ವಿಹಾರಕ್ಕೆ ತೊಂದರೆ ಇಲ್ಲದಿದ್ದರೂ ಬದುಕಿಗೆ ಭದ್ರತೆ ಇಲ್ಲವಾಗಿದೆ.ತಂದೆ ತಾಯಿ ಇಬ್ಬರೂ ನೌಕರಿಗೆ ಹೋದರಂತೂ ಮಗು ಅನಾಥ ವಾದಂತೆಯೇ. ಕೈತುಂಬ ಹಣವಿದ್ದರೂ ಬಹುಪಾಲು ಜನರಿಗೆ ನೆಮ್ಮದಿ ಇಲ್ಲ, ಆರೋಗ್ಯವಿಲ್ಲ. ಹೌದು, ಇವೆಲ್ಲಾ ನಾವೇ ಸ್ವತ: ಮಡಿಕೊಮ್ಡಿರುವ ತಪ್ಪು. ತಪ್ಪುಗಳ ಸರಮಾಲೆಯಲ್ಲಿ ಸಿಕ್ಕಿ ಹಾಕಿಕೊಮ್ದು ಬಿಟ್ಟಿದ್ದೇವೆ.
ಎಲ್ಲಕ್ಕೂ ಒಂದೇ ಪರಿಹಾರ: ಮತ್ತೊಮ್ಮೆ ನಮ್ಮ ಪೂರ್ವಜರ ಜೀವನಕ್ರಮವನ್ನು ನೆನಪು ಮಾಡಿಕೊಳ್ಳುವುದು ಮತ್ತು ಅದರಂತೆ ಬದುಕುವುದು. ನಮ್ಮ ಗ್ರಾಮ ಜೀವನವನ್ನು ಪುನರುತ್ಥಾನಗೊಳಿಸುವುದು. ನಮ್ಮ ನೆಲದ ವಿಷವನ್ನು ತೊಳೆಯಬೇಕಿದೆ. ಹೇಗೆ ತೊಳೆಯಬೇಕು? ನಾಲ್ಕೈದು ದಶಕಗಳಿಂದ ನಾವು ಪ್ರಕೃತಿಗೆ ಮಾಡಿರುವ ಅತ್ಯಾಚಾರದಿಂದ ಪ್ರಕೃತಿಯು ಮತ್ತೊಮ್ಮೆ ಹಸನ್ಮುಖಿಯಾಗಬೇಕಾದರೆ ದೀರ್ಘ ಕಾಲದ ಚಿಕಿತ್ಸೆಯೇ ಅನಿವಾರ್ಯ. ಕೆಲವು ವರ್ಷಗಳಾದರೂ ನಾವು ಸರಳ ಜೀವನ ಕ್ರಮವನ್ನು ಅನುಸರಿಸಲೇ ಬೇಕು. ಪ್ರಕೃತಿಯನ್ನು ಅದರ ಪಾದಿಗೆ ಬಿಟ್ತು ಬಿಡಬೇಕು.ಆಗ ನಿಧಾನವಾಗಿಯಾದರೂ ಪರಿಹಾರ ಸಿಕ್ಕೀತು. ನಮ್ಮ ಸಾಂಸ್ಕೃತಿಕ ಬದುಕನ್ನು ನೆನಪು ಮಾಡಿಕೊಂಡು ಅದರಂತೆ ಬದುಕಲು ಸಂಕಲ್ಪ ತೊಡಬೇಕು. ಇಷ್ಟಾದರೂ ನಮ್ಮ ಸಂಸ್ಕೃತಿಯನ್ನು ಮೆಚ್ಚಿ ನಮ್ಮ ಕಡೆ ಮುಖಮಾಡಿರುವ ವಿದೇಶೀಯರಿಗೆ ನಮ್ಮ ಮೆಲೆ ಭರವಸೆ ಹೆಚ್ಚಬೇಕು, ಆಗ ಮಾತ್ರ ನಾವು ವಿಶ್ವ ಮಂಗಲದ ಕನಸು ಕಾಣಬಹುದು.
ಮಂಗಳವಾರ, ಸೆಪ್ಟೆಂಬರ್ 21, 2010
ಭಾನುವಾರ, ಸೆಪ್ಟೆಂಬರ್ 19, 2010
Part-10 ಸೂತಕ ಮತ್ತು ದೇವರು-ವೇದಾಧ್ಯಾಯೀ ಸುಧಾಕರಶರ್ಮರಿಂದ ಒಂದು ವಿಶ್ಲೇಷಣೆ
ವೇದಾಧ್ಯಾಯೀ ಸುಧಾಕರ ಶರ್ಮರ ದೇವರ ಬಗೆಗಿನ ವಿಶ್ಲೇಷಣೆಗೆ ಈ ಹಾಡು ಪೂರಕ ವಾಗಬಹುದೇನೋ.....
Part-6 ಲಲಿತಾಸಹಸ್ರನಾಮ ಮತ್ತು ಸೌಂದರ್ಯ ಲಹರಿಗಳು ಶಂಕರರು ಬರೆದದ್ದೇ?
ಶನಿವಾರ, ಸೆಪ್ಟೆಂಬರ್ 18, 2010
ಚಾತುರ್ವರ್ಣ- ಒಂದು ವಿಶ್ಲೇಷಣೆ ಭಾಗ-೨
Part-೨ ಚಾತುರ್ವರ್ಣ -ಒಂದು ವಿಶ್ಲೇಷಣೆ
ಶರೀರದಲ್ಲಿ ಮುಖದ ಕೆಲಸದಂತೆ ಸಮಾಜದಲ್ಲಿ ಕೆಲಸ ಮಾಡುವವರು ಯಾರು? ಬಾಹುಗಳಂತೆ ಕೆಲಸ ಮಾಡುವವರು ಯಾರು? ತೊಡೆಗಳಂತೆ ಕೆಲಸಮಾಡುವವರು ಯಾರು?[ಅಥರ್ವ ವೇದದಲ್ಲಿ ಮಧ್ಯೋ ತದಸ್ಯ ಯದ್ ವೈಶ್ಯೋ , ಎಂದು ಹೇಳಿದೆ, ಅಂದರೆಶರೀರದ ಮಧ್ಯಭಾಗದಂತೆ ಕೆಲಸ ಮಾಡುವವರು ವೈಶ್ಯರು] ಶರೀರದಲ್ಲಿ ಕಾಲುಗಳು ಕೆಲಸಮಾಡುವಂತೆ ಸಮಾಜದಲ್ಲಿಕೆಲಸವನ್ನು ಮಾಡುವವರು ಯಾರು?- ಇದು ಪ್ರಶ್ನೆ. ಮುಖದಂತೆ, ಕಾಲುಗಳಂತೆ ಕೆಲಸ ಮಾಡುವವರು ಯಾರು? ಎಂಬುದು ಪ್ರಶ್ನೆಹೊರತು, ಮುಖದಿಂದ ಯಾರು ಜನಿಸಿದರು? ಪಾದದಿಂದ ಯಾರು ಜನಿಸಿದರು? ಎಂಬ ವ್ಯಾಖ್ಯೆಯೇ ತಪ್ಪು.ಇದನ್ನು ನಾವುರಿಯಾಗಿ ತಿಳಿದುಕೊಳ್ಳಬೇಕು. ಇಲ್ಲಿ ಸ್ವಲ್ಪ ವ್ಯಾಕರಣವನ್ನು ಗಮನಿಸಬೇಕು. ಅದೇನೆಂದರೆ || ಪದ್ಭ್ಯಾಮ್ ಶೂದ್ರೋ ಅಜಾಯತ|| ಇಲ್ಲಿ ಗಮನಿಸಬೇಕಾದುದೇನೆಂದರೆ ಪದ್ಭ್ಯಾಮ್ ಎನ್ನುವ ಪದವು ಚತುರ್ಥಿ ವಿಭಕ್ತಿಯಲ್ಲಿ ಇದಕ್ಕೋಸ್ಕರ ಎಂದಾಗುತ್ತದೆ.ಅಂದರೆಪಾದಗಳು ಮಾಡುವ ಕೆಲಸಕ್ಕೋಸ್ಕರ ಎಂದಾಗುತ್ತದೆ. ಪಂಚಮಿ ವಿಭಕ್ತಿಯಲ್ಲಿ ಇದರಿಂದ ಎಂದಾಗುತ್ತದೆ, [ ಅಂದರೆ ಪಾದಗಳಿಂದ] ಎಂದಾಗುತ್ತದೆ. ಪ್ರಶ್ನೆ ಇರುವುದು ಯಾವ ಕೆಲಸಕ್ಕಾಗಿ? ಎಂದಾದ್ದರಿಂದ ಇಲ್ಲಿ ಚತುರ್ಥಿ ವಿಭಕ್ತಿಯನ್ನೇ ನಾವುತೆಗೆದುಕೊಳ್ಳಬೇಕು.ಕಾರಣ ಹಿಂದಿನ ಪ್ರಶ್ನೆಗೆ ಈ ಮಂತ್ರ ಉತ್ತರವಾಗಬೇಕಾದರೆ ಪಾದಗಳಿಗೋಸ್ಕರ ವೆಂದು ಅರ್ಥೈಸಬೇಕೇ ಹೊರತು ಪಾದಗಳಿಂದ ಶೂದ್ರ ಹುಟ್ಟಿದ ಎಂಬುದು ತಪ್ಪು. ಹಾಗೆಯೇ ಮುಖದಿಂದ ಬ್ರಾಹ್ಮಣನಾಗಲೀ,ಬಾಹುಗಳಿಂದಕ್ಷತ್ರಿಯನಾಗಲೀ, ತೊಡೆಗಳಿಂದ ವೈಶ್ಯನಾಗಲೀ ಜನಿಸಲಿಲ್ಲ. ಎಲ್ಲರ ಜನವಾಗಿರುವುದು ತಾಯಿಯ ಗರ್ಭದಿಂದಲೇ. ಸಮಾಜದನಾಲ್ಕು ಕೆಲಸಗಳನ್ನು ಈ ಮಂತ್ರದಲ್ಲಿ ಹೇಳಿದ್ದಾರೆ. ಮುಖದಲ್ಲಿ ಯಾವ ಕೆಲಸ ನಡೆಯುತ್ತದೆ? ಮುಖದಲ್ಲಿ ಗ್ರಹಿಸುವಅಂಗಾಂಗಗಳಿವೆ. ಕಣ್ಣು, ಮೂಗು, ಕಿವಿ, ನಾಲಿಗೆ ಮತ್ತು ಮಿದುಳುಗಳಿವೆ.ಇವೆಲ್ಲವೂ ಹೊರಜಗತ್ತಿನಿಂದ ವಿಷಯಗಳನ್ನು ಸಂಗ್ರಹಿಸುವಇಂದ್ರಿಯಗಳು.ಅಲ್ಲದೆ ಅವುಗಳನ್ನು ವಿಮರ್ಶೆಮಾಡುವ ಹಾಗೂ ನಿರ್ಣಯ ಕೊಡುವ ಮಿದುಳೂ ಕೂಡ ಮುಖದ ಭಾಗದಲ್ಲಿಯೇ ಇದೆ. ಆ ನಿರ್ಣಯಗಳನ್ನು ಉಚ್ಛರಿಸುವ ನಾಲಿಗೆಯೂ ಇಲ್ಲಿಯೇ ಇದೆ. ಆ ನಿರ್ಣಯಗಳನ್ನು ಶರೀರದ ಎಲ್ಲಾ ಅಂಗಾಂಗಗಳಿಗೂ ಕಳಿಸುವ ವ್ಯವಸ್ಥೆಯೂ ಇಲ್ಲೇ ಇದೆ. ಅಂದರೆ ಈ ಶಿರೋ ಭಾಗದಲ್ಲಿರುವ ಅನ್ಯಾನ್ಯ ಅಂಗಾಂಗಗಳು ಮಾಡುವ ಕೆಲಸಗಳನ್ನು ಸಮಾಜದಲ್ಲಿ ಯಾರು ಮಾಡುತ್ತಾರೋ ಅವರನ್ನು ಬ್ರಾಹ್ಮಣ ಎಂದು ಕರೆಯಲಾಗಿದೆ. ಅಂದರೆ ಇದು ಜಾತಿಯಲ್ಲ. ಇದು ಜನ್ಮದಿಂದಬರುವಂತಹದ್ದಲ್ಲ. ಶರೀರದ ಶಿರೋ ಭಾಗವು ನಿರ್ವಹಿಸುವ ಕೆಲಸಗಳನ್ನು ಸಮಾಜದಲ್ಲಿ ಯಾರ್ಯಾರು ಮಾಡುತ್ತಾರೆ, ಅವರೆಲ್ಲಾಬ್ರಾಹ್ಮಣರೇ ಹೌದು.ಶರೀರದ ರಕ್ಷಣೆ ಮಾಡುವ ಅಂಗ ಯಾವುದು? ಒಂದು ವೇಳೆ ಮುಗ್ಗರಿಸಿ ಬೀಳುವ ಸ್ಥಿತಿ ಬಂದರೆ ಮೊದಲುಕೈಯ್ಯನ್ನು ನೆಲಕ್ಕೆ ಕೊಡುತ್ತೀವಲ್ಲವೇ? ತಲೆಯಮೇಲೆ ಏನಾದರೊಂದು ವಸ್ತು ಅಕಸ್ಮಾತ್ ಬಿತ್ತೆಂದರೆ ತಲೆಯನ್ನು ಮೊದಲು ರಕ್ಷಿಸಲು ಧಾವಿಸುವುದು ಕೈ ಅಲ್ಲವೇ? ಹಾಗೆಯೇ ಸಮಾಜದ ಮೇಲಿನ ಆಘಾತಗಳು, ಅನ್ಯಾಯ, ಅಧರ್ಮ, ಅತ್ಯಾಚಾರಗಳಿಂದ ಸಮಾಜವನ್ನು ರಕ್ಷಿಸುವವನು ಕ್ಷತ್ರಿಯ. ಶರೀರದಲ್ಲಿ ಮಧ್ಯಭಾಗದಲ್ಲಿರುವುದು ಶ್ವಾಸಕೋಶ, ಹೃದಯ ಮತ್ತು ಜಠರ ಹಾಗೂತೊಡೆಗಳು.ಶ್ವಾಸಕೋಶವು ತಾನು ತೆಗೆದುಕೊಂಡ ಗಾಳಿಯಿಂದ ಆಮ್ಲಜನಕವನ್ನು ಶರೀರದ ಎಲ್ಲಾ ಭಾಗಗಳಿಗೂ ಹಂಚಬೇಕು.ಹೃದಯವು ರಕ್ತವನ್ನು ಶರೀರದ ಕಣಕಣಗಳಿಗೂ ಹಂಚಬೇಕು. ಹೊಟ್ಟೆ ತನ್ನಲ್ಲಿರುವ ಆಹಾರವನ್ನು ಶರೀರರದ ಎಲ್ಲಾಭಾಗಗಳಿಗೂ ಹಂಚಬೇಕು. ಹೀಗೆ ತಯಾರಿ ಮತ್ತು ಹಂಚುವ ಕೆಲಸವನ್ನು ಮಾಡುವ ಶರೀರದ ಮಧ್ಯಭಾಗವೇನಿದೆ ಅವುಗಳ , ಹಾಗೂ ಶರೀರಕ್ಕೆ ಆಧಾರವನ್ನು ಕೊಡುವ ತೊಡೆಯ ಕಾರ್ಯವನ್ನು ಸಮಾಜದಲ್ಲಿ ಮಾಡುವವನು ವೈಶ್ಯ. ಪಾದವಾದರೋ ಶರೀರದ ಚಲನೆಗೆ ಕಾರಣವಾಗಿದೆ. ಅದಿಲ್ಲದಿದ್ದರೆ ಮನುಷ್ಯನನ್ನು ಹೆಳವನೆನ್ನುತ್ತಾರೆ. ಮನುಷ್ಯನ ಪ್ರಗತಿ ಇರುವುದೇ ಅವನ ಚಲನೆಯ ಶಕ್ತಿಯಿಂದ. ಹೀಗೆ ಸಮಾಜದ ಪ್ರಗತಿಗೆ ಯಾರು ಕಾರಣರೋ ಅವರು ಶೂದ್ರ.ಶರೀರಕ್ಕೆ ತಲೆ ಮಾತ್ರ ಇದ್ದರೆ ಸಾಕೇ? ಕಾಲೂ ಬೇಕಲ್ಲವೇ? ಶರೀರಕ್ಕೆ ತಲೆಯು ಎಷ್ಟು ಮುಖ್ಯವೋ ಕಾಲೂ ಅಷ್ಟೇ ಮುಖ್ಯ.ಕಾಲೆಷ್ಟು ಮುಖ್ಯವೋ ಹೊಟ್ಟೆಯೂ ಅಷ್ಟೇಮುಖ್ಯ, ಕೈಗಳೂ ಅಷ್ಟೇ ಮುಖ್ಯ. ಶರೀರಕ್ಕೆ ಎಲ್ಲಾ ಅಂಗಗಳೂ ಮುಖ್ಯವೇ.ಶರೀರದಲ್ಲಿ ಎಲ್ಲಾ ಅಂಗಗಳೂ ಒಂದಕ್ಕೊಂದುಹೊಂದಿಕೊಂಡು ಕೆಲಸವನ್ನು ಮಾಡಿದರೆ ಮಾತ್ರ ಶರೀರರದ ಕೆಲಸಗಳು ಸುಗಮವಾಗುತ್ತವೆ. ಹಾಗೆಯೇ ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಲ್ಲರೂ ಪರಸ್ಪರ ಹೊಂದಿಕೊಂಡು ತಮ್ಮತಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ಮಾಡಿದಾಗ ಮಾತ್ರ ಈ ಸಮಾಜರಥವು ಸುಗಮವಾಗಿ ಚಲಿಸುತ್ತದೆ. ಇಲ್ಲಿ ಯಾರೂ ಹೆಚ್ಚೂ ಇಲ್ಲ. ಯಾರೂ ಕಡಿಮೆಯೂ ಇಲ್ಲ. ಇದು ವೇದದಲ್ಲಿನ ಮಾತು. ಇದಕ್ಕೆ ಪೂರಕವಾಗಿ ವೇದದಲ್ಲಿ ಇನ್ನೊಂದು ಮಂತ್ರವು ಇದೆ. || ಅಜ್ಯೇಷ್ಠಾ ಸೋ ಅಕನಿಷ್ಠಾಸ: ಏತೇ ಸಂಭ್ರಾತರೋ ವಾವೃಧು: ಸೌಭಗಾಯ||[ಋಕ್.೫.೬೦.೫] ಈ ಮಂತ್ರದ ಅರ್ಥ ವೇನೆಂದರೆ ಹೇ ಮಾನವರೇ, ನಿಮ್ಮಲ್ಲಿ ಯಾರೂ ಶ್ರೇಷ್ಠರಲ್ಲ-ಯಾರೂಕನಿಷ್ಠರೂ ಅಲ್ಲ. ನೀವೆಲ್ಲರೂ ಪರಸ್ಪರ ಸೋದರರು.ಎಲ್ಲರೂ ಸೌಭಾಗ್ಯಕ್ಕಾಗಿ ಒಂದುಗೂಡಿ ನಡೆಯಬೇಕು. ಅಂದರೆ ಬ್ರಾಹ್ಮಣನಿಗೆಯಾವ ಸ್ಥಾನವೋ ಶೂದ್ರನಿಗೂ ಅದೇ ಸ್ಥಾನ. ಉಚ್ಛ-ನೀಚ ಭೇದ ಎಣಿಸುವವರು ವೇದವನ್ನು ಸರಿಯಾಗಿ ಓದಬೇಕು. ವೇದದಲ್ಲಿ ಇದು ಸ್ಪಷ್ಟವಾಗಿದೆ.
. . . . . . . . . . . . .ಮುಂದಿನ ಭಾಗವನ್ನು ೫.೧೦.೨೦೧೦ ಮಂಗಳವಾರ ನಿರೀಕ್ಷಿಸಿ
Part-1 ಎಲ್ಲರ ಜನನ ವಾಗಿರುವುದು ತಾಯಿಯ ಗರ್ಭದಿಂದಲ್ಲವೇ?
ಇವತ್ತು ರೂಢಿಯಲ್ಲಿ ಬ್ರಾಹ್ಮಣ ಎಂದರೆ ಅರ್ಥ ಏನು? ಅದು ಒಂದು ಜಾತಿ.ನಾವೆಲ್ಲಾ ಒಪ್ಪಿಕೊಂಡಿರುವಂತೆ ಬ್ರಾಹ್ಮಣ ಎಂಬುದು ಹುಟ್ಟಿನಿಂದ ಬರುತ್ತದೆ,ತಂದೆತಾಯಿ ಬ್ರಾಹ್ಮಣರಾಗಿದ್ದರೆ ಜನಿಸುವ ಮಗುವೂ ಬ್ರಾಹ್ಮಣ ಎಂಬುದು ಈಗ ನಡೆದುಬಂದಿರುವ ವಿಚಾರ.ಇದು ಬ್ರಾಹ್ಮಣ ಎಂಬ ಪದಕ್ಕಷ್ಟೇ ಅಲ್ಲ, ಎಲ್ಲಾ ಜಾತಿಯ ಕಥೆಯೂ ಇದೇ ಆಗಿದೆ. ವೈಶ್ಯ ನೆಂದರೆ ವೈಶ್ಯ ತಂದೆತಾಯಿಗೆ ಜನಿಸಿರುವವ ಎಂದೇ ಅರ್ಥ ಮಾಡುತ್ತೇವೆ.ಇದು ಎಲ್ಲಾ ಜಾತಿಗೂ ಅನ್ವಯ. ಅಥವಾ ಮತಗಳ ಹೆಸರಲ್ಲಿ ನೋಡಬೇಕೆಂದರೆ ಹಿಂದುಗಳ ಮನೆಯಲ್ಲಿ ಹುಟ್ಟಿದ ಮಗು ಹಿಂದು. ಕ್ರಿಶ್ಚಿಯನ್ ಮನೆಯಲ್ಲಿ ಹುಟ್ಟಿದ ಮಗು ಕ್ರೈಸ್ತ್ , ಮುಸಲ್ಮಾನರ ಮನೆಯಲ್ಲಿ ಹುಟ್ಟಿದವ ಮುಸ್ಲಿಮ್,ಲಿಂಗಾಯಿಯತರ ಮನೆಯಲ್ಲಿ ಹುಟ್ಟಿದವ ಲಿಂಗಾಯಿತ. ಒಟ್ಟಿನಲ್ಲಿ ಜಾತಿಯಾಗಲೀ, ಮತವಾಗಲೀ ಹುಟ್ಟಿನಿಂದ ಬರುತ್ತದೆಂಬ ವಿಚಾರ ನಮ್ಮ ತಲೆಯಲ್ಲಿ ಸೇರಿಕೊಂಡಿದೆ. ಆದರೆ ವೇದವು ಹೇಳುವ ವಿಚಾರವನ್ನು ನಾವು ಪ್ರಾಮಾಣಿಕವಾಗಿ ಗಮನಿಸುವುದಾದರೆ ಈ ರೀತಿಯ ಹುಟ್ಟಿನಿಂದ ಬರುವ ಜಾತಿಯನ್ನು ವೇದವು ಒಪ್ಪುವುದಿಲ್ಲ.ಭಗವಂತನು ಈ ರೀತಿಯ ವಿಭಾಗವನ್ನು ಮಾಡಿರುವುದಿಲ್ಲ. ಇಂದು ಇರುವ ಎಲ್ಲಾ ಈ ಜಾತಿಯ ವ್ಯವಸ್ಥೆಯನ್ನು ಮನುಷ್ಯನು ಭಗವಂತನಿಗೆ ವಿರುದ್ಧವಾಗಿ ಮಾಡಿಕೊಂಡಿದ್ದಾನೆಯೇ ಹೊರತು ಭಗವಂತನು ಮಾಡಿದ್ದಲ್ಲ. ಮನುಷ್ಯನು ಮಾಡಬಾರದೆಂದೇನೂ ಅಲ್ಲ, ಆದರೆ ಮನುಷ್ಯನು ಮಾಡಿದ್ದು ಭಗವಂತನ ಆದೇಶಕ್ಕೆ ಅನುಗುಣವಾಗಿರಬೇಕು.ಈ ಜಾತಿ ವ್ಯವಸ್ಥೆಯು ಭಗವಂತನ ಆದೇಶಕ್ಕೆ ವಿರುದ್ಧವಾಗಿದೆ.ಅಲ್ಲದೆ ವೇದದಲ್ಲಿರುವ ವರ್ಣಾಶ್ರಮ ವ್ಯವಸ್ಥೆಗೆ ತದ್ವಿರುದ್ಧವಾಗಿದೆ.ವೇದದಲ್ಲಿ ಬ್ರಾಹ್ಮಣ,ಕ್ಷತ್ರಿಯ, ವೈಶ್ಯ,ಶೂದ್ರ ಎಂಬ ಪದಗಳು ಪ್ರಯೋಗದಲ್ಲಿವೆ. ಆದರೆ ಅವುಗಳನ್ನು ಎಲ್ಲೂ ಈಗಿರುವ ಜಾತಿಯ ಅರ್ಥದಲ್ಲಿ ಬಳಸಿಲ್ಲ.ಒಬ್ಬ ವ್ಯಾಪಾರ ಮಾಡುವ ವ್ಯಕ್ತಿ ಇದ್ದಾನೆಂದರೆ ವೇದಗಳ ಪ್ರಕಾರ ಅವನು ವೈಶ್ಯ.ಅವನು ಯಾವ ಮನೆಯಲ್ಲಿ ಹುಟ್ಟಿದ್ದಾನೆ? ಅವರಪ್ಪ ಯಾರು? ಅವರಮ್ಮ ಯಾರು? ಎಂಬುದು ನಗಣ್ಯ.ವ್ಯಾಪಾರ ಮಾಡುವ ವ್ಯಕ್ತಿಯೊಬ್ಬನ ಹೆಸರು ಡಿಸೋಜ ಎಂದು ಭಾವಿಸೋಣ. ಅವನನ್ನು ಇಂದು ನಾವು ಏನೆಂದು ಕರೆಯುತ್ತೇವೆ? ಅವನನ್ನು ಕ್ರಿಶ್ಚಿಯನ್ ಎಂದು ಕರೆಯುತ್ತೇವೆ. ಆದರೆ ವೇದದ ಪ್ರಕಾರ ಅವನು ವೈಶ್ಯ. ಇಬ್ರಾಹಿಮ್ ಎಂಬುವನೊಬ್ಬ ಟೀಚರ್ ಕೆಲಸದಲ್ಲಿದ್ದರೆ ಅವನನ್ನು ಮುಸ್ಲಿಮ್ ಎಂದೇ ನಾವು ಕರೆಯುತ್ತೇವೆ. ವೇದದ ಪ್ರಕಾರ ಜ್ಞಾನವನ್ನು ಪ್ರಚಾರ ಮಾಡುತ್ತಿರುವ ಇಬ್ರಾಹಿಮ್ ಕೂಡ ಬ್ರಾಹ್ಮಣನೇ.ಜಾತಿ ಎಂಬುದು ಹುಟ್ಟಿನಿಂದ ಬರುವಂತಹದ್ದಲ್ಲ. ಇದನ್ನೆಲ್ಲಾ ಮನುಷ್ಯನು ವೇದದ ಆದೇಶಕ್ಕೆ ವಿರುದ್ಧವಾಗಿ ಮಾಡಿಕೊಂಡಿರುವ ವ್ಯವಸ್ಥೆ. ಇದು ತಪ್ಪು.
ಇವತ್ತಿನ ನಮ್ಮ ಕಲ್ಪನೆ ಹೇಗಿದೆ, ಎಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವ್ಯವಸ್ಥೆಯಲ್ಲಿ ಬ್ರಾಹ್ಮಣ ಶ್ರೇಷ್ಠ, ಶೂದ್ರ ಕನಿಷ್ಠ.ಇದು ಇವತ್ತಿನ ವ್ಯವಸ್ಥೆಯಲ್ಲ, ಅನೇಕ ಶತಮಾನಗಳಿಂದ ಶೂದ್ರರನ್ನು ಕೀಳಾಗಿ ಕಾಣುತ್ತಾ ಬರಲಾಗಿರುವ ಧ್ಯೋತಕ..ಮೇಲ್ಜಾತಿ ಎಂಬುವರಿಂದ ಕೀಳ್ಜಾತಿ ಎಂಬುವರ ಮೇಲೆ ದೌರ್ಜನ್ಯಗಳು ನಡೆದಿರುವ ಹಲವು ಉಧಾಹರಣೆಗಳು ಚರಿತ್ರೆಯಲ್ಲಿದೆ.ಇವತ್ತಿಗೂ ಕೆಳಜಾತಿಯವರು ಮೇಲ್ಜಾತಿಯವರ ಸೇವೆ ಮಾಡುವುದಕ್ಕಾಗಿಯೇ ಇರುವುದು ಎಂಬ ಭಾವನೆ ಹಲವರಲ್ಲಿದ್ದು ಸಮಾಜದಲ್ಲಿನ ಸಾಮರಸ್ಯ ಕೆಡಲು ಮುಖ್ಯ ಕಾರಣವಾಗಿದೆ.ಈ ಜಾತಿ ವ್ಯವಸ್ಥೆಯು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದೆಯೇ ಹೊರತು ನೆಮ್ಮದಿಗೆ ಕಾರಣವಾಗಿಲ್ಲ.ಆದ್ದರಿಂದಲೇ ಇದು ಭಗವಂತನು ಮಾಡಿರುವ ವ್ಯವಸ್ಥೆಯಲ್ಲ. ಭಗವಂತನು ಸಮಾಜದಲ್ಲಿ ನೆಮ್ಮದಿ ಹಾಳುಮಾಡುವ ವ್ಯವಸ್ಥೆ ಮಾಡಿರಲು ಸಾಧ್ಯವೇ ಇಲ್ಲ.ಭಗವಂತನ ಮಕ್ಕಳಾದ ನಾವೆಲ್ಲರೂ ಸುಖ ಶಾಂತಿ, ನೆಮ್ಮದಿಯಿಂದ ಬದುಕ ಬೇಕೆಂಬುದೇ ಭಗವಂತನ ಇಚ್ಛೆ.ಇದನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡಾಗ ಈಗ ಸಮಾಜದ ನೆಮ್ಮದಿ ಹಾಳುಮಾಡಲು ಯಾವಯಾವ ವ್ಯವಸ್ಥೆಗಳಿವೆ, ಅವೆಲ್ಲಾ ಭಗವಂತನು ಮಾಡಿದ್ದಲ್ಲ, ಅದನ್ನು ವೇದವನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಅಜ್ಞಾನಿಗಳು ಮಾಡಿದ್ದು, ಎಂದು ನಾವು ತಿಳಿದುಕೊಳ್ಳಬಹುದು , ಅಷ್ಟೇ ಅಲ್ಲ, ಸಮಾಜದ ನೆಮ್ಮದಿಯನ್ನು ಹಾಳುಮಾಡುವಂತಹ ವ್ಯವಸ್ಥೆಯನ್ನು ಪಾಲಿಸ ಬೇಕಾಗಿಲ್ಲ.
ವೇದವು ನಿಜವಾಗಿ ಏನು ಹೇಳುತ್ತದೆಂಬುದನ್ನು ಈಗ ನೋಡೋಣ.ಶೂದ್ರರನ್ನು ಕೀಳು ಅಥವಾ ಬ್ರಾಹ್ಮಣರನ್ನು ಮೇಲು ಎಂದು ಕರೆಯಲು ಹಾಗೆ ಭಾವಿಸಿರುವವರು ಕೊಡುವ ಕಾರಣವೇನೆಂದರೆ, ವೇದದಲ್ಲಿ ಬರುವ ಒಂದು ಮಂತ್ರ. ಪುರುಷಸೂಕ್ತದ ಈ ಮಂತ್ರವನ್ನು ತಪ್ಪಾಗಿ ಅರ್ಥೈಸಿರುವುದೇ ಇವೆಲ್ಲಾ ಆಭಾಸಗಳಿಗೆ ಮೂಲ ಕಾರಣ. ಅದನ್ನೀಗ ನೋಡೋಣ.
||ಬ್ರಾಹ್ಮಣೋಸ್ಯ ಮುಖಮಾಸೀತ್| ಬಾಹೂ ರಾಜನ್ಯ ಕೃತ: | ಊರೂತದಸ್ಯ ಯದ್ವೈಶ್ಯೋ|ಪದ್ಭ್ಯಾಮ್ ಶೂದ್ರೋ ಅಜಾಯತ|| ಈ ಮಂತ್ರವು ನಾಲ್ಕೂ ವೇದಗಳಲ್ಲಿ ಬರುತ್ತದೆ. ಬ್ರಾಹ್ಮಣರು ಭಗವಂತನ ಮುಖದಿಂದ, ಬಾಹುಗಳಿಂದ ಕ್ಷತ್ರಿಯರು, ತೊಡೆಯಿಂದ ವೈಶ್ಯರು ಹಾಗೂ ಕಾಲುಳಿಂದ ಶೂದ್ರರೂ ಹುಟ್ಟಿದರು, ಎಂದು ತಪ್ಪಾಗಿ ಅರ್ಥೈಸಲಾಗಿದೆ. ಇಲ್ಲಿಂದ ಸಮಾಜದ ನೆಮ್ಮದಿ ಕೆಡಿಸುವ ಕ್ರಿಯೆ ಶುರುವಾಗಿದೆ.ಮುಖದಿಂದ ಹುಟ್ಟಿದ ಬ್ರಾಹ್ಮಣ ಮೇಲು, ಕಾಲುಗಳಿಂದ ಹುಟ್ಟಿದ ಶೂದ್ರ ಕೀಳೆಂಬ ಭಾವನೆಯನ್ನು ಗಟ್ಟಿಯಾಗಿ ಬಿತ್ತಲಾಗಿದೆ.ದುರ್ದೈವವೆಂದರೆ ಹಲವಾರು ಸಂಸ್ಕೃತ ಪಂಡಿತರೆನೆಸಿಕೊಳ್ಳುವರೂ ಸಹ ಈ ಮಂತ್ರಗಳಿಗೆ ಇದೇ ಅರ್ಥವನ್ನು ಹೇಳುತ್ತಾ ಸಮಾಜದ ನೆಮ್ಮದಿ ಹಾಳುಮಾಡುವ ಕೆಲಸವನ್ನು ಮಾಡಿದ್ದಾರೆ.ಇದು ಒಂದು ದೊಡ್ಡ ಗೊಂದಲ. ಈ ಗೊಂದಲವನ್ನು ಮೊದಲು ಬಿಡಿಸಿಕೊಳ್ಳುವ ಪ್ರಯತ್ನ ಮಾಡೋಣ.ಬ್ರಾಹ್ಮಣೋಸ್ಯ ಮುಖಮಾಸೀತ್, ಎಂಬ ಈ ಮಂತ್ರಕ್ಕೆ ಅರ್ಥವನ್ನು ಹುಡುಕುವ ಮೊದಲು ಅದರ ಹಿಂದಿನ ಮಂತ್ರವನ್ನು ನೋಡಬೇಕು. ಹಿಂದಿನ ಮಂತ್ರವು ಏನು ಹೇಳುತ್ತದೆಂದರೆ ಈ ಸಮಾಜ ಪುರುಷನ ಮುಖ ಯಾವುದು? ಬಾಹುಗಳು ಯಾವುವು?ತೊಡೆ ಹಾಗೂ ಕಾಲುಗಳು ಯಾವುವು? ಪ್ರಶ್ನೆ ಹೀಗಿರುವಾಗ ಉತ್ತರ ಹೇಗಿರ ಬೇಕು? ಮುಖ ಯಾವುದೆಂದರೆ ಇದು ಮುಖ ಎಂದು ಹೇಳಬೇಕಲ್ಲವೇ? ಅಂದರೆ ಬ್ರಾಹ್ಮಣನು ಸಮಾಜ ಪುರುಷನ ಮುಖ, ಕ್ಷತ್ರಿಯರು ಬಾಹುಗಳು, ವೈಶ್ಯರು ತೊಡೆಗಳು ಮತ್ತು ಶೂದ್ರರು ಪಾದಗಳು, ಎಂದು ತಾನೇ ಉತ್ತರಿಸ ಬೇಕಾದ್ದು.ಆದರೆ ಇದನ್ನು ಹೇಗೆ ಅರ್ಥೈಸಲಾಗಿದೆ? ಮುಖದಿಂದ ಬ್ರಾಹ್ಮಣ ಹುಟ್ಟಿದ, ಕಾಲುಗಳಿಂದ ಶೂದ್ರ ಹುಟ್ಟಿದ, ಹೀಗೆ ಅರ್ಥ ಮಾಡಿದರೆ ಕೇಳಿದ ಪ್ರಶ್ನೆಯೇ ಒಂದು ಉತ್ತರವೇ ಬೇರೆ ಆಗುತ್ತದಲ್ಲವೇ? ಅಲ್ಲದೆ ಎಲ್ಲರೂ ಹುಟ್ಟಿರುವುದು ತಾಯಿಯ ಗರ್ಭದಲ್ಲಿ ತಾನೇ? ಯಾರೂ ಮುಖದಿಂದಾಗಲೀ ಕಾಲುಗಳಿಂದಾಗಲೀ ಹುಟ್ಟಲು ಸಾಧ್ಯವೇ?..........[ಮುಂದುವರೆದ ಮಾತುಗಳನ್ನು ಇದೇ ಅಕ್ಟೋಬರ್ ೧ ಶುಕ್ರವಾರ ನಿರೀಕ್ಷಿಸಿ]
ಬುಧವಾರ, ಸೆಪ್ಟೆಂಬರ್ 15, 2010
ಈ ಮರ ಬಿಡು ಅಂದ್ರೆ ಬಿಡ್ತಾ ಇಲ್ಲಾ
- ಎಲ್ಲಿಗೆ ಹೋಗ್ತಾ ಇದ್ದೀಯಾ? ಈ ಮೂಟೆಯಲ್ಲೇನಿದೆ?
-ಸುಮ್ನೇ ಹಾಗೇ ಹೊರಟೆ, ದಾರೀಲಿ ಸಿಕ್ಕಿದವರೆಲ್ಲಾ ಏನೇನೋ ಕೊಟ್ಟರು. ಅದೆಲ್ಲಾ ಮೂಟೆಯಲ್ಲಿದೆ. ಹೋಗ್ತಾ ಇದ್ದೀನಿ.
-ಎಲ್ಲಿಗೆ ಹೋಗ್ತಾ ಇದ್ದೀಯಾ?
-ಎಲ್ಲಿಗೆ! ಎಲ್ಲಿಗೆ! ಯೋಚನೇ ನೇ ಮಾಡಲಿಲ್ಲ. ಹೊರಟುಬಿಟ್ಟೆ. ಹೋಗ್ತಾ ಇದ್ದೀನಿ.
- ಮೂಟೆಯಲ್ಲೇನಿದೆ?
-ನಂಗೊತ್ತಿಲ್ಲಪ್ಪ. ಅವ್ರು ಕೊಟ್ಟಿದ್ದ ತುಂಬಿಕೊಂಡು ಹೊರಟೇ ಬಿಟ್ಟೆ. ಮತ್ತೆ ಮೂಟೆ ಬಿಚ್ಚಿ ನೋಡೇ ಇಲ್ಲ.
ಇನ್ನೊಬ್ಬ ರಸ್ತೆ ಬದಿಯಲ್ಲಿ ಮರವೊಂದನ್ನು ತಬ್ಬಿ ನಿಂತಿದ್ದ.ಒಬ್ಬ ದಾರಿಹೋಕ ಅಲ್ಲಿ ಬಂದ.
-ಇದೇನು ಮರ ತಬ್ಬಿ ನಿಂತಿದ್ದೀಯಾ?
-ಬಿಡು ಅಂದ್ರೆ ಬಿಡ್ತಾ ಇಲ್ಲಾ ನೋಡಿ.
-ಅಲ್ವೋ ಮಹಾರಾಯ ಆ ಮರ ನಿನ್ನನ್ನು ತಬ್ಬಿಕೊಂಡಿಲ್ಲ. ನೀನೇ ಅದನ್ನು ತಬ್ಬಿ ಕೊಂಡಿದ್ದೀಯಾ.ನೋಡು ಹೀಗೆ ಮಾಡು, ಅದು ನಿನ್ನನ್ನು ಬಿಟ್ ಬಿಡುತ್ತೆ, ಅಂತಾ ಹೇಳುತ್ತಾ ತನ್ನ ಎರಡೂ ಕೈಗಳನ್ನು ಎರಡೂ ಪಕ್ಕಕ್ಕೆ ಚಾಚುತ್ತಾನೆ. ಮರ ತಬ್ಬಿದ್ದವನೂ ಹಾಗೇ ಮಾಡ್ತಾನೆ.
- ನೋಡು ಈಗ ಮರ ನಿನ್ನನ್ನು ಬಿಟ್ಟು ಬಿಡ್ತು.
- ಹೌದಲ್ವಾ ನಾನು ಎಷ್ಟು ಹೊತ್ನಿಂದ ಹೀಗೇ ನಿಂತಿದ್ದೇ ಗೊತ್ತಾ? ನೀವು ಬರದೇ ಹೋಗಿದ್ರೆ ಈ ರಾತ್ರಿಯೆಲ್ಲಾ ಇಲ್ಲೇ ಕಳೀ ಬೇಕಾಗಿತ್ತು
ಅಜ್ಞಾನದಿಂದ ಕೂಡಿದರೆ ರಾತ್ರಿಯೇನೂ ಇಡೀ ಜೀವನವನ್ನೇ ಕಳೆಯಬೇಕಿತ್ತು, ಅಂದುಕೊಂಡು ದಾರಿಹೋಕ ಮುಂದೆ ಸಾಗಿದ.
ಈ ತರಹ ಜನ ನಿಮ್ಗೆ ಸಿಕ್ಕಿದ್ದಾರಾ? ಸಿಕ್ಕಿರದೇ ಇರಬಹುದು. ಆದರೆ ತುಂಬಾ ಜನರು ಎದುರಿಸುತ್ತಿರುವ ಸಮಸ್ಯೆಗಳು ಇಂತಹವೇ ಅಂದ್ರೆ ಆಶ್ಚರ್ಯವಾಗಬಹುದು. ತನ್ನದಲ್ಲದ ಅನೇಕ ಸಮಸ್ಯೆಗಳನ್ನು ತಲೆಮೇಲೆ ಹೊತ್ಕೊಂಡು ಒದ್ದಾಡ್ತಾ ಇರ್ತಾರೆ. ಅದರ ಪರಿಹಾರವೂ ಗೊತ್ತಿರುವುದಿಲ್ಲ. ಅಲ್ಲದೇ ಮುಖ್ಯವಾಗಿ ಅದು ಅವರ ಸಮಸ್ಯೆಯಲ್ಲ.ಆದರೂ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಜನರನ್ನು ನೀವು ಖಂಡಿತಾ ನೋಡಿರುವಿರಲ್ಲವೇ?
ಯಾವ ಸಮಸ್ಯೆಗಳೂ ಅವುಗಳೇ ತಾನಾಗಿಯೇ ಬಂದು ನಮ್ಮನ್ನು ಅಪ್ಪಿಕೊಳ್ಳುವುದಿಲ್ಲ. ಕೆಲವು ಸ್ವಯಂ ಕೃತಾಪರಾಧಗಳು.ಅವುಗಳನ್ನು ನಾವು ಬಿಡಬೇಕಷ್ಟೆ. ಜೀವನ ಹಗುರ ಮಾಡಿಕೊಳ್ಳುವುದು ಬಿಡುವುದು ನಮ್ಮ ಕೈಲೇ ಇದೆ.
ಮಂಗಳವಾರ, ಸೆಪ್ಟೆಂಬರ್ 14, 2010
ಅಹಂಕಾರ ಮಮಕಾರಗಳ ತ್ಯಾಗದಿಂದಲೇ ಸುಖ
ನಾಸ್ತಿ ವಿದ್ಯಾಸಮಂ ಚಕ್ಷು: ನಾಸ್ತಿ ಸತ್ಯಸಮ: ತಪ:|
ನಾಸ್ತಿ ರಾಗಸಮಂ ದು:ಖಂ ನಾಸ್ತಿ ತ್ಯಾಗಸಮಂ ಸುಖಮ್ ||
ವಿದ್ಯೆಗೆ ಸಮನಾದ ಕಣ್ಣಿಲ್ಲ. ಸತ್ಯಕ್ಕೆ ಸಮನಾದ ತಪಸ್ಸಿಲ್ಲ. ರಾಗಕ್ಕೆ ಸಮನಾದ ದು:ಖವಿಲ್ಲ. ತ್ಯಾಗಕ್ಕೆ ಸಮನಾದ ಸುಖವಿಲ್ಲ.
ವಿದ್ಯಾವಂತನಾಗದೆ ಕಣ್ಣಿದ್ದರೂ ಕುರುಡನಂತೆಯೇ. ಕುರುಡನೂ ವಿದ್ಯಾವಂತನಾಗಿದ್ದರೆ ಅವನು ಕುರುಡನಲ್ಲ. ಮಾನವನಿಗೆ ವಿದ್ಯೆಯೇ ನಿಜವಾದ ಕಣ್ಣು. ಜೀವನದಲ್ಲಿ ಸತ್ಯವಂತನಾಗಿ ಬಾಳಿದರೆ ಅದರ ಮುಂದೆ ಯಾವ ತಪಸ್ಸೂ ಕಡಿಮೆಯೇ.
ದು:ಖಕ್ಕೆ ಮೂಲ ಯಾವುದು? ಇದು ನನ್ನದು, ನನ್ನದು ಎಂಬ ಅನುರಾಗ. ನನ್ನದೆಂಬುದಕ್ಕೆ ಕಿಂಚಿತ್ ನೋವಾಗುವುದನ್ನೂ ಮನ ಸಹಿಸದು.ಮಿತಿಮೀರಿದ ಪ್ರೀತಿಯೇ ಅನುರಾಗ. ಅದರಿಂದಲೇ ದು:ಖ. ನನ್ನದೇನೂ ಇಲ್ಲ, ಅವನದೇ ಎಲ್ಲಾ, ಎಂದು ಎಲ್ಲಾ ಆ ಭಗವಂತನದೇ ಎಂದು ತಿಳಿದರೆ ದು:ಖಕ್ಕೆ ಕಾರಣವೆಲ್ಲಿ?
ನನಗಾಗಿ ಎಷ್ಟು ಮಾಡಿಕೊಂಡರೂ ಇನ್ನೂ ಬೇಕೆಂಬ ಅತೃಪ್ತಿ ಇದ್ದೇ ಇರುತ್ತದೆ. ಆದರೆ ಕೈಲಾಗದವನಿಗೆ ಒಂದಿಷ್ಟು ಸಹಾಯ ಮಾಡಿ ನೋಡಿ, ಅವನ ಕಣ್ಣಲ್ಲಿ ನಲಿವು ಕಂಡಾಗ ಆಗುವ ಸಂತೋಷಕ್ಕಿಂತ ಬೇರೆ ಏನು ಬೇಕು?
ಸೋಮವಾರ, ಸೆಪ್ಟೆಂಬರ್ 13, 2010
ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ
ನನ್ನ ರಚನೆಯನ್ನು ಶ್ರೀಮತಿ ಲಲಿತಾ ರಮೇಶ್ ಹಾಡಿದ್ದಾರೆ, ಕೇಳಿ, ನಿಮ್ಮ ಪ್ರತಿಕ್ರಿಯೆ ತಿಳಿಸಿ.
ಸಿರಿ ಭೂವಲಯ
ಅಂತರ್ಜಾದಲ್ಲೂ ಒಂದಷ್ಟಿದೆ. ನೋಡಿ: http://en.wikipedia.org/wiki/Siribhoovalaya
ಚಿಲ್ಲರೆ ಲೆಕ್ಖ ಇಟ್ಟಿದ್ದೇ ಇಟ್ಟಿದ್ದು!!
ಮೊನ್ನೆ ಸತ್ಸಂಗದಲ್ಲಿ ಮಿತ್ರರೊಬ್ಬರು ಒಂದು ಮಾತು ಹೇಳಿದರು " ನಿತ್ಯವೂ ನಾವು ಮಾಡುವ ಹಣದ ಖರ್ಚಿನ ಲೆಕ್ಖವನ್ನು ಡೈರಿಯಲ್ಲಿ ಸಾಮಾನ್ಯವಾಗಿ ಬರೆದಿಡುತ್ತೇವೆ.ಆದರೆ ನಮಗರಿವಿಲ್ಲದಂತೆ ನಾವು ಯಥೇಚ್ಯವಾಗಿ ಖರ್ಚುಮಾಡುವ ನೀರು, ಗಾಳಿ, ಬೆಳಕಿನ ಲೆಕ್ಖ ಇಡುತ್ತೇವೆಯೇ?"
ಪ್ರಶ್ನೆ ಕೇಳಿದೊಡನೆ ಬೆಚ್ಚಿಬಿದ್ದೆ. ಅಲ್ವಾ! ಪ್ರತಿ ಸೆಕೆಂಡಿನಲ್ಲಿ ಉಸಿರಾಡಲು ಗಾಳಿಬೇಕು, ದಿನಕ್ಕೆ ಅದೆಷ್ಟು ಪ್ರಮಾಣದಲ್ಲಿ ನೀರು ವೆಚ್ಚ ಮಾಡುತ್ತೇವೆಯೋ ನಮಗೇ ಗೊತ್ತಿರುವುದಿಲ್ಲ. ಸೂರ್ಯ ಒಂದು ದಿನ ಮಂಕಾದರೆ ಸಾಕು ನಮ್ಮ ಜೀವನದಲ್ಲೂ ಮಂಕು ಕವಿಯದೇ ಇರಲಾರದು. ಇತ್ತೀಚೆಗಂತೂ ಕೆಲವೆಡೆ ಕುಡಿಯಲು ನೀರಿಗೆ ಹಾಹಕಾರವಾದರೆ ಕೆಲವು ಮನೆಗಳಲ್ಲಿ ಪುರಸಭೆಯವರು/ಪಂಚಾಯ್ತಿ ಯವರು ಸರಬರಾಜು ಮಾಡುವ ನೀರು ಮನೆಯ ತೊಟ್ಟಿ ತುಂಬಿ ಓವರಹೆಡ್ ಟ್ಯಾಂಕ್ ತುಂಬಿ ಹೆಚ್ಚಾಗಿ ಮೋರಿಯಲ್ಲಿ ಹರಿದುಹೋಗುವ ಪರಿ! ಆನೆತೊಳೆಯಲು ಸಾಕಾಗುವಷ್ಟು ನೀರನ್ನು ಕಾರ್ ತೊಳೆಯಲು ಉಪಯೋಗಿಸುವ ರೀತಿ!
ಹೌದಲ್ವಾ!
ನಾವು ಖರ್ಚುಮಾಡುವ ಪ್ರತಿ ಹನಿ ನೀರಿಗೆ ಲೆಕ್ಖ ಇಡುವ ಪರಿಸ್ಥಿತಿ ಇದ್ದಿದ್ದರೆ!
ಸಿಲಿಂಡರ್ ನಲ್ಲಿ ಗಾಳಿಯನ್ನು ಕೊಂಡು ಉಪಯೋಗಿಸುವಂತಿದ್ದರೆ!
ಸೂರ್ಯನ ಬೆಳಕಿಗೂ ಕಾಸು ಕೊಡಬೇಕಾಗಿದ್ದರೆ!
ಭಗವಂತನು ಅದೆಷ್ಟು ದಯಾಮಯ! ಅವನು ಕೊಟ್ಟಿದ್ದನ್ನೆಲ್ಲಾ ಬಿಟ್ಟಿ ಪಡೆಯುವ ನಾವು ಅವನನ್ನು ಮರೆತು ಚಿಲ್ಲರೆ ಲೆಕ್ಖ ಇಟ್ಟಿದ್ದೇ ಇಟ್ಟಿದ್ದು!!
ಶನಿವಾರ, ಸೆಪ್ಟೆಂಬರ್ 11, 2010
ಶ್ರೀ ಸು.ರಾಮಣ್ಣನವರ ಭಾಷಣ
ಮಾಡಿದ್ದು ಸಾಸಿವೆಕಾಳಿನಷ್ಟೂ ಅಲ್ಲ
ಹರಿಹರಪುರದೊಡನೆ ನಿಮ್ಮೆಲ್ಲರ ಸಂಬಂಧ ಹೀಗೆಯೇ ಇರಲೆಂದು ಬಯಸುತ್ತಾ
ನಿಮ್ಮ
-ಶ್ರೀಧರ
Dear Sri. Sridhar,
Pammi and myself are moved by the unrelenting efforts made in orgainising the function meticulously in a way unheard in recent days that too in this materialistic world where nuclear families are the order of the day. Much more is that you have made it all to see in the internet for those unfortunates who could not be present on that day.
The whole hearted participation by all of you under your guidance on that day was most touching and reminiscence of the nostlgia. The warmth in all of you made us to relish the moments throughout our life.
The way your family members and that of your co-brother's family participated whole heartedly and made the whole function a grand one is to be lauded.
I am happy, lucky and contented to be part of this great family of HRS and Parvathamma and get to know you all and look to other side of this great family.
I thank you once again for your great efforts and look forward for your future endeavours through this media and personal visits
Narayanaswamy B.S & Padma
ನಮ್ಮ ಋಷಿಮುನಿಗಳು ಮತ್ತು ಆಧುನಿಕ ವಿಜ್ಞಾನಿಗಳು - ಒಂದು ಚಿಂತನೆ
ನಮ್ಮ ಋಷಿಮುನಿಗಳ ತಪಸ್ಸಿನ ಫಲ ಮತ್ತು ಆಧುನಿಕ ವಿಜ್ಞಾನಿಗಳ ಸಂಶೋಧನೆ ಪರಿಣಾಮ- ಒಂದು ಚಿಂತನೆ
ಆನ್ ಲೈನ್ ಪೂಜೆ
ಗುರುವಾರ, ಸೆಪ್ಟೆಂಬರ್ 9, 2010
ಹರಿಹರಪುರದಲ್ಲಿ ಸೋಂದಾ ಸ್ವರ್ಣವಲ್ಲೀ ಪೀಠಾಧೀಶರು
ನಮ್ಮ ಹಿತ್ತಲ ಮನೆ
ಹೀಗಿತ್ತು ನಮ್ಮ ಹಿತ್ತಲ ಮನೆ
ನನ್ನ ಹಳ್ಳಿಯಲ್ಲಿ ನಮಗೊಂದು ಹಿತ್ತಲು. ಅದರಲ್ಲಿ ಒಂದು ಚಿಕ್ಕ ಮನೆ ಕಟ್ಟಿ ಅದರಲ್ಲಿ ಅದರಲ್ಲಿ ಹಸು ಸಾಕುವ ಯೋಜನೆ ಮಾಡಿ ವಿಫಲವಾಯ್ತು. ಹತ್ತಾರು ವರ್ಷಗಳಿಂದ ಹಾಗೆಯೇ ಪಾಳು ಬಿತ್ತು. ಊರ ಜನರಿಗೆ ತೆರೆದ ಶೌಚಾಲಯವಾಯ್ತು. ನಾನು ಊರಿಗೆ ಹೋದಾಗಲೆಲ್ಲಾ ಅದರಮುಂದೆ ನಿಂತು ದು:ಖಿಸುವುದೊಂದೇ ದಾರಿಯಾಗಿತ್ತು. ಅಂತೂ ಅದಕ್ಕೂ ಇದ್ದಕ್ಕಿದ್ದಂತೆ ಮೊಕ್ಷ ಸಿಕ್ಕಿತು. ತಮ್ಮನ ಮಗಳ ಮದುವೆ ನಿಶ್ಚಯವಾಯ್ತು. ಅದೇ ಜಾಗದಲ್ಲಿ ಮಗಳ ಮದುವೆ ಮಾಡಬೇಕೆಂದು ಸಂಕಲ್ಪ ಮಾಡಿದೆ. ಮುಂದೆ ಮೂರು ವಾರಗಳಲ್ಲಿ ಆದ ಪರಿವರ್ತನೆಯ ಚಿತ್ರ ಹಾಕಿರುವೆ, ನೋಡಿ.
ಇಟಾಚಿಯಿಂದ ನೆಲಸಮ ಮಾಡಿ ಕಾಮಗಾರಿಶುರುಮಾಡಿದಾಗ
ಸಿದ್ಧವಾಯಿತು ಐದುಸಾವಿರ ಲೀಟರ್ ನೀರು ಹಿಡಿಯುವ ಸಂಪ್
ಹಗಲಿರುಳು ದುಡಿದ ದಿಲೀಪ
ಸುತ್ತ ಕಾಂಪೌಂಡ್ ನಿರ್ಮಿಸಿ, ಇದ್ದ ಮನೆಯನ್ನು ದುರಸ್ತಿ ಗೊಳಿಸಿ, ಶೌಚಾಲಯ, ಸ್ನಾನಗೃಹ, ನೀರು ವಿದ್ಯುತ್ ವ್ಯವಸ್ತೆ ಮಾಡಿ, ಅದರಲ್ಲಿಯೇ ಶೀಟ್ ಪೆಂಡಾಲ್ ಹಾಕಿ ನಡೆದೇ ಹೋಯ್ತು ತಮ್ಮನ ಮಗಳ ಮದುವೆ.ಕೇವಲ ಮೂರು ವಾರಗಳಲ್ಲಿ ಇಷ್ಟೆಲ್ಲಾ ಸಾಧ್ಯವಾಯ್ತೆಂದರೆ ನಂಬಲು ಕಷ್ಟವಾದೀತು. ಇದೇ ಜಾಗದಲ್ಲಿ ಒಂದು ಸಭಾಂಗಂಣ ನಿರ್ಮಾಣ ಮಾಡಬೇಕೆಂಬುದುಊರ ಜನರ ಬೇಡಿಕೆ.ಇಲ್ಲಿಯೇ ಒಂದು ಗುಡಿ ಕೈಗಾರಿಕೆಶುರುಮಾಡಿ ಕೆಲಸ ವಿಲ್ಲದ ಕೈಗಳಿಗೆ ಕೆಲಸ ಕೊಟ್ಟು,ಊರಿನ ಜನರಿಗೆ ಆಗಿಂದಾಗ್ಗೆ ಸಂಸ್ಕಾರ ಪ್ರಧಾನವಾದ ಕಾರ್ಯಕ್ರಮಗಳನ್ನು ನಡೆಸುವ ಚಿಂತನೆ. ಮೊದಲನೆಯ ಕಾರ್ಯಕ್ರಮವಾಗಿ ತುಮಕೂರಿನ ರಾಮಕೃಷ್ಣ- ವಿವೇಕಾನಂದಾಶ್ರಮದ ಪೂಜ್ಯ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರಿಂದ ನಡೆದ ಉಪನ್ಯಾಸ ಕಾರ್ಯಕ್ರಮವು ಜನರ ಮೆಚ್ಚುಗೆಗೆ ಪಾತ್ರವಾಯ್ತು.
ಅಜ್ಜೀ ಹತ್ರ ತಲೆ ಸವರಿಸಿಕೊಂಡಿದ್ದೀರಾ?ಅದರ ಸುಖ ಗೊತ್ತೇ?
ಮದ್ಯಾಹ್ನ ನಾಲ್ಕು ಗಂಟೆ ಯಾಯ್ತೆಂದ್ರೆ ಸಾಕು" ದನಾ ಹೊಡ್ಕೊ೦ಡ್ ಬರೋಕೆ ಯಾರು ಹೋದ್ರು? ನಾಗೂ ನೇ[ನಮ್ಮಪ್ಪ] ಅವ್ನಾದ್ರೆ ಇವತ್ತು ದನಗಳಿಗೆ ದೊಡ್ಡೀನೇ ಗತಿ. ಶ್ರೀಧರನೇ? ಅವನಾದ್ರೆ ಎಲ್ಲಿದ್ದರೂ ಹೊಡೆದುಕೊಂಡೆ ಬರ್ತಾನೆ. ನನ್ನ ಬಗ್ಗೆ ಅದೆಂತಹಾ ವಿಶ್ವಾಸ ಇತ್ತೆಂದರೆ....ಅದರಿಂದ ಅವರು ಹೊಗಳಲೀ ಅಂತಾನೇ ನಾನು ಮೈ ಮುರಿದು ಕೆಲಸ ಮಾಡೀ ಮಾಡೀ ಹೊಗಳಿಸಿಕೊಳ್ಳುತ್ತಿದ್ದೆ. ಈಗಲೂ ಹಾಗೇ ಅನ್ನಿ. ಇರಲಿ. ಅದೇ ಕಥೆ ಇನ್ನೂ ಪೂರ್ತಿ ಆಗಿಲ್ಲ. ನಮ್ಮೂರಲ್ಲಿ ಮೂರು ಬೆಟ್ಟಗಳ ಸಾಲು. ಚಿಕ್ಕಬೆಟ್ಟ, ದೊಡ್ಡಬೆಟ್ಟ, ಗೋರೀ ಬೆಟ್ಟ ಅಂತಾ ಹೆಸರು. ನಮ್ಮಪ್ಪ ಬೆಳಿಗ್ಗೆ ಹತ್ತು ಗಂಟೆ ಹೊತ್ತಿಗೆ ಚಿಕ್ಕ ಬೆಟ್ಟಕ್ಕೆ ದನಗಳನ್ನು ಹೊಡೆದುಕೊಂಡು ಬಿಟ್ಟು ಬಂದರೆ ಅವು ಮೇಯುತ್ತಾ ಮೇಯುತ್ತಾ ಚಿಕ್ಕಬೆಟ್ಟದಿಂದ, ಗೋರೀ ಬೆಟ್ಟ, ಬಳಸಿಕೊಂಡು ಸಂಜೆಹೊತ್ತಿಗೆ, ದೊಡ್ಡ ಬೆಟ್ಟದಲ್ಲಿರುತ್ತಿದ್ದವು. ಸಂಜೆ ಸ್ಕೂಲ್ ಮುಗಿಸಿ ನಾನು ಬೆಟ್ಟದ ಬುಡಕ್ಕೆ ಹೋಗಿ ನನ್ನ ಟೆಲಿಸ್ಕೋಪಿಕ್ ಕಣ್ಣುಗಳಿಂದ ದೃಷ್ಟಿ ಹಾಯಿಸಿ ನೋಡಿದರೆ ದೊಡ್ದಬೆಟ್ಟದಲ್ಲಿ ಎಲ್ಲಾದರೂ ಒಂದುಕಡೆ ಮೇಯ್ತಿರೋದು ಕಣ್ಣಿಗೆ ಬೀಳ್ತಿತ್ತು. ಆಗ ಅಲ್ಲಿಗೆ ಹೋಗಿ ದನ ಅಟ್ಟಿಕೊಂಡು ಬರ್ತಿದ್ದೆ. ಒಂದಿನಾ ಏನಾಯ್ತು, ಗೊತ್ತಾ? ನನಗೆ ಕೆಳಗಿನಿಂದ ದನ ಕಾಣ್ಲಿಲ್ಲ. ಹೀಗೆ ಅದೆಷ್ಟೋ ದಿನ ಆಗ್ತಿತ್ತು. ಸರೀ ಹುಡುಕಿಕೊಂಡು ಹೊರಟೆ. ನಾನು ದೊಡ್ದಬೆಟ್ಟದ ನೆತ್ತಿಯಲ್ಲಿದ್ದೀನಿ. ಅಲ್ಲಿಂದ ನೋಡಿದರೆ ಕೆಳಗಡೆ ಬೀರನಹಳ್ಳಿಯ ಹೊಲದಲ್ಲಿ ದನಗಳು ಜೋಳ ಮೇಯ್ತಿವೆ! ಅಲ್ಲಿಂದ ನೇರ ಕೆಳಕ್ಕೆ ಓಡುತ್ತಾ ಬಂದೆ ನೋಡಿ! ಅಬ್ಭಾ! ಇವತ್ತು ನೆನಸಿ ಕೊಂಡರೆ, ನನಗೇ ಆಶ್ಚರ್ಯ ವಾಗುತ್ತೆ! ಈಗ ಯಾರು ನೋಡಿದರೂ ಅಸಾಧ್ಯವೆಂದೇ ಹೇಳ್ತಾರೆ! ಆದರೆ ಅವತ್ತು ಅದು ಸಾಧ್ಯವಾಯ್ತು.ಸಂಜೆ ಸ್ವಲ್ಪ ಲೇಟಾಗಿ ಮನೆಗೆ ದನಾಹೊಡೆದುಕೊಂಡುಬಂದು ನಮ್ಮಜ್ಜಿ ಹತ್ತಿರ ನನ್ನ ಸಾಹಸದ ಕಥೆ ಹೇಳಿ ,ಅವರ ಮುಂದೆ ಹೀರೋ ಪೋಸ್ ಕೊಟ್ಟು , ಅವರ ಬಳೀ ಕೂತ್ಕೊಂಡು ತಲೆ ಸವರಿಸಿಕೊಂದಿದ್ದನ್ನು ನೆನಪಿಸಿಕೊಂಡ್ರೆ, ಇವತ್ತಿನ ಯಾವ ಸುಖಕ್ಕೂ ಅದು ಕಮ್ಮಿ ಇರಲಿಲ್ಲ.
ತೇಟ್ ನಮ್ಮಕ್ಕ ನಂತೆ ಇದ್ದಾರಲ್ಲಾ!
ಇವತ್ತು ನನ್ನ ವಂಶವೃಕ್ಷದ ಬಗ್ಗೆ ಒಂದು ಬರಹ ಇಲ್ಲೇ ಸಂಪದದಲ್ಲಿ ಹಾಕಿದೆ. ಬಹುಶ: ಅದನ್ನು ಓದಿದ ಮಿತ್ರ ಶ್ರೀಕಾಂತ್ "ವಂಶ ವೃಕ್ಷ?" ಕುಟುಕು ಬರಹ ಹಾಕಿದ್ರು. ಪರವಾಗಿಲ್ಲ.ನಾವೆಲ್ಲಾ ಮೂಲದಲ್ಲಿ ಮಂಗನಿಂದ ಮಾನವ ರಾಗಿದ್ದೇವೆಂದು ಓದಿದ್ದೇವೆ. ಕೆಲವರು ಇನ್ನೂ ಹಾಗೆಯೇ ಉಳಿದಿದ್ದೇವೆ. ಇರಲಿ....
ನಾನೇಕೆ ವಂಶವೃಕ್ಷ ಬರೆಯಲು ಹೊರಟಿರುವೆ? ಅದರ ಹಿನ್ನೆಲೆ ಸ್ವಲ್ಪ ತಿಳಿಸಿದರೆ ಉತ್ತಮ ಅಲ್ವಾ?
ಘಟನೆ-೧:-
೧೯೭೪ ಇರಬಹುದು. ನಾನು ಬೆಂಗಳೂರಿನ ಭಾರತೀಯ ದೂರವಾಣಿ ಕಾರ್ಖಾನೆಯಲ್ಲಿ ತರಬೇತಿ ಪಡೆಯತ್ತಿದ್ದೆ. ಆರ್.ಎಸ್.ಎಸ್. ನಿಂದಾಗಿ ಹಲವರ ಪರಿಚಯವಾಗಿತ್ತು. ಅದರಲ್ಲಿ ಒಬ್ಬರು ವೆಂಕಟರಾಮ್.ಐ.ಟಿ.ಐ. ಕಲೊನಿಯಲ್ಲಿದ್ದ ಅವರ ಮನೆ ನನಗೆ ತುಂಬಾ ಹತ್ತಿರದ ಮನೆಯಾಯ್ತು. ಅವರ ಅಮ್ಮ ನನಗೂ ಅಮ್ಮ ಆದರು. ಅವರ ಚಿಕ್ಕಮ್ಮ ನನಗೂ ಚಿಕ್ಕಮ್ಮ ಆದರು. ಒಂದು ದಿನ ಅವರ ಮನೆಯಲ್ಲಿದ್ದೆ. ಅವರ ಮನೆಗೆ ಅವರ ಬಂಧುಗಳೊಬ್ಬರು ಬಂದರು. ಅವರ ಮಗನ ಉಪನಯನಕ್ಕಾಗಿ ಅವರನ್ನುಆಮಂತ್ರಿಸಿ ಹೋದರು. ಅವರನ್ನು ನೋಡಿದರೆ ತೇಟ್ ನಮ್ಮಕ್ಕ ನಂತೆ ಇದ್ದರು. ಇದ್ಯಾರು ಹೀಗೆ ನಮ್ಮಕ್ನಂತೆ ಇದ್ದಾರಲ್ಲಾ! ಹಾಗೇ ಯೋಚಿಸುತ್ತಾ ಕುಳಿತೆ. ಕೇಳುವಷ್ಟು ಧೈರ್ಯವಿರಲಿಲ್ಲ. ಅವರು ಆಮಂತ್ರಣ ಕೊಟ್ಟು ಹೋಗುತ್ತಲೇ ಕುತೂಹಲ ತಡೆಯಲಾರದೆ ಟೇಬಲ್ ಮೇಲಿದ್ದ ಆಮಂತ್ರಣ ಪತ್ರಿಕೆ ತೆಗೆದು ನೋಡುತ್ತೇನೆ. " ಶ್ರೀಕಂಠಯ್ಯ ಮತ್ತು ಮಕ್ಕಳು, ಗಾಂಧೀ ಬಜಾರ್ ಬೆಂಗಳೂರು" ಎಂದು ವಿಳಾಸವಿದೆ.ಈ ಹೆಸರು ನಾನೆಲ್ಲೋ ಕೇಳಿದ್ದೆನಲ್ಲಾ! ಹೂ ನೆನಪಾಯ್ತು, ಅದು ನಮ್ಮತ್ತೆ ಮಗಳುಶಾರದೆಯ ಮಾವನ ಅಂಗಡಿ ವಿಳಾಸ.ಬಂದಿದ್ದವಳು ಶಾರೆದೆಯೇ. ನಾನು ನೋಡಿಯೇ ಇಲ್ಲ. ಪರಿಚಯವಿಲ್ಲ.
ಬಂದ ಅತಿಥಿಗಳನ್ನು ಕಳಿಸಿಕೊಟ್ಟು ಚಿಕ್ಕಮ್ಮ ಮನೆಯೊಳಗೆ ಬಂದರು " ಶ್ರೀಧರಾ, ಅವರು ನಮ್ಮಕ್ಕನ ಸೊಸೆ........ " ಮಧ್ಯೆದಲ್ಲೇ ಅವರನ್ನು ತಡೆದು ನಾನು ಹೆಳಿದೆ..ಅವರ ಹೆಸರು ಶಾರದಾ"
-" ನಿನಗೆ ಹೇಗೆ ಅವರು ಗೊತ್ತೋ?
_" ಚಿಕ್ಕಮ್ಮ , ಅವರನ್ನು ನೋಡಿದಾಗಲೇ ಅಂದು ಕೊಂಡೆ" ಇವರು ನಮ್ಮಕ್ಕ ಇದ್ಧಾಗೇ ಇದಾರಲ್ಲಾ, ಅಂತಾ ಆಮಂತ್ರಣ ಪತ್ರಿಕೆ ತೆರೆದು ನೋಡಿದೆ, ನನ್ನ ಡೌಟ್ ಕ್ಲಿಯರ್ಆಯ್ತು. ಅವರು ನಮ್ಮತ್ತೆ ಸುಬ್ಬಲಕ್ಷ್ಮಿ ಮಗಳು ಶಾರದಾ ಎಂದು ದೃಢವಾಯ್ತು."
- ಮತ್ತೆ ಯಾಕೆ ನೀನು ಅವರನ್ನು ಮಾತನಾಡಿಸಲಿಲ್ಲ?
- ಇಲ್ಲಿಯವರಗೆ ಅವರನ್ನು ನಾನು ನೋಡಿಯೇ ಇರಲಿಲ್ಲ.ಅವರಾದರೋ ಶ್ರೀಮಂತರು. ನಮ್ಮ ಬಡತನದ ಮನೆಯ ಸಂಪರ್ಕ ಇಟ್ಟುಕೊಂಡಿಲ್ಲ.ನಮ್ಮತ್ತೆ ನಮ್ಮ ಮನೆಗೆ ಬರ್ತಾ ಇರ್ತಾರೆ ಅಷ್ಟೆ.
[ನಿಜವಾಗಿ ನನಗೆ ಅಂದು ಅಳು ಬಂದಿತ್ತು . ಈಗ್ಗೆ ಕೆಲವು ದಿನಗಳ ಹಿಂದೆ ನಮ್ಮತ್ತೆ ವಿಧಿವಷ ರಾದರಂತೆ]
ಘಟನೆ-೨:-
೧೯೮೨ ಇರಬಹುದು. ಅರಸೀಕೆರೆ ತಾಲ್ಲೂಕು ಬಾಣಾವರಕ್ಕೆ ನನ್ನ ಸ್ನೇಹಿತ ,ಆರ್ ಎಸ್.ಎಸ್.ಕಾರ್ಯಕರ್ತ ಸೇತೂರಾಮ್ ಮನೆಯಲ್ಲಿ ಯಾವುದೋ ಸಮಾರಂಭಕ್ಕೆ ಹೋಗಿದ್ದೆ. ಅಲ್ಲಿ ನನ್ನ ಮಿತ್ರ ಸೇತೂರಾಮ್ " ಇವರ್ಯಾರು ಗೊತ್ತಾ? ಅಂತಾ ಒಬ್ಬರನ್ನು ತೋರಿಸಿ ನನ್ನನ್ನು ಕೇಳಿದರು. ನನಗೆ ಗೊತ್ತಿಲ್ಲಾ ಎಂದೆ. ಅವರೇ ಹೇಳಿದರು " ಇವರು ನಿಮ್ಮ ಭಾವ ನರಸಿಂಹ ಮೂರ್ತಿ, ಬೇಲೂರಿನಲ್ಲಿ ಕೆ.ಇ.ಬಿ.ನಲ್ಲಿ ಇಂಜಿನಿಯರ್’ ಆಗ ಗೊತ್ತಾಯ್ತು. ಅವರ ಹೆಸರು ಕೇಳಿದ್ದೆ ನಮ್ಮ ದೊಡ್ದಪ್ಪ ನಾರಾಯಣಪ್ಪ ನವರ ಅಳಿಯ ನರಸಿಂಹ ಮೂರ್ತಿ. ನನಗೆ ಭಾವ. ಅಂತೂ ನಮ್ಮ ಪುನರ್ ಮಿಲನಕ್ಕೆ ಸೇತೂರಾಮ್ ಸೇತುವೆ ಯಾದರು. ಸೇತೂ ರಾಮ್ ಗೆ ಮುಂಚಿನಿಂದ ನರಸಿಂಹ ಮೂರ್ತಿ ಪರಿಚಿತರು. ಅವರ ವಿವರ ಎಲ್ಲಾ ಸೇತೂರಾಮ್ ಗೆ ಗೊತ್ತಿತ್ತು. ಘಟನೆ-೩: ಇದು ಈಗ್ಗೆ ಎರಡು ಮೂರು ವರ್ಷಗಳ ಮಾತು ಅಷ್ಟೆ. ಹಾಸನದ ಬಶೆಟ್ಟಿಕೊಪ್ಪಲ್ ರಸ್ತೆಯಲ್ಲಿ ನಾನು ನಡೆದು ಹೋಗುತ್ತಿದ್ದೆ. ಎದುರಿನಿಂದ ಒಬ್ಬ ಕಾಲೇಜು ಹುಡುಗಿ ಇನ್ನೊಬ್ಬ ಹೆಂಗಸರನ್ನು ಕೂರಿಸಿಕೊಂಡು ಸ್ಕೂಟಿಯಲ್ಲಿ ನನ್ನೆದುರು ಬಂದಳು. ಸ್ಕೂಟಿಯಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಹೆಂಗಸು ನನ್ನನ್ನು ಕಂಡಕೂಡ್ಲೆ ಸ್ಕೂಟಿಯನ್ನು ನಿಲ್ಲಿಸಲು ಹೇಳಿದರು. ಸ್ಕೂಟಿ ನಿಂತಿತು. ಆಶ್ಚರ್ಯ! ನಮ್ಮ ಪುಟ್ಟನಂಜತ್ತೆಯ ಮೊಮ್ಮಗಳು ಸುಶೀಲ ಎದಿರು ನಿಂತು" ಏನೋ ಶ್ರೀಧರ? ಅಂತಾಳೆ. ಸ್ಕೂಟಿ ಓಡಿಸುತ್ತಿದ್ದ ಅವಳ ಮಗಳು ಕಕ್ಕಾಬಿಕ್ಕಿ. ನನಗೇ ನನ್ನತ್ತೆಯ ಕುಡಿಯೊಂದು ಪರಿಚಯವಿಲ್ಲ. ನಮ್ಮ ಮಕ್ಕಳಿಗೆ ಇನ್ನೆಲ್ಲಿ ಸಾಧ್ಯ? ಇದೆಲ್ಲಾ ಘಟನೆಗಳು ನನ್ನ ತಲೆಯಲ್ಲಿ ಈಗಲೂ ಕೊರೆಯುತ್ತಿವೆ. ನಮ್ಮ ಕೌಟುಂಬಿಕ ಬಾಂಧವ್ಯ ಕಳಚಿ ಹೋಗುತ್ತಿದೆಯಲ್ಲಾ!! ಅದಕ್ಕಾಗಿ ನಮ್ಮಂತವರ ಉಸಿರಿರುವಾಗಲೇ ಬಾಂಧವ್ಯ ಉಳಿಸಲು ಏನಾದರೊಂದು ದಾರಿ ಮಾಡಲೇ ಬೇಕೆನಿಸಿದೆ. ಅದಕ್ಕೆ ಪೂರಕ ವಾಗಿ ಪ್ರಥಮ ಪ್ರಯತ್ನವಾಗಿ ನನ್ನ ತಮ್ಮನ ಮಗಳ ಮದುವೆಯನ್ನು ನಮ್ಮೂರಲ್ಲಿ ಮಾಡಿ ನಮ್ಮಪ್ಪ ನಮ್ಮಮ್ಮ ನ ಕಡೆಯ ನಮ್ಮೆಲ್ಲಾ ಬಂಧುಗಳನ್ನೂ ಮದುವೆಗೆ ಆಹ್ವಾನಿಸಿದ್ದೆವು. ಅನೇಕ ವರ್ಷಗಳ ನಂತರ ನಮ್ಮ ಹಳ್ಳಿಯಲ್ಲಿ ಮದುವೆಯ ನೆಪದಲ್ಲಿ ಸೇರಿದ ನಮ್ಮ ಬಂಧುಗಳಿಗಾದ ಸಂತೋಷಕ್ಕೆ ಪಾರವೇ ಇಲ್ಲ. ಮುಂದೆ ವರ್ಷಕ್ಕೊಮ್ಮೆ ಯಾದರೂ ಹಳ್ಳಿಯಲ್ಲಿ ಎಲ್ಲಾ ಬಂಧುಗಳನ್ನೂ ಆಹ್ವಾನಿಸಿ ಪರಸ್ಪರ ಸಂಬಂಧ ಉಳಿಯಲು ಕಾರ್ಯಕ್ರಮಗಳನ್ನು ರೂಪಿಸುವ ಆಸೆ ಇದೆ.
ಬುಧವಾರ, ಸೆಪ್ಟೆಂಬರ್ 8, 2010
ವೇದ ಗೋಷ್ಠಿಯಲ್ಲಿ
ಜೋಡೀದಾರ್ ನಾಗರಾಜಯ್ಯ
ಇಷ್ಟು ಹೇಳಿದ ಮೇಲೆ ನಮ್ಮ ಮನೆಯ ಕಷ್ಟಗಳನ್ನು ವಿವರಿಸುವ ಅಗತ್ಯವಿಲ್ಲ. ಹೊಟ್ಟೆ ಪಾಡಿಗೆ ಏನಾದರೂ ಮಾಡಬೇಕಲ್ಲಾ, ನಮ್ಮ ಅತ್ತೆ ಹಾಗೂ ನಮ್ಮಪ್ಪ ಕಾಡಿಗೆ ಹೋಗಿ ಮುತ್ತುಗದ ಎಲೆ ಕೊಯ್ದು ತರುತ್ತಿದ್ದರು. ಮನೆಮಂದಿಯೆಲ್ಲಾ ಅದನ್ನು ಒಪ್ಪ-ಓರಣ ಮಾಡಿ ಹಗಲು ರಾತ್ರಿಯೆಲ್ಲಾ ಎಲೆಹಚ್ಚಿ ಮಾರಿದರೆ ನೂರು ಎಲೆಗೆ ಎಂಟಾಣೆ. ಈ ಹಣಕ್ಕೆ ಆಗಲೂ ಒಂದು ಸೇರು ಅಕ್ಕಿ ಸಿಗುತ್ತಿರಲಿಲ್ಲ. ಊರಲ್ಲಿರುವ ಅತಿ ಎತ್ತರದ ತೆಂಗಿನಮರ ಯಾರದೇ ತೋಟದಲ್ಲಿರಲಿ ಅದನ್ನು ಹತ್ತಿ ಕಾಯಿ ಕೆಡವಿದರೆ ಒಂದು ಮರಕ್ಕೆ ಒಂದು ತೆಂಗಿನಕಾಯಿ ಕೂಲಿ.
ಇವೆಲ್ಲಾ ಯಾಕೆ ಬರೆದೆ ಅಂತೀರಾ? ಹಿಂದೆ ಜೋಡೀದಾರರೂ ಅಂದರೆ ಯಾವುದೋ ಹಳ್ಳಿಯ ಒಡೆಯರು ಅಂತಾನೆ ಭಾವನೆ ಅಲ್ಲವೇ? ಆದರೆ ಇದು ಜೋಡೀದಾರರಾಗಿದ್ದ ನಮ್ಮಪ್ಪನ ನೈಜ ಸ್ಥಿತಿ.
ಒಂದಂತೂ ನಮ್ಮಪ್ಪನ ಬಗ್ಗೆ ನಮಗೆ ಹೆಮ್ಮೆ ಇದೆ. ಎಷ್ಟೆ ಬಡತನವಿದ್ದರೂ ಕಳ್ಳತನ ಮಾಡಲಿಲ್ಲ, ಬೇರೆಯವರಿಗೆ ದ್ರೋಹ ಮಾಡಲಿಲ್ಲ. ಪಾಪ! ಅವೆಲ್ಲಾ ಮಾಡಲು ಬಾರದ ಮುಗ್ಧರು ನಮ್ಮಪ್ಪ. ಹಿಂದೆ ಹಿಂದುಳಿದ ಜಾತಿಯವರಿಗೆ ದ್ರೋಹ-ಮೋಸ ವಾಗಿರುವುದರ ಜೊತೆಗೆ ಮುಂದುವರಿದ ಜಾತಿಯಲ್ಲಿ ಹುಟ್ಟಿದ ನಮ್ಮಂತವರಿಗೂ ಆಗಿರುವ ಅನ್ಯಾಯ, ಶ್ರೀಮಂತರೆನಿಸಿಕೊಂಡವರು ನಡೆಸಿಕೊಂಡ ರೀತಿ ಹೇಳಿದರೆ ಕೆಲವರಿಗೆ ತುಂಬಾ ಮುಜುಗರ ವಾಗುತ್ತೆ. ಒಂದು ಮಾತು ಹೇಳಿ ಲೇಖನ ಮುಗಿಸುವೆ. ಶೃಂಗೇರಿ ಮಠಾದೀಶರ ದರ್ಶನ ನಮ್ಮಂತವರಿಗಲ್ಲವೆಂದು ನನ್ನ ನಲವತ್ತನೆಯ ವಯಸ್ಸಿನವರೆಗೂ ನನ್ನ ನಂಬಿಕೆಯಾಗಿತ್ತು. ಸೇಬು ಶ್ರೀಮಂತರು ಮಾತ್ರ ತಿನ್ನುವ ಹಣ್ಣು ಎಂಬುದು ನನ್ನ ಅಂದಿನ ನಂಬಿಕೆ. ಅವಕ್ಕೆಲ್ಲಾ ಅಷ್ಟು ತಲೆ ಕೆಡಸಿಕೊಳ್ಳಲೇ ಇಲ್ಲ. ಅಷ್ಟೇಕೆ ನನ್ನ ಮದುವೆಗೆ ಆರು ತಿಂಗಳು ಮುಂಚೆ ನನ್ನ ಮುಂಜಿ ಶಾಸ್ತ್ರವಾಯ್ತು. ಅದೂ ನನಗೆ ಕೆಲಸ ಸಿಕ್ಕಿದ್ದರಿಂದ. ನನ್ನ ಉಪನಯನ ಬಗ್ಗೆ ತಲೆ ಕೆಡಸಿಕೊಳ್ಳಲಿಲ್ಲವೆಂದ ಮೇಲೆ ಇನ್ನು ವೇದ ಪಾಠ?
ಗೌರತ್ತೆ
ಯಾಕೆ ಇಷ್ಟೆಲ್ಲಾ ಬರೀತಿದೀನಿ ಅಂದ್ರೆ , ಕಳೆದ ಎಂಟು ದಿನಗಳಿಂದ ನನಗೆ ವೈರಲ್ ಫೀವರ್, ನಿನ್ನೆಯಿಂದ ಹೆಂಡತಿ ಹಾಗೂ ಮಗ ಇಬ್ರಿಗೂ ಜ್ವರ ಶುರುವಾಗಿದೆ. ಎಲ್ಲರೂ ಒಟ್ಟಿಗೆ ಡಾಕ್ಟರ್ ಹತ್ತಿರ ಹೋಗಿ ಸೂಜಿ ಹಾಕಿಸಿಕೊಂಡು ಬಂದಿದ್ದಾಯ್ತು.ಮನೇಲಿ ಯಜಮಾನನಿಗೆ,ಮಕ್ಕಳಿಗೆ ಹುಷಾರು ತಪ್ಪಿದರೆ ಯಜಮಾಂತಿ ಎಲ್ಲರನ್ನೂ ಸುದಾರಿಸಿಬಿಡ್ತಾಳೆ. ಕಾಲಕಾಲಕ್ಕೆ ಹೊಟ್ಟೆಗೆ ಚೆನ್ನಾಗಿಯೇ ಆಗುತ್ತೆ.ಆದರೆ ಅದೇ ಯಜಮಾಂತಿಯೇ ಮಲಗಿಬಿಟ್ರೆ ದೇವರೇ ಗತಿ. ದೇವರೂ ಕಾಪಾಡುವುದಕ್ಕಾಗುಲ್ಲ. ಆಗಲೇ ಹೇಳಿದಂತೆ ಮನೇಲಿ ಎಲ್ಲರೂ ಹುಷಾರು ತಪ್ಪಿದ್ದೇವೆ. ಯಾರನ್ನು ಯಾರು ಸುದಾರಿಸಬೇಕು? ನನ್ನ ಮಕ್ಕಳಿಗೆ ಒಬ್ಬನಿಗೆ ೨೪ ವರ್ಷ, ಒಬ್ಬನಿಗೆ ೨೩ ವರ್ಷ. ದೊಡ್ಡೋನು ಬಿ.ಇ ಮಾಡಿ ಮೈಸೂರಲ್ಲಿ ಕೆಲಸದಲ್ಲಿದ್ದಾನೆ. ಚಿಕ್ಕೊನುದ್ದೂ ಬಿ.ಇ.ಆಗಿದೆ, ಎಂ.ಬಿ.ಎ ಮಾಡ್ತಾ ಇದ್ದಾನೆ. ಹುಷಾರು ಸ್ವಲ್ಪ ತಪ್ಪಿದರೆ ಸಾಕು ಇಬ್ಬರೂ ಎಳೆ ಮಕ್ಕಳಂತೆಯೇ; ಇವತ್ತು ಚಿಕ್ಕವನಿಗೆ ಹುಷಾರು ತಪ್ಪಿದ್ದರಿ೦ದಲೇ ನಮ್ಮ ಗೌರತ್ತೆ ನೆನಪಾದದ್ದು.ನನ್ನ ಮಗನಿಗೆ ಸ್ವಲ್ಪ ಜ್ವರ ತಲೆನೋವು ಬಂದರೆ ಸಾಕು ನನ್ನ ತೊಡೆ ಮೇಲೆ ಮಲಗಿ ಬಿಡ್ತಾನೆ. ಅವನಿಗೆ ನಿದ್ರೆ ಹತ್ತುವ ವರಗೂ ತಲೆ ಸವರುತ್ತಾ ಇರ್ಬೇಕು. ನನಗೂ ಹುಷಾರಿಲ್ಲ. ಇಂತಾ ಸ್ಥಿತಿಯಲ್ಲೂ ಮಗನಿಗೆ ಸುದಾರಿಸಲೇ ಬೇಕಲ್ಲಾ!!
ನಿಜವಾಗಲೂ ಇಂತಹ ಸಂದರ್ಭದಲ್ಲಿ ಎಲ್ಲಾ ಯೋಚನೆಗಳೂ ಬರುತ್ತೆ.
ನನ್ನ ಬಾಲ್ಯದ ನೆನಪು ಕಾಡುತ್ತೆ. .. . ...........
ನನ್ನ ಬಾಲ್ಯ.....ಅದೊಂದು ದೊಡ್ಡ ಅನುಭವ. ...ಕಿತ್ತು ತಿನ್ನುವ ಬಡತನ , ಒಂದೇ ಮಾತಲ್ಲಿ ಹೇಳಬೇಕೂ ಅಂದ್ರೆ ತುತ್ತು ಅನ್ನಕ್ಕೆ ಹಾಹಾಕಾರ. ಇಲ್ವೆ ಇಲ್ಲಾ ! ಆ ಕಾಲವೇ ಹಾಗೆ. ಅಂದರೆ ಸುಮಾರು ನಾಲ್ಕು ದಶಕಗಳ ಹಿಂದಿನ ಮಾತು. ಅವತ್ತಿನ ಬಡತನದ ಬಗೆಗೆ ಸಮಯ ಬಂದಾಗ ಬರೀತೀನಿ. ಆದರೆ ಈಗ ಕೇವಲ ನಮ್ಮ ಗೌರತ್ತೆ ಬಗ್ಗೆ ಮಾತ್ರ ನೆನಪು ಮಾಡಿಕೊಳ್ಳಬೇಕು, ಇವತ್ತಿಗೆ ಅಷ್ಟೆ ಸಾಕು.
ಗೌರತ್ತೆ ನಮ್ಮ ಅಪ್ಪನ ಅಕ್ಕ. ಅವಳ ಹತ್ತು ವರ್ಷಕ್ಕೆ ಅರಕಲಗೂಡು ಹತ್ತಿರ ಮಗ್ಗೆಗೆ ಕೊಟ್ಟು ಮದುವೆ ಯಾಗಿತ್ತ೦ತೆ. ಮದುವೆ ಯಾದ ಒ೦ದು ವರ್ಷದಲ್ಲಿ ಗಂಡ ಗೊಟಕ್. ಅವತ್ತಿನಿ೦ದ ಗೌರತ್ತೆ ನಮ್ಮ ಮನೆಯಲ್ಲೇ. ಮದುವೆ ಅ೦ದ್ರೆ ಏನು ಅ೦ತಾ ಗೊತ್ತಾಗುವುದಕ್ಕೆ ಮು೦ಚೆ ವಿಧವೆಯ ಪಟ್ಟ. ಅಬ್ಭಾ ಎಂತಾ ಅನ್ಯಾಯ? ಅವತ್ತಿನಿ೦ದ ಅವಳ ಸ್ವ೦ತ ಜೀವನ ಅ೦ದ್ರೆ ಏನು ಅ೦ತಾ ಅವಳಿಗೆ ಗೊತ್ತೇ ಇಲ್ಲ.ನಮ್ಮಪ್ಪನ ಮದುವೆ ಆಗಿ ನಾವೆಲ್ಲಾ ಹುಟ್ಟಿದಮೇಲೆ ನಮನ್ನು ನಮ್ಮಮ್ಮನಿಗಿ೦ತ ಚೆನ್ನಾಗಿ ಸಲಹಿದ್ದು ನಮ್ಮ ಗೌರತ್ತೆಯೇ. ನಮ್ಮ ಗೌರತ್ತೆ ಸಾಯುವ ವರೆಗೂ ನಮ್ಮ ಮನೆಯ ಮಕ್ಕಳೆಲ್ಲಾ ಬಾರೆ-ಹೋಗೆ ಅಂತಾನೆ ಅ೦ತಿದ್ದು. ಅವರಿಗೆ[ಅವಳಿಗೆ] ಅದೇ ಚೆನ್ನಾ.ನಮ್ಮ ಮನೆಯಲ್ಲಿ ಬಡತನವಿದ್ದರೂ ನಾಲ್ಕಾರು ದನಗಳು ಇದ್ದವು. ಹಾಗಾಗಿ ಕರಾವು ಇತ್ತು. ಅವತ್ತು ಊಟ ಮಾಡಿರಲಿ ಬಿಡಲೀ ಮಲಗುವಾಗ ಎಲ್ಲಾ ಮಕ್ಕಳಿಗೂ ನಮ್ಮ ಗೌರತ್ತೆ ಒಂದು ಬಟ್ಟಲು ಹಾಲು ಕುಡಿಸಿಯೇ ಮಲಗಿಸ್ತಾ ಇದ್ದಳು. ಒ೦ದುವೇಳೆ ನಿದ್ರೆ ಬಂದು ಮಲಗಿದ್ದರೂ ಎಬ್ಬಿಸಿ ಹಾಲು ಕುಡಿಸಿಯೇ ಮಲಗಿಸುತ್ತಿದ್ದಳು. ಸ್ವಲ್ಪಾ ತಲೆನೋವು ಅಂದ್ರೆ ಸಾಕು ತೊಡೆ ಮೇಲೆ ಮಲಗಿಸಿಕೊಂಡು ಹಿತವಾಗಿ ತಲೆ ನೇವರಿಸಿ ನಿದ್ರೆ ಮಾಡಿಸಿದಮೇಲೆ ನಮ್ಮಮ್ಮನನ್ನು ಕರೆದು " ನರಸಮ್ಮಾ, ಮಗುವನ್ನು ಹಾಸಿ ಮಲಗಿಸು, ನಿದ್ರೆ ಮಾಡಿದೆ ಅಂತಾ ಹೇಳಿ, ನಿದಾನವಾಗಿ ಹಾಸಿಗೆಯಲ್ಲಿ ಮಲಗಿಸುತ್ತಿದ್ದರು.[ಹಾಸಿಗೆ ಅ೦ದ್ರೆ ಹೇಗಿತ್ತು ಅನ್ನೋದಕ್ಕೆ ಒ೦ದು ಕಥೆ ಬರೀ ಬೇಕಾಗುತ್ತೆ , ಸಧ್ಯಕ್ಕೆ ಆರುಜನ ಮಕ್ಕಳು, ಅಮ್ಮ, ಅತ್ತೆ, ಅಜ್ಜಿ ಸೇರಿ ಒಂದು ಚಾಪೆಯ ಮೇಲೆ ಒ೦ದು ಹರಕಲು ಜಮಖಾನ.ಅಪ್ಪ ಮಾತ್ರ ಬೇರೆ ಮಲಗ್ತಾ ಇದ್ರು ] ಇನ್ನು ನಮ್ಮಪ್ಪನ ಬಗ್ಗೆ ಅವರಿಗಿದ್ದ ಪ್ರೀತಿ! ಅದನ್ನು ಅಳೆಯಲು ಸಾಧ್ಯವೇ ಇಲ್ಲ. ನಮ್ಮಪ್ಪ ಮಾತ್ರ ಅವರನ್ನು ಸಿಕ್ಕಾಪಟ್ಟೆ ಬೈತಿದ್ರು. ಆದರೆ ನಮ್ಮತ್ತೆ ಮಾತ್ರ ಅವಳ ತಮ್ಮನನ್ನು ಒ೦ದು ದಿನಾ ಬೈಲಿಲ್ಲ.ನಮ್ಮತ್ತೆ ಜೊತೆಗೆ ನಮ್ಮಜ್ಜಿ ,ನಮ್ಮ ದೊಡ್ಡಮ್ಮ ಎಲ್ಲಾ ಸೇರಿ ಐದುಜನ ದೊಡ್ಡೋರು ಮನೇಲಿದ್ರು. ಬಡತನ ಇದ್ದರೂ ಜೀವನಕ್ಕೆ ಸೆಕ್ಯೂರಿಟಿ ಹೇಗಿತ್ತು ಅಂದ್ರೆ ಮನೇಲಿ ಯಾರಿಗಾದರೂ ಹುಷಾರಿಲ್ಲ ಎಂದರೆ ಯೋಚಿಸಲೇ ಬೇಕಿರಲಿಲ್ಲ. ನೋಡೋದಕ್ಕೆ ಸದಾಕಾಲ ನಮ್ಮತ್ತೆ. ಇನ್ನೊಂದು ವಿಷಯ ಹೇಳಲೇ ಬೇಕು-ನಮ್ಮತ್ತೆಗೆ ಅವರು ಸಾಯೋ ವರಗೂ ಹುಶಾರೇ ತಪ್ಪಲಿಲ್ಲ. ಕಾರಣ ಗೊತ್ತೇ? ಅವರ ದೇಹದಬಗ್ಗೆ ಅವರಿಗೆ ಮಮಕಾರವೇ ಇರಲಿಲ್ಲ ವಲ್ಲ. ಅಧ್ಯಾತ್ಮದಲ್ಲಿ ಈ ದೇಹ ನಾನಲ್ಲ ಅಂತಾ ಹೇಳ್ತಾರೆ. ಆದ್ರೆ ಅಮ್ಮತ್ತೆಗೆ ಅಧ್ಯಾತ್ಮ ಅಂದ್ರೆ ಗೊತ್ತಿರಲಿಲ್ಲ. ಅವರಿಗೆ ಗೊತ್ತಿದ್ದ ವಿಷಯ ಅಂದ್ರೆ ಅವರ ತಮ್ಮನ ಮಕ್ಕಳು ಅಲ್ಲಲ್ಲ ಅವರ ಮಕ್ಕಳು ಸುಖವಾಗಿರಲಿ- ಎಂಬುದು ಅಷ್ಟೆ.
ಈಗ....ನಮ್ಮಪ್ಪ ಅಮ್ಮಾ , ನಮ್ಮತ್ತೆ ಕೂಡ ಇಲ್ಲ. ಹೋಗಿ ೮-೧೦ ವರ್ಷ ವಾಯ್ತು. ಜೀವನಕ್ಕೆ ಯೋಚನೆ ಇಲ್ಲ. ಆದರೆ ಗೌರತ್ತೆ ಅಂತಾ ತಾಯಿ ಇಲ್ಲದಿರುವ ಕೊರತೆ ನಿತ್ಯವೂ ಕಾಡುತ್ತೆ.
ಒಲೆಗೊ೦ದು ಒದೆಗೊರಡು ,ಮನೆಗೊ೦ದು ಮುದಿಗೊರಡು ಇರಬೇಕೂ ಅಂತಾ ನಮ್ಮಮ್ಮ ಹೇಳ್ತಾ ಇದ್ದರು.
ಕಂಠಿಮಾವ
-ಹರಿಹರಪುರಶ್ರೀಧರ್
ಹಾಡು- ಶೃಂಗಪುರಾಧೀಶ್ವರೀ ಶಾರದೆ ಗಾಯಕಿ- ಶ್ರೀಮತಿ ಲಲಿತಾರಮೇಶ್
----------------------------------------------------------------------------------
ಎಲ್ಲಾಡಿ ಬಂದೆ ಎನ್ನ ರಂಗಯ್ಯ ನೀ ಎಲ್ಲಾಡಿ ಬಂದೆ ಎನ್ನ ಕೃಷ್ಣಯ್ಯ ಗಾಯಕಿ- ಶ್ರೀಮತಿ ಮಂಗಳಾ
----------------------------------------------------------------------------------
ಶ್ರೀ ದುರ್ಗಾಪರಮೇಶ್ವರೀ ಪೂಜೆ ಭಾಗ-1 [ಒಟ್ಟು 11 ಭಾಗಗಳಲ್ಲಿದೆ]
-----------------------------------------------------------------------------------