ಸೋಮವಾರ, ಸೆಪ್ಟೆಂಬರ್ 5, 2011

ಹಬ್ಬದ ಸಡಗರ


ಹರಿಹರಪುರದಲ್ಲಿ ದುರ್ಗಾ ಪರಮೇಶ್ವರಿ ಸಿಡಿ ಜಾತ್ರೆ, ಗೌರಿ ಗಣೇಶನ ಹಬ್ಬ ಬಂದರೆ ಊರಿನ ಎಲ್ಲಾ ಗಂಡುಮಕ್ಕಳು, ಹಾಗೂ ಮದುವೆಯಾಗಿ ಹೋದ ಹೆಣ್ಣು ಮಕ್ಕಳು ಊರಿಗೆ ಬಂದೇ ಬರುತ್ತಾರೆ.  ನಾಳೆ ಜಾತ್ರೆ  ಆಥವಾ ಹಬ್ಬ ಎಂದರೆ ಹಿಂದಿನ ದಿನ ರಾತ್ರಿ ಎಲ್ಲರೂ ಅವರವರ ಮನೆಗೆ ಬಂದಿರುತ್ತಾರೆ.  ಮರು ದಿನ ಬೆಳಿಗ್ಗೆ ಎಲ್ಲರಿಗೂ ಯಾರ‍್ಯಾರು ಬಂದಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ.  ಮೊದಲು ದತ್ತ, ಪ್ರಸಾದಿ ಹಿರಣ್ಣ ಬೆಳಿಗ್ಗೆ ೭ ಗಂಟೆಗೆ ನಮ್ಮ ಮನೆಗೆ ಹಾಜರ್.  ನಮ್ಮ ಮನೆಯಲ್ಲೆಲ್ಲಾ ಇನ್ನೂ ಮಲಗಿದ್ದರೆ, ಹಾಸಿಗೆ ಹತ್ತಿರನೇ ಕುಳಿತು ಯಾವಾಗ ಬಂದ್ಯೋ ಶ್ರೀಕಂಠಮೂರ್ತಿ, ಎಷ್ಟು ಹೊತ್ತಿಗೆ ಬಂದೆ ಎಂದು ಮಾತನಾಡುವಿಕೆ. ಎಷ್ಟೊಂದು ಆತ್ಮೀಯತೆ, ಎಷ್ಟೊಂದು ಸಲಿಗೆ,  ಇಲ್ಲಿ ಅಧಿಕಾರ ಹಾಗೂ ಅಂತಸ್ತು ಗೌಣವಾಗುತ್ತದೆ.  ಶಾಮಣ್ಣ, ರಾಮಪ್ರಸಾದ್ ನೀವು ಎಷ್ಟು ಹೊತ್ತಿಗೆ ಬಂದ್ರಿ ಎಂದು ಕೇಳುವುದು.  ಒಂದು ಹತ್ತು ನಿಮಿಷ ಮಾತನಾಡಿ, ಆಮೇಲೆ ಬರುತ್ತೇನೆ ಇನ್ನು ಯಾರ‍್ಯಾರು ಬಂದಿದ್ದಾರೆ ನೋಡುತ್ತೇನೆ ಎಂದು ಹೊರಟಾಗ ನಮ್ಮ ಅತ್ತೆ ಅಡಿಗೆಮನೆಯಿಂದ,  ದತ್ತ ಸ್ವಲ್ಪ ಇರು ಕಾಫಿ ಕುಡಿದುಕೊಂಡು ಹೋಗುವಿರಂತೆ ಎಂದು ಹೇಳುವುದು ಇವೆಲ್ಲಾ ಸಾಮಾನ್ಯವಾಗಿ ನಡೆಯುವ ದೃಶ್ಯ.  ನಮ್ಮ ಅತ್ತೆ ಕಾಫಿ ತುಂಬಾ ರುಚಿಯಾಗಿ ಮಾಡುತ್ತಾರೆ.  ಜಾತ್ರೆಯ ಸಮಯದಲ್ಲಿ  ಊರಿನಲ್ಲೆಲ್ಲಾ ಸಂಭ್ರಮ.  ಎಲ್ಲರ ಮನೆಯಲ್ಲೂ ಜನ.  ನಮ್ಮ ಮನೆಯಲ್ಲಿಯೂ ಸಹ  ಎಲ್ಲರೂ ಸ್ನಾನ ಕಾಫಿ ಮುಗಿಸಿ ಇವರೆಲ್ಲರೂ ಒಂದು ಸುತ್ತು ಎಲ್ಲರ ಮನೆಗೂ ಹೊರಡುತ್ತಾರೆ.  ಯಾರ ಮನೆಯಲ್ಲಿ ತಿಂಡಿ ಆಗಿರುತ್ತೋ  ಅಲ್ಲೇ ತಿಂಡಿ.  ಹರಿಹರಪುರದ ಸ್ಪೆಷಲ್ ತಿಂಡಿ ಅಂದರೆ  ರೊಟ್ಟಿ, ಚಟ್ನಿ, ತುಪ್ಪ, ಮೊಸರು ಅಥವಾ ಇಡ್ಲಿ, ಚಟ್ನಿ, ತುಪ್ಪ ಮೊಸರು.  ತುಂಬಾ ಚೆನ್ನಾಗಿರುತ್ತದೆ.

 ಈ ತರಹದ ಸಂಬಂಧಗಳು ಈಗಲೂ ಹರಿಹರಪುರದಲ್ಲಿ ಉಳಿದಿದೆ.


                            ವಿಜಯ ಶ್ರೀಕಂಠಮೂರ್ತಿ





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ