ಭಾರತಮಾತೆಯ ಪವಿತ್ರ ಗರ್ಭದಲ್ಲಿ ಜನಿಸಿರುವ ನಮಗೆ ನಮ್ಮ ಋಷಿಮುನಿಗಳ ನೂರಾರು ವರ್ಷದ ತಪಸ್ಸಿನ ಫಲವಾಗಿ ಒಂದು ಜೀವನಕ್ರಮವು ಲಭ್ಯವಾಗಿದೆ. ನಾವೆಷ್ಟು ಪುಣ್ಯಶಾಲಿಗಳೆಂದರೆ ಈ ನಮ್ಮ ಭಾರತ ದೇಶದ ನೆಲದಲ್ಲಿ ಸಹಸ್ರಾರು ವರ್ಷಗಳಿಂದ ಸಾವಿರಾರು ಸಾದುಸಂತರು ಜನ್ಮವೆತ್ತಿ, ಸಾಧನೆಗೈದು ರೂಪಿಸಿರುವ ಜೀವನ ಕ್ರಮವು ಸರಳ ವಾಗಿರುವುದಷ್ಟೇ ಅಲ್ಲ, ವೈಜ್ಞಾನಿಕವಾಗಿಯೂ, ಸಾರ್ವಕಾಲಿಕ ಅನುಸರಣೀಯವೂ ಆಗಿದೆ.ಹಾಗಾದರೆ ನಮ್ಮ ಜೀವನ ಕ್ರಮದ ವಿಶೇಷತೆ ಏನು?
"ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್|
ತೇನ ತ್ಯಕ್ತೇನ ಭುಂಜೀತಾ: ಮಾಗೃಧ: ತಸ್ಯ ಸ್ವಿದ್ ಧನಮ್||
ಈ ಜಗತ್ತೆಲ್ಲಾ ಈಶ್ವರ ಮಯ. ಅವನಿಂದಲೇ ಎಲ್ಲವೂ. ಅವನಿಂದ ಅಂದರೆ ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೇ ಅರ್ಪಿಸಿ ಮಿಕ್ಕಿದ್ದನ್ನು ಪ್ರಸಾದ ರೂಪದಲ್ಲಿ ಅನುಭವಿಸು. ಯಾರ ಧನಕ್ಕೂ ಆಸೆ ಪಡಬೇಡ.
ಇದು ನಮ್ಮ ದೃಷ್ಟಿಕೋನ. ಅಂದರೆ ನನ್ನದು ಎಂಬುದು ಏನೂ ಇಲ್ಲ. ಎಲ್ಲವೂ ಭಗವಂತನ ಕೃಪೆಯಿಂದ ಪ್ರಕೃತಿಯು ನಮಗೆ ಕೊಟ್ಟಿದೆ. ಆದ್ದರಿಂದ ಅವನಿಂದ ಪಡೆದದ್ದನ್ನು ಅವನಿಗೇ ಅರ್ಪಿಸಿ ಮಿಕ್ಕಿದ್ದನ್ನು ಪ್ರಸಾದ ರೂಪದಲ್ಲಿ ಅನುಭವಿಸುವಾಗ ಅದರಲ್ಲಿ ಸಿಗುವ ಆನಂದವು ಅಪಾರ. ಅಷ್ಟೇ ಅಲ್ಲ. ಇನ್ನೂ ಒಂದು ಮಾತಿದೆ...
ಯಾವತ್ ಭ್ರಿಯೇತ ಜಠರಮ್ ತಾವತ್ ಸ್ವತ್ವಮ್ ದೇಹಿನಾಮ್|
ಅಧಿಕಮ್ ಯೋಭಿ ಮನ್ಯೇತ ಸ ಸ್ತೇನೋ ದಂಡ ಮರ್ಹತಿ||
ದೇಹ ಧಾರಣೆಗೆ ಎಷ್ಟು ಅಗತ್ಯವೋ ಅಷ್ಟನ್ನು ತೆಗೆದುಕೋ, ಇದಕ್ಕಿಂತ ಹೆಚ್ಚಿನ ಆಸೆ ಪಡುವವನು ಕಳ್ಳ. ಅವನು ಶಿಕ್ಷಾರ್ಹ.
ಇದು ನಮ್ಮ ಹೆಚ್ಚುಗಾರಿಕೆ. ನಮ್ಮದು ತ್ಯಾಗದ ಸಂಸ್ಕೃತಿ.ತ್ಯಾಗಮಯ ಜೀವನದಲ್ಲೇ ಆನಂದ ಪಡುವ ಸಂಸ್ಕೃತಿ ನಮ್ಮದು. ಪ್ರಕೃತಿಯಲ್ಲಿ ಯಥೇಚ್ಛವಾಗಿ ಸಂಪತ್ತು ಇದೆ , ಎಂದು ಅದನ್ನು ಲೂಟಿಮಾಡುವಂತಿಲ್ಲ. ತನ್ನ ದೇಹಧಾರಣೆಗೆ ಅಗತ್ಯವಿರುವಷ್ಟು ಮಾತ್ರ ಪಡೆದುಕೋ, ಅದಕ್ಕಿಂತ ಹೆಚ್ಚಿನ ಆಸೆಪಟ್ಟರೆ ಅದು ಶಿಕ್ಷಾರ್ಹ ಅಪರಾಧ.ಎಂತಹಾ ಅದ್ಭುತ ಚಿಂತನೆ ನಮ್ಮದು!! ಹೀಗೆ ಸರಳವಾಗಿ ಬದುಕುವಾಗ ಇತರರ ಬಗ್ಗೆ ನಮ್ಮ ಧೋರಣೆ ಏನು? ಅದಕ್ಕಾಗಿಯೇ ನಿತ್ಯವೂ ಸಂಕಲ್ಪ ಮಾಡುವಾಗ ನಾವು ಹೇಳುತ್ತೇವೆ.....
ಸರ್ವೇಪಿ ಸುಖಿನ: ಸಂತು
ಸರ್ವೇ ಸಂತು ನಿರಾಮಯಾ:
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದು:ಖ ಭಾಗ್ಭವೇತ್||
ಎಲ್ಲರೂ /ಎಲ್ಲವೂ ಸುಖವಾಗಿರಲಿ. ಎಲ್ಲರೂ ನೆಮ್ಮದಿಯಿಂದಿರಲಿ. ಎಲ್ಲವೂ ಸಮೃದ್ಧವಾಗಿರಲಿ. ಯಾರೂ ದು:ಖಿತರಾಗುವುದು ಬೇಡ.
ನಾವು ಸಂಕಲ್ಪ ಮಾಡುವಾಗ ಕೇವಲ ನನ್ನ ಕುಟುಂಬ, ನನ್ನ ಬಂಧುಬಳಗ, ನನ್ನ ಜಾತಿ, ನನ್ನ ಮತ, ನನ್ನ ಊರಿಗೆ ಒಳ್ಳೆಯದಾಗಲೀ ಎಂದು ಪ್ರಾರ್ಥಿಸಲಿಲ್ಲ. ಬದಲಿಗೆ " ಸರ್ವೇಪಿ" ಅಂದರೆ
"ಶನ್ನೋ ಅಸ್ತು ದ್ವಿಪದೇ ಶಂ ಚತುಷ್ಪದೇ" ಎಂದೂ ಹೇಳಿದೆವು. ಎರಡು ಕಾಲಿನ ಮನುಷ್ಯರಿಗಷ್ಟೇ ಅಲ್ಲ, ನಾಲ್ಕು ಕಾಲಿನ ಪ್ರಾಣಿ ಸಂಕುಲಕ್ಕೂ, ಪಶು-ಪಕ್ಷಿಗಳಿಗೂ, ಕ್ರಿಮಿಕೀಟ ಗಳಿಗೂ ,ಸಸ್ಯ ಸಂಕುಲಕ್ಕೂ ಒಳ್ಳೆಯದಾಗಲೆಂದು ನಿತ್ಯ ಪ್ರಾರ್ಥಿಸುವ ನಾವು ಅದಕ್ಕೆ ಅನುಗುಣವಾಗಿ ಪ್ರಕೃತಿಯ ದುರುಪಯೋಗ ವಾಗದಂತೆ ಜೀವನ ನಡೆಸುತ್ತಿದ್ದೆವು.
ವಸುಧೈವ ಕುಟುಂಬಕಮ್- ಅಂದರೆ ಇಡೀ ವಿಶ್ವವೇ ಒಂದು ಕುಟುಂಬವೆನ್ನುವ ನಾವು ಉಳಿದ ದೇಶಗಳಿಗೆ ಆದರ್ಶವಾಗಿ ಜೀವನ ನಡೆಸುತ್ತ ಭಾರತವು "ವಿಶ್ವಗುರು" ಎಂಬ ಮಾನ್ಯತೆಗೆ ಕಾರಣರಾಗಿದ್ದೆವು. ವಿಶ್ವ ಮಂಗಲದ ಚಿಂತನೆ ನಡೆಸುವಾಗ ಈ ನಮ್ಮ ಚಿಂತನೆಗಳು ನಮಗೆ ದಾರಿ ದೀಪವಾಗಬೇಕು.
ಆದರೆ ಕಾಲ ಕಳೆದಂತೆ ಪಶ್ಚಿಮದತ್ತ ವಾಲುತ್ತಾ ಬಂದೆವು.ನಮ್ಮ ಚಿಂತನೆಗೆ ವಿರುದ್ಧವಾಗಿ ಬದುಕುತ್ತಾ ಬಂದೆವು.ಭೋಗ ಜೀವನದ ದಾಸರಾದೆವು. " ಆತ್ಮವತ್ ಸರ್ವ ಭೂತೇಶು" ಎಂಬ ಮಾತನ್ನು ಮರೆತು ದುರ್ಬಲರನ್ನು ಶೋಷಣೆ ಮಾಡಿದೆವು. ಬೇಕು-ಬೇಕೆಂಬ ದುರಾಸೆಯಿಂದ ಪ್ರಕೃತಿಯಮೇಲೆ ದೌರ್ಜನ್ಯ ನಡೆಸಿದೆವು.ನಮ್ಮ ಭೋಗದ ಜೀವನಕ್ಕೆ ಸಿಲುಕಿ ಕಾಡುಗಳು ನಾಷವಾಯ್ತು. ನಮ್ಮ ಪೂರ್ವಜರು ಕಟ್ಟಿದ ಕೆರೆಕಟ್ಟೆಗಳನ್ನು ಒಡೆದು ಕಟ್ಟಡ ನಿಮಿಸಿದೆವು. ಪ್ರಕೃತಿ ಮುನಿದು ಮಳೆ ಬೆಳೆ ಇಲ್ಲ ದಂತಾಯ್ತು. ಆಗಲೂ ನಾವು ಎಚ್ಚೆತ್ತುಕೊಳ್ಳದೆ ಭೂಮಿಯನ್ನೇ ಸೀಳಿ ನೀರು ತಂದೆವು.ಹತ್ತಾರು ವರ್ಷಗಳು ಭೂತಾಯಿಯ ಅಂತರ್ಜಲ ಬಸಿದು ಬರಿದಾದಯ್ತು. ಭೂಕಂಪಗಳಿಗೆ, ಪ್ರಕೃತಿ ವಿಕೋಪಕ್ಕೆ ತುತ್ತಾದೆವು. ಆದರೂ ನಾವು ಬದಲಗಲಿಲ್ಲ.
ಅಮೃತದಂತಹ ಹಾಲನ್ನು ಕರೆಯುತ್ತಿದ್ದ ನಾಡತಳಿ ಹಸುಗಳ ಸಂಖ್ಯೆ ನಮ್ಮ ದುರಾಸೆಗೆ ಬಲಿಯಾಯ್ತು. ಗೋಮಾತೆಯೆಂಬ ಶ್ರದ್ಧೆಯಿಂದ ಪೂಜಿಸುತ್ತಿದ್ದ ನಾವೇ ಗೋವುಗಳನ್ನು ಕಟುಕರ ಪಾಲು ಮಾಡಿದೆವು. ಅಧಿಕ ಹಾಲಿನ ಇಳುವರಿಗಾಗಿ ನಾಡಹಸುಗಳನ್ನು ವಿದೇಶಿ ತಳಿಗಳೊಡನೆ ಸಂಕರ ಗೊಳಿಸಿದೆವು.ಪರಿಣಾಮವಾಗಿ ಹಾಲಿನ ಬಣ್ಣದ ದ್ರವವನ್ನೇ ಹಾಲೆಂದು ಕರೆದು ನಮ್ಮ ಮಕ್ಕಳನ್ನು ನಿಜವಾದ ಹಾಲಿನಿಂದ ವಂಚಿಸಿದೆವು.
ರೈತನೊಬ್ಬ ನಾಡಹಸುವಿನಿಂದ ಹಾಲು, ಮೊಸರು , ಬೆಣ್ಣೆ, ತುಪ್ಪ ಸವಿಯುವುದರಜೊತೆಗೆ ಎತ್ತುಗಳಿಂದ ಭೂಮಿ ಉತ್ತು, ಸರಕು ಸಾಗಿಸಲು ಗಾಡಿಗೆ ಕಟ್ಟಿ,ಅವುಗಳ ಸಗಣಿಯನ್ನು ಕೃಷಿಗೆ ಗೊಬ್ಬರವಾಗಿ ಬಳಸಿ, ಅವುಗಳ ಗಂಜಲವನ್ನೇ ಔಷಧಿಯಾಗಿ ಬಳಸುತ್ತಾ ಆನಂದವಾಗಿ ಬದುಕು ಸಾಗಿಸುತ್ತಿದ್ದ. ಅವರಲ್ಲಿದ್ದ ಗೋವಿನ ಸಂಖ್ಯೆಯೇ ನಮ್ಮ ಪೂರ್ವಿಕರ ಸಂಪತ್ತಿಗೆ ಮಾನದಂಡವಾಗಿತ್ತು. ನಮ್ಮ ರೈತರು ಉಪಯೀಗಿಸುತ್ತಿದ್ದ ಗೋವಿನ ಸತ್ವಪೂರ್ಣ ಸಗಣಿ ಗೊಬ್ಬರದ ಪರಿಣಾಮವಾಗಿ ಆಹಾರಧಾನ್ಯಗಳು ಸತ್ವಪೂರ್ಣವಾಗಿರುತ್ತಿತ್ತು.
ಆದರೆ ಗೋಸಂಪತ್ತು ನಶಿಸುತ್ತಾ ಬಂದಂತೆ ರೈತನು ಕೃಷಿಗಾಗಿ ಅನಿವಾರ್ಯವಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಾ ಬಂದ. ಪರಿಣಾಮವಾಗಿ ಮಣ್ಣು ವಿಷಯುಕ್ತ ವಾಯ್ತು. ಬೆಳೆಯ ಕೀಟಗಳನ್ನು ನಾಶಪಡಿಸಲು ಕೀಟನಾಷಕಗಳನ್ನು ಸಿಂಪಡಿಸಲು ಪ್ರಾರಂಭಿಸಿದ.ಅದರ ಪರಿಣಾಮವಾಗಿ ಆಹಾರಧಾನ್ಯಗಳೂ ವಿಷಯುಕ್ತವಾಯ್ತು.
ಈಗ ನಾವೆಲ್ಲಾ ಅದರ ಫಲವನ್ನು ನಿತ್ಯವೂ ಅನುಭವಿಸುತ್ತಿದ್ದೇವೆ. ವಿಷಮುಕ್ತ ಆಹಾರ ಧಾನ್ಯಗಳು ದುರ್ಲಭವಾಗಿದೆ. ಇದೇ ಆಹಾರವನ್ನು ಸೇವಿಸುತ್ತಾ ಹಿಂದೆಂದೂ ಕಾಣದಂತಹ ರೋಗಗಳು ಕಾಡುತ್ತಿವೆ. ಸಕ್ಕರೆ ಖಾಯಿಲೆ, ರಕ್ತದೊತ್ತಡ,ಕ್ಯಾನ್ಸರ್,ಕಿಡ್ನಿ ವೈಫಲ್ಯ ಮುಂತಾದ ರೋಗಗಳು ನಿತ್ಯದ ಮಾತಾಗಿದೆ. ಇವೆಲ್ಲಾ ಒಂದು ಮುಖವಾದರೆ ಮತ್ತೊಂದು ಇನ್ನೂ ಭಯಾನಕ ಮುಖವು ನಿತ್ಯವೂ ನಮ್ಮ ನಿದ್ರೆಗೆಡಿಸುತ್ತಿದೆ.
ಕುಟುಂಬ ಒಂದರಲ್ಲಿ ಕಾಣುತ್ತಿದ್ದ ಪ್ರೀತಿ, ವಾತ್ಸಲ್ಯ,ವಿಶ್ವಾಸ, ಮಮಕಾರ,ಹಿರಿಯರ ಬಗ್ಗೆ ಗೌರವ-ಇಂತಹ ಸದ್ಗುಣಗಳು ಮರೆಯಾಗುತ್ತಿವೆ.ಕೌಟುಂಬಿಕ ಸಾಮರಸ್ಯ ಏರು ಪೇರಾಗುತ್ತಿರುವ ಉಧಾಹರಣೆಗಳನ್ನು ನೋಡುತ್ತಿದ್ದೇವೆ.ನಮ್ಮ ಆಹಾರ ಪದ್ದತಿ,ಉಡುಪು, ನಮ್ಮ ಜೀವನ ಶೈಲಿ ಎಲ್ಲವೂ ಬದಲಾಗುತ್ತಿದೆ. ಪರಿಣಾಮವಾಗಿ ಸಂಸಾರದ ನೆಮ್ಮದಿ ಹಾಳಾಗುತ್ತಿದೆ. ಲಜ್ಜಾರಹಿತ ಜೀವನಕ್ಕೆ ಒಗ್ಗಿಕೊಳ್ಳುವ ಪರಿಸ್ಥಿತಿ ಎದಿರಾಗುತ್ತಿದೆ. ಹಡೆದ ಮಕ್ಕಳು ತಂದೆ ತಾಯಿಯರ ಲಾಲನೆ ಪೋಷಣೆ ಕಾಣದೆ ಅನಾಥರಾಗಿ ದಾದಿಯರೊಡನೆ ಬೆಳೆಯುತ್ತಿರುವ ಉಧಾಹರಣೆಗಳು ಹೆಚ್ಚುತ್ತಿವೆ, ಅದೇ ಸಮಯದಲ್ಲಿ ನೋಡುವವರಿಲ್ಲದೆ ವೃದ್ಧ ತಂದೆತಾಯಿಯರು ವೃದ್ಧಾಶ್ರಮಗಳನ್ನು ಸೇರುವ ಪರಿಸ್ಥಿತಿ ಬಂದೊದಗಿದೆ.
ಕೇವಲ ಮೂರು ನಾಲ್ಕು ದಶಕಗಳ ಹಿಂದೆ ನಮ್ಮ ಕುಟುಂಬಗಳು ಹೇಗಿದ್ದವು! ಎಂಬುದನ್ನು ಒಮ್ಮೆ ನೆನಪು ಮಾಡಿಕೊಂಡರೆ ನಮ್ಮ ಹೃದಯ ಒಡೆದು ಹೋಗದಿರದು. ಅಪ್ಪ-ಅಮ್ಮನ ಜೊತೆಗೆ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ದಪ್ಪ-ದೊಡ್ದಮ್ಮ ,ಅಜ್ಜ-ಅಜ್ಜಿ, ಮಕ್ಕಳು-ಮೊಮ್ಮಕ್ಕಳು-ಮರಿಮಕ್ಕಳು. ಇಂತಹಾ ಅವಿಭಕ್ತ ಕುಟುಂಬಗಳಲ್ಲಿ ಇಪ್ಪತ್ತು-ಮೂವತ್ತು ಜನರು ಒಂದೇ ಮನೆಯಲ್ಲಿ ಇರುತ್ತಿದ್ದರು. ಕುಟುಂಬಕ್ಕೆ ಭದ್ರತೆ ಇತ್ತು. ಹಿರಿಯರಾಗಿದ್ದವರು ಮನೆಯ ಯಾವುದೇ ಮಗುವಿನ ಲಾಲನೆ ಪೋಷಣೆ ಮಾಡುತ್ತಿದ್ದರು.ಎಲ್ಲರೂ ಮನೆಗೆಲಸವನ್ನು ಹಂಚಿಕೊಂಡು ಮಾಡುತ್ತಿದ್ದುದರಿಂದ ಎಲ್ಲವೂ ಸುಗಮವಾಗಿ ಸಂಸಾರ ನಡೆಯುತ್ತಿತ್ತು. ಮನೆಯಲ್ಲಿ ಬರುತ್ತಿದ್ದ ಓರೆ ಕೋರೆ ಮಾತುಗಳನ್ನು ಕೇಳಿದ ಮನೆಯ ಯಜಮಾನ ತಪ್ಪಿತಸ್ತರಿಗೆ ತಿದ್ದಿ ಬುದ್ಧಿ ಹೇಳುತ್ತಿದ್ದ. ಹಬ್ಬ-ಹರಿದಿನಗಳೆಂದರೆ ಅಂದು ಮನೆಯು ಸ್ವರ್ಗಸದೃಶವಾಗಿರುತ್ತಿತ್ತು. ಬದುಕಿನಲ್ಲಿ ಸದಾ ಉತ್ಸಾಹವಿರುತ್ತಿತ್ತು. ಒಂದು ಮನೆಯಲ್ಲಿ ಹತ್ತಾರು ದನಕರುಗಳಿರುತ್ತಿದ್ದು, ಹಾಲು ಮೊಸರು, ಬೆಣ್ಣೆ-ತುಪ್ಪ ಸಂಮೃದ್ಧ ವಾಗಿರುತ್ತಿತ್ತು. ಬಡತನ ವಿದ್ದರೂ ನೆಮ್ಮದಿಗೆ ಕೊರತೆ ಇರಲಿಲ್ಲ.
ಈಗ ಎಲ್ಲವೂ ಬದಲಾಗಿದೆ. ಆದರ್ಶ ಕುಟುಂಬದ ಹೆಸರಿನಲ್ಲಿ ಪತಿ-ಪತ್ನಿ ಮತ್ತು ಒಂದು ಮಗುವಿರುವ ಮನೆಗಳು ಹೆಚ್ಚುತ್ತಿವೆ. ಆಹಾರ-ವಿಹಾರಕ್ಕೆ ತೊಂದರೆ ಇಲ್ಲದಿದ್ದರೂ ಬದುಕಿಗೆ ಭದ್ರತೆ ಇಲ್ಲವಾಗಿದೆ.ತಂದೆ ತಾಯಿ ಇಬ್ಬರೂ ನೌಕರಿಗೆ ಹೋದರಂತೂ ಮಗು ಅನಾಥ ವಾದಂತೆಯೇ. ಕೈತುಂಬ ಹಣವಿದ್ದರೂ ಬಹುಪಾಲು ಜನರಿಗೆ ನೆಮ್ಮದಿ ಇಲ್ಲ, ಆರೋಗ್ಯವಿಲ್ಲ. ಹೌದು, ಇವೆಲ್ಲಾ ನಾವೇ ಸ್ವತ: ಮಡಿಕೊಮ್ಡಿರುವ ತಪ್ಪು. ತಪ್ಪುಗಳ ಸರಮಾಲೆಯಲ್ಲಿ ಸಿಕ್ಕಿ ಹಾಕಿಕೊಮ್ದು ಬಿಟ್ಟಿದ್ದೇವೆ.
ಎಲ್ಲಕ್ಕೂ ಒಂದೇ ಪರಿಹಾರ: ಮತ್ತೊಮ್ಮೆ ನಮ್ಮ ಪೂರ್ವಜರ ಜೀವನಕ್ರಮವನ್ನು ನೆನಪು ಮಾಡಿಕೊಳ್ಳುವುದು ಮತ್ತು ಅದರಂತೆ ಬದುಕುವುದು. ನಮ್ಮ ಗ್ರಾಮ ಜೀವನವನ್ನು ಪುನರುತ್ಥಾನಗೊಳಿಸುವುದು. ನಮ್ಮ ನೆಲದ ವಿಷವನ್ನು ತೊಳೆಯಬೇಕಿದೆ. ಹೇಗೆ ತೊಳೆಯಬೇಕು? ನಾಲ್ಕೈದು ದಶಕಗಳಿಂದ ನಾವು ಪ್ರಕೃತಿಗೆ ಮಾಡಿರುವ ಅತ್ಯಾಚಾರದಿಂದ ಪ್ರಕೃತಿಯು ಮತ್ತೊಮ್ಮೆ ಹಸನ್ಮುಖಿಯಾಗಬೇಕಾದರೆ ದೀರ್ಘ ಕಾಲದ ಚಿಕಿತ್ಸೆಯೇ ಅನಿವಾರ್ಯ. ಕೆಲವು ವರ್ಷಗಳಾದರೂ ನಾವು ಸರಳ ಜೀವನ ಕ್ರಮವನ್ನು ಅನುಸರಿಸಲೇ ಬೇಕು. ಪ್ರಕೃತಿಯನ್ನು ಅದರ ಪಾದಿಗೆ ಬಿಟ್ತು ಬಿಡಬೇಕು.ಆಗ ನಿಧಾನವಾಗಿಯಾದರೂ ಪರಿಹಾರ ಸಿಕ್ಕೀತು. ನಮ್ಮ ಸಾಂಸ್ಕೃತಿಕ ಬದುಕನ್ನು ನೆನಪು ಮಾಡಿಕೊಂಡು ಅದರಂತೆ ಬದುಕಲು ಸಂಕಲ್ಪ ತೊಡಬೇಕು. ಇಷ್ಟಾದರೂ ನಮ್ಮ ಸಂಸ್ಕೃತಿಯನ್ನು ಮೆಚ್ಚಿ ನಮ್ಮ ಕಡೆ ಮುಖಮಾಡಿರುವ ವಿದೇಶೀಯರಿಗೆ ನಮ್ಮ ಮೆಲೆ ಭರವಸೆ ಹೆಚ್ಚಬೇಕು, ಆಗ ಮಾತ್ರ ನಾವು ವಿಶ್ವ ಮಂಗಲದ ಕನಸು ಕಾಣಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ