ಶುಕ್ರವಾರ, ಜುಲೈ 22, 2011

ಧಾವಂತದ ಬದುಕಿನಲ್ಲಿ ಬಡವಾದ ಸಮಾಜ

ಸರ್ವೇ ಭವಂತು ಸುಖಿನ: ಸರ್ವೇ ಸಂತು ನಿರಾಮಯಾ:

ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದು: ಭಾಗ್ಭವೇತ್||

ಇದು ನಮ್ಮ ಪೂರ್ವಜರು ನಮಗೆ ನೀಡಿರುವ ನಿತ್ಯ ಸಂಕಲ್ಪ.ಇದರ ಅರ್ಥವನ್ನು ಸ್ವಲ್ಪ ನೋಡೋಣ. "ಎಲ್ಲರೂ ಸುಖವಾಗಿರಲಿ. ಎಲ್ಲರಿಗೂ ಒಳ್ಳೆಯ ಆರೋಗ್ಯ ಸಿಗಲಿ.ಯಾರೂ ದು: ಪಡುವುದು ಬೇಡ"

ಎಲ್ಲರೂ ಅಂದರೆ ಯಾರು? ನಮ್ಮ ಮನೆಯ ಎಲ್ಲಾ ಜನರೇ? ನಮ್ಮ ಜಾತಿಯ ಎಲ್ಲಾ ಜನರೇ? ನಮ್ಮ ಊರಿನ ಎಲ್ಲಾ ಜನರೇ? ನಮ್ಮ ಧರ್ಮದ ಎಲ್ಲಾ ಜನರೇ? ಅಥವಾ ಎಲ್ಲಾ ಮನುಕುಲವೇ?.....ನಮ್ಮ ಪೂರ್ವಜರ ಕಲ್ಪನೆ ಕೇವಲ ಮನುಷ್ಯ ರಿಗೂ ಸೀಮಿತಗೊಳ್ಳಲಿಲ್ಲ. ಭೂಮಂಡಲದಲ್ಲಿರುವ ಎಲ್ಲಾ ಜೀವ ಜಂತುಗಳು, ಗಿಡಮರ ಬಳ್ಳಿಗಳೂ ಕೂಡ ಸುಖವಾಗಿರಬೇಕೆಂಬ ಮಹತ್ತರ ಸಂಕಲ್ಪ. ಅಂದರೆ ಅಷ್ಟರ ಮಟ್ಟಿಗೆ ಉದಾರ ನೀತಿ. ಕೇವಲ ಮನುಷ್ಯ ಮಾತ್ರರೇ ಅಲ್ಲದೆ ಸಮಸ್ತ ಜೀವ ಜಂತುಗಳೂ ಸುಖವಾಗಿರಲೆನ್ನುವ ನಮ್ಮ ಪೂರ್ವಜರು ನಮಗೆ ಎಂತಹಾ ಉದಾರವಾದ ಬದುಕುವ ಶೈಲಿ ಕಲಿಸಿಕೊಟ್ಟಿದ್ದಾರಲ್ಲವೇ?

ಅದ್ವೇಷ್ಟಾ ಸರ್ವ ಭೂತಾನಾಮ್ ಮೈತ್ರ: ಕರುಣ ಏವ ....ಎಂದು ಗೀತೆಯು ಸಾರುತ್ತದೆ. ಅಂದರೆ ಏನು? ಯಾರಮೇಲೂ ದ್ವೇಷ ಬೇಡ, ಎಲ್ಲರಲ್ಲೂ ಮೈತ್ರಿ, ಕರುಣೆ ಯಂತಹ ಸದ್ಗುಣಗಳನ್ನು ಬೆಳೆಸಿಕೊಳ್ಳೋಣ.....

ಸಮ: ಶತ್ರೌ ಮಿತ್ರೇ ತಥಾ ಮಾನಾಪಮಾನಯೋ:......

ಶತ್ರು ಮಿತ್ರರನ್ನು ಹಾಗೂ ಮಾನ ಅಪಮಾನಗಳನ್ನು ಸಮಭಾವದಿಂದ ಕಾಣೋಣ.

.........ಇಂತಹ ಸಾಕಷ್ಟು ಪ್ರೇರಣಾ ದಾಯಕ ವಿಚಾರಗಳನ್ನು ವೇದ ಉಪನಿಷತ್ತುಗಳಲ್ಲಿ, ಭಗವದ್ಗೀತೆಯಲ್ಲಿ ನಾವು ಕಾಣ ಬಹುದಾಗಿದೆ......

ಇವೆಲ್ಲಾ ನಮ್ಮ ಧಾರ್ಮಿಕ ಜೀವನಕ್ಕೆ ಪ್ರೇರಣಾದಾಯಕ ಅಂಶಗಳು. ಪರ ಮತವನ್ನು ದ್ವೇಶಿಸು, ಹಿಂದು ವಿಚಾರವನ್ನು ಒಪ್ಪದ ಅಥವಾ ನಮ್ಮ ಧಾರ್ಮಿಕ ಗ್ರಂಥಗಳನ್ನು ಒಪ್ಪದವರು ನರಕಕ್ಕೆ ಹೋಗಬೇಕಾಗುತ್ತದೆಂದು ನಮ್ಮ ಯಾವುದೇ ಧಾರ್ಮಿಕ ಗ್ರಂಥಗಳಲ್ಲಿ ಎಲ್ಲೂ ಹೇಳಿಲ್ಲ. ಅಥವಾ ಹಿಂದು ಧಾರ್ಮಿಕ ಗ್ರಂಥಗಳನ್ನು ಓದುವುದರಿಂದ ಮಾತ್ರ ನಿಮಗೆ ಸ್ವರ್ಗ ಸಿಗುತ್ತದೆಂದೂ ಕೂಡ ಎಲ್ಲೂ ಹೇಳಿಲ್ಲ.ಇಷ್ಟು ಭವ್ಯವಾದ ನಮ್ಮ ನೆಲದ ವಿಚಾರಗಳನ್ನು ನಾವು ಪ್ರಚಾರ ಮಾಡಲೇ ಇಲ್ಲವಲ್ಲ! ಇರಲಿ... ನಮ್ಮ ಮಕ್ಕಳಿಗೂ ಕಲಿಸಲಿಲ್ಲವಲ್ಲಾ!

ಈಗಿನ ನಮ್ಮ ಸಾಮಾಜಿಕ ಪರಿಸ್ಥಿತಿಯನ್ನು ನೋಡಿ.ವೃದ್ಧಾಶ್ರಮ ಸೇರುತ್ತಿರುವ ಅಪ್ಪ-ಅಮ್ಮ. ಹೆತ್ತ ಅಪ್ಪ-ಅಮ್ಮನ ಪ್ರೀತಿ ಕಾಣದೆ ಆಯಾಗಳ ಪೋಷಣೆಯಲ್ಲಿ ಯಾಂತ್ರಿಕವಾಗಿ ಬೆಳೆಯುವ ಮಕ್ಕಳು. ಇಂತಹ ಮಕ್ಕಳು ಬೆಳೆದು ದೊಡ್ದವರಾದಂತೆ ಅವರ ಕಣ್ಮುಂದಿನ ಆದರ್ಶವಾದರೂ ಏನು? ಕೈತುಂಬಾ ಸಂಬಳ ಸಿಗುವ ನೌಕರಿ.ಐಶಾರಾಮ ಜೀವನ. ಪ್ರೀತಿ ಪ್ರೇಮ, ಕಾಮದ ದೃಶ್ಯಗಳೇ ತುಂಬಿತುಳುಕುವ ದೂರದರ್ಶನ ದಾರಾವಾಹಿಗಳು! ಅಥವಾ ಕ್ರಿಕೆಟ್ ಆಟಗಳು!! ಕ್ರೈಮ್ ಡೈರಿಯೇ ಮೊದಲಾದ ಅಪರಾಧವನ್ನೇ ವೈಭವೀ ಕರಿಸುವ ದೃಶ್ಯಗಳು. ಇಷ್ಟಕ್ಕಿಂತ ಹೆಚ್ಚು ಚಟುವಟಿಕೆಗಳಿಗೆ ಬಿಡುವೆಲ್ಲಿಂದ ಬರಬೇಕು? ಮನಸ್ಸಿಗೆ ಮುದವನ್ನು ನೀಡಬಹುದಾದ ಪ್ರವಚನಗಳು, ಸಂಗೀತ-ನೃತ್ಯಗಳು, ಕಥೆ ಕಾದಂಬರಿಯನ್ನು ಓದುವ ಹವ್ಯಾಸಗಳು.... ಇವಕ್ಕೆಲ್ಲಾ ಸಮಯ ಎಲ್ಲಿಂದ ಬರಬೇಕು? ಹೀಗೆ ಸಮಾಜವು ದಿಕ್ಕುತಪ್ಪಿ ಧಾವಿಸುತ್ತಿರುವಾಗ ಸಹಜವಾಗಿ ಅಪರಾಧಗಳು, ಹೊಡೆದಾಟ ಬಡಿದಾಟಗಳು, ಕೋಮು ಗಲಭೆಗಳು, ಅಗ್ನಿ ಸ್ಪರ್ಷಗಳು, ಎಲ್ಲವೂ ಕಿಚ್ಚಿನಂತೆ ಹರಡಿ ಬಿಡುತ್ತವೆ. ಇದೆಲ್ಲಾ ಅತಿರೇಕವಾದಾಗ ಅದನ್ನು ನಿರ್ಬಂಧುಸಲು ಸರ್ಕಾರವು ಹೆಣಗುವ ಪರಿಸ್ಥಿತಿ!!

ಹೀಗೆ ಸಾಮಾಜಿಕವಾಗಿ ನೆಮ್ಮದಿ ಹಾಳಾಗುವುದನ್ನು ನಾವು ನೋಡುತ್ತಿರುವಂತೆಯೇ ವೈಯಕ್ತಿಕವಾಗಿಯೂ ಶಾಂತಿ ಇಲ್ಲದ ಜೀವನವನ್ನು ನೋಡುತ್ತಿದ್ದೇವೆ. ಮಾನಸಿಕವಾಗಿ ಶಾರೀರಿಕವಾಗಿಯೂ ಕೂಡ ಸ್ವಾಸ್ಥ್ಯವನ್ನು ಹಾಳುಮಾಡಿಕೊಂಡಿರುವ ಹಲವಾರು ಉಧಾಹರಣೆಗಳನ್ನು ಇಂದಿನ ಪೀಳಿಗೆಯಲ್ಲಿ ಕಾಣಬಹುದಾಗಿದೆ. ಪರಿಸ್ಥಿತಿಗೆ ಕಾರಣ ನಮಗೆ ಅರಿವಾಗಿದೆಯೇ?

ನಮಗೆ ಸ್ವಾತಂತ್ರ್ಯ ಬಂದು ಆರು ದಶಕಗಳಲ್ಲಿ ನಾವು ನಮ್ಮ ಮಣ್ಣಿನ ಸಂಸ್ಕೃತಿ ಪರಂಪರೆಯನ್ನು ಮರೆತದ್ದೇ ಇಂದಿನ ವಿಶಮ ಸ್ಥಿತಿಗೆ ಕಾರಣ ಎನಿಸುವುದಿಲ್ಲವೇ? ನಾವು ನಿಜವಾಗಿ ಒಬ್ಬ ಮುಗ್ಧ ತಂದೆ ತಾಯಿಯ ಸ್ಥಾನದಲ್ಲಿ ನಿಂತು ಚಿಂತನೆ ಮಾಡಿದಾಗ ನಮ್ಮ ಮಕ್ಕಳ ಭವಿಷ್ಯವು ಮುಸುಕಾಗಿ ನಮಗೆ ಕಾಣುವುದಿಲ್ಲವೇ? ಈ ನೆಲದ ಉದಾರವಾದ ಸಂಸ್ಕೃತಿ ಪರಂಪರೆಯನ್ನು ಬದಿಗಿಟ್ಟು ಈಗಾಗಲೇ ಕೆಟ್ಟಿರುವುದು ಸಾಲದೇ? ಭಗವದ್ಗೀತೆಯ ಸಾರವನ್ನು ತಿಳಿಯದೆ ಅದನ್ನು ವಿರೋಧಿಸುವವರಿಗೆ ಏನೆನ್ನೋಣ? ಇಡೀ ಮನುಕುಲದ ಒಳಿತಿಗಾಗಿ ನಮ್ಮ ಋಷಿಮುನಿಗಳ ತಪ್ಪಸ್ಸಿನ ಫಲವಾಗಿ ಮೂಡಿಬಂದ ಹಿಂದು ಧರ್ಮವನ್ನು ಅನುಸರಿಸುವ ಹಿಂದು ಮತೀಯರಲ್ಲಿಯೇ ಕೆಲವರನ್ನು ಅಲ್ಲಿಂದ ಬೇರ್ಪಡಿಸಿ ಅನ್ಯಮತೀಯ ಗುಂಪುಗಳೊಡನೆ ಸೇರಿಸುವ ಪ್ರಯತ್ನಕ್ಕೆ ಏನೆನ್ನೋಣ?

1 ಕಾಮೆಂಟ್‌:

  1. ಅನಾಮಧೇಯಜುಲೈ 22, 2011

    ಒಳ್ಳೆಯ ಜೀವನದ ಸುಲಭ ಸೂತ್ರಗಳು ವೇದಗಳ ಮೂಲಕ ಹೇಳಲ್ಪಟ್ಟಿವೆ, ಆದರೆ ಜನ ವಿವೇಚಿಸಿ ನಡೆದರೆ ಭಗವದ್ಗೀತಾ ಅಭಿಯಾನಕ್ಕೆ ಧರ್ಮಪ್ರಚಾರವೆಂಬ ಲೇಪ ಬರುತ್ತಿರಲಿಲ್ಲ, ಜನರಿಗೇ ಒಳ್ಳೆಯದು ಬೇಡವಾಗಿದೆ, ಹಾಗಾಗಿ ಧಾವಂತ! ದುಡಿಮೆಯ ಅವಶ್ಯಕತೆಯಿರದಿರುವ ಅನೇಕ ಹೆಂಗಸರೂ ನೌಕರಿ ಮಾಡುತ್ತಾರೆ. ಮನೆಯಲ್ಲಿ ಅಡುಗೆ-ಆಚೆರಣೆ, ಮಕ್ಕಳ ಬೆಳವಣಿಗೆ ಕೆಲಸದವಳನ್ನು ಅವಲಂಬಿಸಿರುತ್ತದೆ. ಹಸಿಬಿಸಿ ಇಡ್ಲಿ ತಿಂದುಕೊಂಡು ಅದನ್ನೇ ಒಂದಷ್ಟು ಡಬ್ಬಗಳಲ್ಲಿ ತುಂಬಿಸಿ ಓಡುವ ’ಚಂದ ’ ನೋಡಿದರೆ ನಿಜಕ್ಕೂ ಇವೆಲ್ಲಾ ಬೇಕಿತ್ತೇ ಅನಿಸುತ್ತದೆ? ಆದರೂ ಪ್ರತಿಯೊಬ್ಬರಲ್ಲಿರುವ ಅಹಂ ಅವರದೇ ಆದ ರೀತಿಯಲ್ಲಿ ಕೆಲಸಮಾಡುತ್ತದೆ. ಮುಂದಿನ ಪೀಳಿಗೆಗೆ ನಾವು ಕೊಡುವ ಬಳುವಳಿ ಮಧುಮೇಹ, ಹೃದಯತೊಂದರೆ, ಅಧಿಕರಕ್ತದೊತ್ತಡ ಇತ್ಯಾದಿ ಇಂಥವೇ ಹೊರತು ಪೂರ್ವಜರು ನಮಗೆ ಅನುಗ್ರಹಿಸಿದ ಜೀವನ ಮೌಲ್ಯಗಳನ್ನಲ್ಲ ಎಂಬುದನ್ನು ನೆನೆದಾಗ ಖೇದವಾಗುತ್ತದೆ.
    -V.R.Bhat

    ಪ್ರತ್ಯುತ್ತರಅಳಿಸಿ