

ಹಾಸನದ ಶ್ರೀ ಶಂಕರಮಠಕ್ಕೆ ಆಗಮಿಸಿದ್ದ ಹೊಳೇನರಸೀಪುರ ಅಧ್ಯಾತ್ಮಪ್ರಕಾಶ ಕಾರ್ಯಾಲಯದ ಸ್ವಾಮೀಜಿಯವರಾದ ಪೂಜ್ಯಶ್ರೀ ಅದ್ವಯಾನಂದೇಂದ್ರಸರಸ್ವತೀ ಸ್ವಾಮೀಜಿಯವರು ನಮ್ಮ ಮನೆಯಲ್ಲಿ ಸತ್ಸಂಗವನ್ನು ನಡೆಸಿ ಕೊಟ್ಟರು ಸತ್ಸಂಗದಲ್ಲಿ ನಾನು ರಚಿಸಿದ್ದ ಹಾಡುಗಳನ್ನು ಶ್ರೀಮತೀ ಲಲಿತಾ ರಮೇಶ್ ಅವರು ಸುಶ್ರಾವ್ಯವಾಗಿ ಹಾಡಿದರು. ಸ್ವಾಮೀಜಿಯವರು ಹಾಡನ್ನು ತದೇಕಚಿತ್ತದಿಂದ ಆಲಿಸಿದರಲ್ಲದೆ ಹಾಡಿನಲ್ಲಿರುವ ಆಧ್ಯಾತ್ಮಿಕ ಸಂದೇಶದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.ಬೆಳಿಗ್ಗೆ ಸುಮಾರು ೧೦ಗಂಟೆಯಿಂದ ಒಂದು ಗಂಟೆಗೂ ಮೀರಿ ನಡೆದ ಸತ್ಸಂಗವು ಸಾರ್ಥಕವಾಯ್ತೆಂಬ ಭಾವನೆ ಎಲ್ಲರ ಮನದಲ್ಲಿ ಮೂಡಿತ್ತು.
ಭ್ರಮೆ
ಇದು ನನ್ನ ಮನೆಯು
ಮನೆಯಲ್ಲಿ ಸಿರಿಯು
ಇದಕೆಲ್ಲ ನಾನೆ ಒಡೆಯ|
ಅದು ನಿನ್ನ ಭ್ರಮೆಯು
ಸಿರಿಗಿಲ್ಲ ನೆಲೆಯು
ಜಗಕೆಲ್ಲ ಆತ ಒಡೆಯ||
ನೀ ನಿರುವ ಮನೆಯ
ತಳಹದಿಯಲಿರುವ
ಕಲ್ಲನ್ನು ಕೇಳಿ ನೋಡು|
ಮನೆ ತುಂಬ ಇರುವ
ಮರಮುಟ್ಟುಗಳ
ಬಾಯಲ್ಲಿ ಕಥೆಯ ಕೇಳು||
ಜಗಕೆಲ್ಲ ಬೆಳಕ
ಕೊಡುವಂತ ರವಿಗೆ
ನಾನೆಂಬ ಗರ್ವವಿಲ್ಲ|
ಹಗಲೆಲ್ಲ ದುಡಿದು
ಕತ್ತಲೆಯ ರಾತ್ರಿಯಲಿ
ರವಿ ಮಾಯವಾದನಲ್ಲ||
ನಾನೆಂಬ ಭ್ರಮೆಯ
ತೊರೆದಾಗ ಗೆಳೆಯ
ನಿಜರೂಪ ಕಾಣಬಲ್ಲೆ|
ಹತ್ತಾರು ಜನರ
ಸ್ವತ್ತಾದ ನೀನು
ಮಾನವತೆಯ ಬೆಳೆಸ ಬಲ್ಲೆ||