ಬುಧವಾರ, ಏಪ್ರಿಲ್ 3, 2013

ಸಿಡಿ ಜಾತ್ರೆಇದೇ ಏಪ್ರಿಲ್ ೬ ಶನಿವಾರ ನಡೆಯಲಿರುವ
ಹರಿಹರಪುರದ ಸಿಡಿ ಜಾತ್ರೆಯ ಬಗ್ಗೆ ವಿಶೇಷ ಲೇಖನ


ಬೇಸಿಗೆ ಆರಂಭವಾದರೆ ಸಾಕು ಎಲ್ಲಾ ಹಳ್ಳಿಗಳಲ್ಲೂ  ಜಾತ್ರೆಗಳು; ರಥೋತ್ಸವಗಳು;ಊರ ಹಬ್ಬಗಳು! ರೈತರ ಸಂಬ್ರಮಕ್ಕೆ ಪಾರವೇ ಇಲ್ಲ. ಒಂದೆರಡು ದಿನ ತಮ್ಮ ಎಲ್ಲಾ ಕಷ್ಟಕಾರ್ಪಣ್ಯಗಳನ್ನು ಬದಿಗಿಟ್ಟು ಊರ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿ ಗ್ರಾಮ ದೇವತೆಯನ್ನು ಆರಾಧಿಸುವುದು ಬೆಳೆದು ಬಂದಿರುವ ಪದ್ದತಿ. ಈ ದಿನಗಳಲ್ಲಿ ತಮ್ಮ ನೆಂಟರು ಇಷ್ಟರನ್ನೆಲ್ಲಾ ಕರೆದು, ಮಿಂದು, ಹೊಸ ಬಟ್ಟೆ ತೊಟ್ಟು, ಗ್ರಾಮ ದೇವತೆಯ ದರ್ಶನ ಪಡೆದು ವಿಶೇಷವಾದ ಭೋಜನ ತಯಾರಿಸಿ ಎಲ್ಲರೊಡನೆ ಊಟ ಮಾಡುವುದೇ ಒಂದು ಸಂಬ್ರಮ. ನಾಲ್ಕಾರು ಹಳ್ಳಿಗಳು ಒಟ್ಟಾಗಿ ಜಾತ್ರೆ ಮಾಡುವ ಪದ್ದತಿ ಕೂಡ ಇದೆ. ಅಂತಹ ಜಾತ್ರೆಗಳಲ್ಲಿ ಸುತ್ತಲ ಏಳು ಹಳ್ಳಿಯವರು ಸೇರಿ ಆಚರಿಸುವ ಹೊಳೇನರಸೀಪುರ ತಾಲ್ಲೂಕು ಹರಿಹರಪುರದ ಜಾತ್ರೆಯು  ವಿಶೇಷ ಸ್ಥಾನವನ್ನು ಪಡೆಯುತ್ತದೆ. ಹರಿಹರಪುರ ಗ್ರಾಮ ಪಂಚಾಯಿತಿಗೆ ಸೇರಿದ ಚಾಕೇನಹಳ್ಳಿ, ಅರೆಕಲ್ಲುಹೊಸಹಳ್ಳಿ, ಬೋರನಹಳ್ಳಿ, ಬೀರನಹಳ್ಳಿ, ತವನಂದಿ ಮತ್ತು ಸಿಗರನಹಳ್ಳಿ ಗ್ರಾಮಗಳ ಜನರು ಒಟ್ಟಾಗಿ ಸೇರಿ ಆಚರಿಸುವ ಹರಿಹರಪುರ ಗ್ರಾಮ ದೇವತೆ ಉಡುಸಲಮ್ಮ ಅರ್ಥಾತ್ ದುರ್ಗಾಪರಮೇಶ್ವರಿಯ ಜಾತ್ರೆಯ ಬಗ್ಗೆ ತಿಳಿಯೋಣ ಬನ್ನಿ.
ಏಳು ಹಳ್ಳಿಗೆ ಒಬ್ಬಳೇ ಗ್ರಾಮದೇವತೆ. ಅವಳ ಅಪ್ಪಣೆ ಪಡೆದೇ  ಏಳೂ ಹಳ್ಳಿಯ ಜನರ ಎಲ್ಲಾ ವ್ಯವಹಾರ! ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ನೌಕರಿ,ಮದುವೆ, ಮುಂಜಿ, ಯಾವುದೇ ವಿಷಯವಿರಲಿ ಅಮ್ಮನ ಅಪ್ಪಣೆ ಪಡೆದರೆ ಜನರಿಗೆ ನಿರಾತಂಕ. ಕೆಲಸ ಹೂ ಎತ್ತಿದಂತೆ ಸಲೀಸು. ಅಪ್ಪಣೆ ಪಡೆಯೋದು ಹೇಗೆ? ಅಮ್ಮ ಮಾತಾಡ್ತಾಳಾ? ಇಲ್ಲ. ಪ್ರಸಾದ ಕೊಡುತ್ತಾಳೆ.ಕೆಲಸ ಆಗುವುದಿದ್ದರೆ ಬಲಕ್ಕೆ ಇಲ್ಲವಾದರೆ ಎಡಕ್ಕೆ ಪ್ರಸಾದ ಕೊಡ್ತಾಳೆ.ಅದರಂತೆ ಭಕ್ತರು ನಡೆದುಕೊಳ್ಳುತ್ತಾರೆ. ನಂಬಿದವರ ಸಲಹುವ ಆತಾಯಿಯೇ ಹರಿಹರಪುರದ ಉಡುಸಲಮ್ಮ ಅರ್ಥಾತ್ ದುರ್ಗಾಪರಮೇಶ್ವರಿ.
ಹೊಳೇ ನರಸೀಪುರ ತಾಲ್ಲೂಕಿಗೆ ಸೇರಿದ ಹರಿಹರಪುರ ಒಂದು ಗ್ರಾಮ ಪಂಚಾಯ್ತಿ ಕೇಂದ್ರ. ಇದರ ವ್ಯಾಪ್ತಿಗೆ ಚಾಕೇನಹಳ್ಳಿ, ಅರೆಕಲ್ಲುಹೊಸಹಳ್ಳಿ, ಬೋರನಹಳ್ಳಿ, ಬೀರನಹಳ್ಳಿ, ತವನಂದಿ ಮತ್ತು ಸಿಗರನಹಳ್ಳಿ ಗ್ರಾಮಗಳು ಬರುತ್ತವೆ. ಈ ಏಳೂ ಹಳ್ಳಿಗೆ ಉಡುಸಲಮ್ಮನೇ ಗ್ರಾಮ ದೇವತೆ. ಈ ಏಳೂ ಹಳ್ಳಿಯಲ್ಲದೆ ಬೆಂಗಳೂರು ಮೈಸೂರಿನಂತ ದೂರದ ಊರಿನಲ್ಲೂ ಈ ದೇವತೆಯ ಭಕ್ತರಿದ್ದಾರೆ.
ಹರಿಹರಪುರದ ಸಂಕ್ಷಿಪ್ತ ಇತಿಹಾಸ: ವಿಜಯ ನಗರ ಸಾಮ್ರಾಜ್ಯವನ್ನು ಆಳುತ್ತಿದ್ದ ಎರಡನೇ ಹರಿಹರಮಹಾರಾಜನಿಗೆ ವೇದ ವಿದ್ವಾಂಸರನ್ನು ಕಂಡರೆ ಬಹಳ ಗೌರವ. ಮಹಾರಾಜನು ಅವನಸಾಮ್ರಾಜ್ಯದಲ್ಲಿದ್ದ ಶ್ರೇಷ್ಠ ವೇದ ವಿದ್ವಾಂಸರನ್ನು ಗೌರವಿಸಿ ಅವರಿಗೆ ಗ್ರಾಮಗಳನ್ನೇ ಉಡುಗೊರೆಯಾಗಿ ನೀಡುತ್ತಿದ್ದ. ೧೩೯೬ ಜನವರಿ ೧೬ ಯುವ ನಾಮ ನಾಮಸಂವತ್ಸರದ ಮಾಘ ಶುಕ್ಲ ಸಪ್ತಮಿ [ರಥ ಸಪ್ತಮಿ] ಸೋಮವಾರ ದಂದು ಸೂರ್ಯದೇವನ ಕೃಪೆ ಗಳಿಸಲು ಹರಿಹರಮಹಾರಾಜನು ತುಂಗಾನದಿಯ ತೀರದ ಹಂಪೆಯ ವಿರೂಪಾಕ್ಷನ ಸನ್ನಿಧಿಯಲ್ಲಿ  ನಾರಸಿಂಹ ಪುರ ಸೀಮೆಗೆ ಸೇರಿದ [ಈಗಿನ ಹೊಳೇ ನರಸೀಪುರ] ತವನಿಧಿ [ಈಗಿನ ತವನಂದಿ] ಎಂಬ ಗ್ರಾಮವನ್ನು ಹರಿಹರಪುರವೆಂದು ಪುನರ್ನಾಮಕರಣ ಮಾಡಿ ಆತ್ರೇಯಸ ಗೋತ್ರಕ್ಕೆ ಸೇರಿದ ಕಲ್ಲುಮಾಳಿಗೆ ಕೇಶವರ  ಮಗ ಮಾಧವಾಧ್ವರಿ ಎಂಬ   ಶ್ರೇಷ್ಠ ವೇದ ವಿದ್ವಾಂಸನಿಗೆ  ಅವನ ವಿದ್ಯೆಯನ್ನು ಗೌರವಿಸಿ ದಾನವಾಗಿ ನೀಡಿದನೆಂದು ಶಾಸನವು ತಿಳಿಸುತ್ತದೆ. 
ಬಹುಷ: ಆ ಸಮಯದಲ್ಲೇ ಮಾಧವಾಧ್ವರಿಯ ಹೆಸರು ಶಾಶ್ವತವಾಗಿ ನಿಲ್ಲುವಂತೆ  ಮಾಧವ ಕೃಷ್ಣ ದೇವಾಲಯವನ್ನು ಕಟ್ಟಿರಬೇಕು. ಈ ದೇವಾಲಯದ ಮಾಧವ ಕೃಷ್ಣನ  ಭವ್ಯವಾದ ಆಳೆತ್ತರದ ಮೂರ್ತಿಯನ್ನು ನೋಡಲು ಎರಡು ಕಣ್ಣು ಸಾಲದು. ದೇವಾಲಯದ ಎದುರಿಗೆ ಸರಿಯಾಗಿ ರಾಜಬೀದಿ. ರಾಜಬೀದಿಯ ಕೊನೆಯ ತುದಿಯಲ್ಲಿ ನಿಂತು ನೋಡಿದರೂ ಕೃಷ್ಣನ ವಿಗ್ರಹ ಕಾಣುವಂತಿದೆ. ಆದರೆ ಗ್ರಾಮ ದೇವತೆ ಉಡುಸಲಮ್ಮನಿಗೆ ಏಳೂ ಹಳ್ಳಿಯ ಭಕ್ತರಲ್ಲದೆ ಸುತ್ತಮುತ್ತಲ ಹಳ್ಳಿಯಲ್ಲೂ ದೂರದ ಊರುಗಳಲ್ಲೂ ಭಕ್ತರಿದ್ದಾರೆ. ಉಡುಸಲಮ್ಮನ ಉದ್ಭವಮೂರ್ತಿಯ ಫೋಟೊಗಳನ್ನಿಟ್ಟುಕೊಂಡು ನಿತ್ಯವೂ ಪೂಜಿಸುವ ಸಹಸ್ರಾರು ಭಕ್ತರು ಹೊರ ಊರುಗಳಲ್ಲೂ ಇದ್ದಾರೆ. ಹರಿಹರಪುರದ ಜಾತ್ರೆಗೆ ಬರಲು ಸಾಧ್ಯವಾಗದವರು ಅಂದು ಅವರಿರುವ ಊರುಗಳಲ್ಲೇ ಉಡುಸಲಮ್ಮನ ಚಿತ್ರಕ್ಕೆ ಪೂಜೆ ಸಲ್ಲಿಸಿ ಹತ್ತಾರು ಜನರಿಗೆ ಪ್ರಸಾದ ಕೊಟ್ಟು ಕೃತಾರ್ಥರಾದೆವು ಎನ್ನುವ ಭಕ್ತರೂ ಇದ್ದಾರೆ. ಹರಿಹರಪುರದಲ್ಲಿರುವ ಮತ್ತುಂದು ದೇವಾಲಯ ಶ್ರೀ ಪ್ರಸನ್ನ ನಂಜುಂಡೇಶ್ವರ.

ಸಿಡಿಜಾತ್ರೆಗೆ ದೇವಿಯಲ್ಲಿ ಪ್ರಸಾದ ಕೇಳುವ ಬಗೆ:
   ಶಿವರಾತ್ರಿಯ ಹಿಂದಿನ ಶುಕ್ರವಾರ ಏಳೂಹಳ್ಳಿಯ ಮುಖ್ಯಸ್ಥರು ಕೊಂಬುಕಹಳೆ ಸಮೇತ ಹರಿಹರಪುರದ ಉಡುಸಲಮ್ಮನ ದೇವಾಲಯಕ್ಕೆ ಬಂದು ಸೇರುತ್ತಾರೆ. ಅರ್ಚಕರು ದೇವಿಗೆ ಶಾಸ್ತ್ರೋಕ್ತವಾಗಿ ಅಭಿಶೇಕ ಪೂಜೆ ಮಾಡುತ್ತಾರೆ. ನಂತರ ಉದ್ಭವ ಮೂರ್ತಿಗೆ ಬಿಡಿಯ ಕಾಕಡ ಅಥವಾ ಕಣಿಗಲ ಹೂವನ್ನು ನೀರಲ್ಲಿ ಒದ್ದೆಮಾಡಿ ಅಂಟಿಸಲಾಗುತ್ತದೆ. ಊರ ಪಟೇಲರು,ಮುಖ್ಯಸ್ಥರು ಗಟ್ಟಿ ಧ್ವನಿಯಲ್ಲಿ ದೇವಿಯನ್ನು ಪ್ರಸಾದ ಕೇಳುತ್ತಾರೆ. ನಿಜವಾಗಿ ಭಕ್ತಾದಿಗಳ ಶ್ರದ್ಧೆ ವ್ಯಕ್ತವಾಗುವುದು ಈ ಸಂದರ್ಭದಲ್ಲಿ. ಊರ ಪ್ರಮುಖರು ದೇವಿಯೊಡನೆ ಅಕ್ಷರಶ: ಮಾತನಾಡುತ್ತಾರೆ  ತಾಯಿ ಪ್ರತೀ ವರ್ಷದಂತೆ ಈ ವರ್ಷವೂ ನಿನ್ನ ಜಾತ್ರೆ ಮಾಡ ಬೇಕು ಅಪ್ಪಣೆ ಕೊಡು ತಾಯಿ  ಪಟೇಲರುಗಳು ಪ್ರಸಾದವನ್ನು ಕೇಳುತ್ತಿದ್ದರೆ ದೇವಾಲಯದ ಹೊರಗೆ ಕೊಂಭುಕಹಳೆಯು ಮೊಳಗುತ್ತಿರುತ್ತದೆ. ಅರ್ಚಕರು ದೇವಿಗೆ ಮಂಗಳಾರತಿ ಮಾಡುತ್ತಾರೆ. ಸಾಮಾನ್ಯವಾಗಿ ಮಂಗಳಾರತಿ ಮಾಡುತ್ತಿದ್ದಂತೆಯೇ ದೇವಿಯ ಎಡ ಅಥವಾ ಬಲ ಪಾರ್ಶ್ವದಲ್ಲಿನ ಹೂವುಗಳು ಉದುರುತ್ತವೆ. ಒಂದು ವೇಳೆ ಹೂ ಅಲ್ಲಾಡದಿದ್ದರೆ ಆಗ ಪಟೇಲರುಗಳ ಧ್ವನಿಯನ್ನು ಕೇಳಲು ಚಂದ  ಯಾಕೆ ತಾಯಿ ನಿನಗೆ ಕಣ್ಣಿಲ್ಲವೇ? ಏಳು ಹಳ್ಳಿಯ ಜನ ಬಂದು ನಿನ್ನ ಅಪ್ಪಣೆ ಕೇಳುತ್ತಿದ್ದರೆ ನೀನು ಸುಮ್ಮನಿದ್ದೀಯಲ್ಲಾ, ನಿನ್ನ ಕಿವಿ ಕಿವುಡಾಗಿದೆಯೇ? ನಮ್ಮ ಮಾತು ನಿನಗೆ ಕೇಳುವುದಿಲ್ಲವೇ? ಭಕ್ತಿಯ ಪರಾಕಾಷ್ಟೆಯಲ್ಲಿ ನಿಷ್ಕಲ್ಮಶ ಭಾವದಲ್ಲಿ ಬರುವ ಮಾತುಗಳನ್ನು ಕೇಳುವುದೇ ಒಂದು ಅದ್ಭುತ!
ದೇವಿಯ ವಿಗ್ರಹದ ಬಲ ಬದಿಯಿಂದ ಹೂಗಳು ಉದುರುತ್ತವೆ!! ಒಬ್ಬ ವ್ಯಕ್ತಿಯ ಮೇಲೆ ದೇವಿ ಮೈದುಂಬುತ್ತಾಳೆ. ಆ ವ್ಯಕ್ತಿ ಎದ್ದು ಕುಣಿಯುತ್ತಾ ದೇವಾಯದಿಂದ ಹೊರಗೆ ಓದುತ್ತಾನೆ. ಅವನ ಹಿಂದೆ ಜನರು ಕೊಂಬು ಕಹಳೆ , ತಮಟೆ ಭಾರಿಸುತ್ತಾ ಓಡುತ್ತಾರೆ. ಏಳು ಹಳ್ಳಿಯಲ್ಲಿ ಯಾವುದಾದರೂ ತೋಟದಲ್ಲಿ ಬೆಳೆದಿರುವ ಮುಗುಳಿ ಮರವನ್ನು ದೇವಿಯು ಮೈದುಂಬಿದ ವ್ಯಕ್ತಿ ಹೋಗಿ ಮುಟ್ಟುತ್ತಾನೆ. ಕೂಡಲೇ ಮೈ ದುಂಬಿದ್ದ ದೇವಿ ಇಳಿದುಬಿಡುತ್ತಾಳೆ. ಆ ವ್ಯಕ್ತಿಗೆ  ಎಳನೀರು ಕುಡಿಸಿ ವಿಶ್ರಾಂತಿ ಕೊಡಲಾಗುತ್ತದೆ. ಕೆಲವೇ ನಿಮಿಷದಲ್ಲಿ ಆ ವ್ಯಕ್ತಿ ಸ್ವಸ್ಥಿತಿಗೆ ಬರುತ್ತಾನೆ. ಆ ಮರವನ್ನು ಕಡಿದು ಜನರೆಲ್ಲಾ ಅದಕ್ಕೆ ಹಗ್ಗ ಕಟ್ಟಿ ಉಯ್ಯಾಲೆಯಂತೆ ಹೊತ್ತು ಹರಿಹರಪುರದ ದೇವಾಲಯಕ್ಕೆ ತರುತ್ತಾರೆ. ಅದೇ ಮರವನ್ನು ಸಿಡಿಯಾಡಲು ನಿಲು ಮರವಾಗಿ ಉಪಯೋಗಿಸುತ್ತಾರೆ. ಪ್ರಸಾದವಾದನಂತರ ಅಲ್ಲಿದ್ದ ಜನರೆಲ್ಲಾ ಜಾತ್ರೆಯ ದಿನವನ್ನು ನಿರ್ಧರಿಸುತ್ತಾರೆ. ಸಾಮಾನ್ಯವಾಗಿ ಯುಗಾದಿ ಹಬ್ಬದ ಹಿಂದಿನ ಶುಕ್ರವಾರ-ಶನಿವಾರ ಜಾತ್ರೆಯನ್ನು ನಡೆಸುತ್ತಾರೆ. ಒಂದು ವೇಳೆ ಪ್ರಸಾದವು ಎಡಗಡೆಯಾದರೆ ಪುನ: ಮುಂದಿನ ಶುಕ್ರವಾರ ಕೇಳುತ್ತಾರೆ.
ಊರಾಟ: ಸಿಡಿಜಾತ್ರೆಯ  ಹಿಂದಿನ ದಿನ ಶುಕ್ರವಾರ  ಮಧ್ಯಾಹ್ನದಿಂದಲೇ [ಈ ವರ್ಷ ಇದೇ ೫.೪.೨೦೧೩ ಶುಕ್ರವಾರ] ದೇವಿಯ ಉತ್ಸವವನ್ನು  ಏಳೂ ಹಳ್ಳಿಯವರೂ ಅವರವರ ಊರಿಗೆ ಕರೆಸಿ ಎಲ್ಲರ ಮನೆಯ ಮುಂದೆ ಉತ್ಸವಮಾಡುತ್ತಾರೆ. ಅದರ ಜೊತೆಯಲ್ಲಿ ಚೋಮನ ಹೊತ್ತವರೂ ಸಹ ಕುಣಿಯುತ್ತಾ ಊರಿನ ಎಲ್ಲಾ ಬೀದಿಗಳಲ್ಲಿ ಉತ್ಸವವನ್ನು ತೆಗೆದುಕೊಂಡು ಹೋಗುತ್ತಾರೆ. ಇದನ್ನು ಊರಾಡುವುದು ಎನ್ನುತ್ತಾರೆ. ಶುಕ್ರವಾರ ಮದ್ಯಾಹ್ನ ಹೊರಟ ದೇವಿಯ ಉತ್ಸವವು ಏಳೂ ಹಳ್ಳಿಗಳಲ್ಲಿ ರಾತ್ರಿಯೆಲ್ಲಾ   ಊರಾಡಿ  ಪುನ: ಹರಿಹರಪುರಕ್ಕೆ ಬಂದು ಸೇರುವಾಗ ಶನಿವಾರ ಬೆಳಗಾಗಿರುತ್ತದೆ. ಉತ್ಸವ ಊರಾಡುವಾಗ ಭಕ್ತರು ಸಲ್ಲಿಸಿದ ಹರಕೆಯಿಂದ ಉತ್ಸವ ಮೂರ್ತಿ ಹೂ-ಹಾರಗಳಿಂದ ಕಂಗೊಳಿಸುತ್ತಿರುತ್ತದೆ.

ಕೆಂಡ ಕೊಂಡ : ಗ್ರಾಮದೇವತೆಯ ದೇವಾಲಯದ ಮುಂದೆ ಶುಕ್ರವಾರವೇ ಸೌದೆಯ ರಾಶಿಹಾಕಿ ಮಧ್ಯರಾತ್ರಿಯಲ್ಲಿ ಅದನ್ನು ಪ್ರಜ್ವಲಿಸಲಾಗುತ್ತದೆ. ರಾತ್ರಿಎಲ್ಲಾ ಉರಿದ ಸೌದೆಯ ರಾಶಿ ಬೆಳಗಾಗುವಾಗ ದಗದಗಿಸುತ್ತಿರುತ್ತದೆ. ಅದನ್ನು ವೃತ್ತಾ  ಕಾರದಲ್ಲಿ ಹರಡಲಾಗುತ್ತದೆ. ಸ್ವಲ್ಪ ದೂರದಲ್ಲಿ ಸಿಡಿಮರವನ್ನು ನೆಟ್ಟಿರುತ್ತಾರೆ. ಬೆಳಿಗ್ಗೆ  ೯ ರಿಂದ ೧೦ ಗಂಟೆ ಸುಮಾರಿಗೆ ಮೂರು ಹಳ್ಳಿಗಳಿಂದ ತೇರುಗಳನ್ನು ಮತ್ತು ಏಳೂ ಹಳ್ಳಿಗಳಿಂದ ಬಂಡಿಗಳನ್ನು ಎಳೆದು ದೇವಾಲಯದ ಮುಂದೆ ತರಲಾಗುತ್ತದೆ. ಸಾಗರದೋಪಾದಿಯಲ್ಲಿ ಜನರು ಬಂದು ಸೇರುತ್ತಾರೆ. ಬೆಂಕಿಯ ಕಾವು ರಾಚುತ್ತಿರುತ್ತದೆ. ಬೆಂಕಿಯ ಸುತ್ತಾ ಜನರು ಜಮಾಯಿಸಿರುತ್ತಾರೆ. ಚೋಮನನ್ನು ಹೊತ್ತವರು ದೇವಾಲಯದ ಮುಂದೆ ಕೆಂಡವನ್ನು ಹಾಯಲು ಚಡಪಡಿಸುತ್ತಾ ನಿಂತಿರುತ್ತಾರೆ. ಅರ್ಚಕರು ದೇವಿಗೆ ಮಂಗಳಾರತಿ ಮಾಡಿ ಬಂದು ಕೆಂಡಕ್ಕೂ ಮಂಗಳಾರತಿ ಮಾಡಿ ಕೆಂಡದ ಮೇಲೆ ತೀರ್ಥದ ಪ್ರೋಕ್ಷಣೆ ಮಾಡುತ್ತಾರೆ. ಚೋಮವನ್ನು ಹೊತ್ತ ಹರಿಜನ ಭಕ್ತ ಮೊದಲು ನಿಧಾನವಾಗಿ ಕೆಂಡದ ಮೇಲೆ ಹೆಜ್ಜೆ ಹಾಕುತ್ತಾನೆ. ಉಳಿದ ಭಕ್ತರು  ಚೋಮನ ಹಿಂದೆ ಸಾಗುತ್ತಾರೆ. ಅದುವರವಿಗೆ ಬೆಂಕಿಯ ಕಾವಿನಿಂದ ತತ್ತಿರಿಸುತ್ತಿದ್ದ ಭಕ್ತರು ಶಾಂತವಾಗಿ ಕೆಂಡದ ಮೇಲೆ ಹೆಜ್ಜೆ ಹಾಕುತ್ತಾರೆ.
ಕೆಂಡದ ಮೇಲೆ ನಡೆಯುವುದರ ಬಗ್ಗೆ ವಾದ-ವಿತಂಡ ವಾದಗಳು ನಡೆಯಬಹುದು. ಆದರೆ ಇಲ್ಲಿ ಭಕ್ತಿಯ ಮುಂದೆ ಎಲ್ಲವೂ ನಗಣ್ಯ. ಅಬ್ಭಾ! ಅದೆಂತಹ ಭಕ್ತಿ! ಹಳ್ಳಿಯ ಜನರಲ್ಲಿ ಒಂದಿನಿತೂ ಅಳುಕಿಲ್ಲ, ಭಯವಿಲ್ಲ.ಹೂವಿನ ಮೇಲೆ ನಡೆದಂತೆ ಹೆಜ್ಜೆ ಹಾಕುತ್ತಾರೆ!! ಅದೆಂತಹ ಅಚಲ ನಂಬಿಕೆ!!
ನಿಜ ಹೇಳುವೆ, ವಿದ್ಯಾವಂತರೆನಿಸಿಕೊಂಡ ನಮಗೆ ಅಳುಕಿದೆ.ಧೈರ್ಯ ಸಾಲದು.ಚಿಕ್ಕ ವಯಸ್ಸಿನಲ್ಲಿ ಹಲವು ಭಾರಿ ಕೆಂಡ ತುಳಿದಿರುವ ನನಗೆ ದೊಡ್ದವನಾದ ಮೇಲೆ ಅಳುಕಿದೆ, ಭಯವಿದೆ. ನಮ್ಮ ಹಳ್ಳಿಯ ಜನ ಹಾಗಲ್ಲಾ. ಅವರದು ಅಚಲ ಭಕ್ತಿ. ಇಂತಹ ದೃಶ್ಯವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ದೇವಿಯ ಈ ಜಾತ್ರೆಯಲ್ಲಿ ಮೇಲು-ಕೀಳು, ಬ್ರಾಹ್ಮಣ-ಶೂದ್ರ, ಯಾವ ಭೇದ ಭಾವವಿಲ್ಲ. ದೇವಿಯ ಮುಂದೆ ಎಲ್ಲರೂ ಸಮಾನರು.ನಿಜದ ಸ್ಥಿತಿಯಲ್ಲಿ ಜಾತ್ರೆಯಲ್ಲಿ ಹರಿಜನರದ್ದೇ ಪ್ರಮುಖಪಾತ್ರ! ಚೋಮನ ಹೊತ್ತು ಕುಣಿಯುತ್ತಾ  ಜಾತ್ರೆಗೆ ಮೆರಗು ಕೊಡುವವರು ಅವರೇ. ಅಷ್ಟೇ ಅಲ್ಲ. ಚೋಮ ಪ್ರಥಮವಾಗಿ ಕೆಂಡದ ಮೆಲೆ ಕಾಲಿಟ್ಟನಂತರವೇ ಉಳಿದವರು. ಅವರಲ್ಲಿ ಬ್ರಾಹ್ಮಣರು ಸೇರಿದಂತೆ  ಎಲ್ಲರೂ ಇರುತ್ತಾರೆ.

ಸಿಡಿ:
ಸಿಡಿ ಏರಿಸು, ಶೂಲಕ್ಕೇರಿಸು, ಎಂಬುದು  ಶಿಕ್ಷೆಯ ಸ್ವರೂಪಗಳು. ಆದರೆ ಇಲ್ಲಿ ಅದು ಸೇವೆಯ ರೂಪ ಪಡೆಯುತ್ತದೆ. ದೇವಿಗೆ ನಡೆದುಕೊಂದು ಬಂದಿರುವ ಸೇವೆ. ಇದಕ್ಕೊಂದು ದಂತ ಕಥೆ. ಒಂದು ಹರಿಜನ ಕುಟುಂಬಕ್ಕೆ ದಟ್ತ ದಾರಿದ್ರ್ಯ. ಅಂದು ಹೊಟ್ಟೆಗೆ ತಿನ್ನಲು ಏನೂ ಇಲ್ಲ. ಜೀತ ಮಾಡಿ ರೋಸಿ ಹೋಗಿದ್ದ ಇವರಿಗೆ ಊರಿನ ಗೌಡರ ಬತ್ತದ ಕಣದ ಮೇಲೆ ಕಣ್ ಬಿತ್ತು. ರಾತ್ರೋ ರಾತ್ರಿ ಕಣಕ್ಕೆ  ಹೋದರು. ಅಲ್ಲಿ ಸಂಸ್ಕರಿಸಿ ಇಟ್ಟಿದ್ದ ಬತ್ತದ ಮೂಟೆಗಳನ್ನು ಗಾಡಿಗೆ ತುಂಬಿ ಕೊಂಡರು. ಗಾಡಿ ಚಾಕೇನಹಳ್ಳಿಯತ್ತ ಹೊರಟಿತು. ಬೆಳಗಾಗೆದ್ದು ಊರ ಗೌಡ ಕಣಕ್ಕೆ ಹೋಗುತ್ತಾನೆ. ಬತ್ತ ಕಳುವಾಗಿದೆ! ಕೂಡಲೇ ಹೊಳೇ ನರಸೀಪುರಕ್ಕೆ ಹೋಗಿ ಪೋಲೀಸ್ ಗೆ ದೂರು ಕೊಡುತ್ತಾನೆ. ಕುದುರೆ ಹತ್ತಿದ ಪೋಲೀಸರು ಹರಿಹರಪುರಕ್ಕೆ ಬಂದು ಮಹಜರ್ ಮಾಡುತ್ತಾರೆ. ಕಣದ ಹತ್ತಿರದಿಂದ ಚಾಕೇನಹಳಿ ಕಡೆಗೆ ಹೋಗುವ ಮಾರ್ಗದಲ್ಲಿ ಬತ್ತದ ಕಾಳಿಗಳು ಬಿದ್ದಿರುವುದು ಗೊತ್ತಾಗುತ್ತದೆ. ಮೂಟೆ ತೂತಾಗಿ ದಾರಿಯುದ್ದಕ್ಕೂ ಬತ್ತ ಚೆಲ್ಲಾಡಿರುತ್ತದೆ. ಅದೇ ಜಾಡು ಹಿಡಿದು ಪೋಲೀಸರು ಚಾಕೇಹಳ್ಳಿಗೆ ಬರುತ್ತಾರೆ. ಬತ್ತ ಕದ್ದವರಿಗೆ ಎದೆ ನಡುಕ ಶುರುವಾಗುತ್ತದೆ. ಕೂಡಲೇ ಅವರಿಗೆ  ತೋಚಿದ್ದು ದೇವಿ ಉಡುಸಲಮ್ಮನ ಮೊರೆ ಹೋಗುವುದು. ದೇವಿಯಲ್ಲಿ ಮೊರೆ ಇಡುತ್ತಾರೆ  ತಾಯಿ ನಮಗೆ ತಿನ್ನಲು ನೀನು ಏನೂ ಕೊಟ್ಟಿಲ್ಲ. ಹಸಿವು ತಾಳಲಾರದೆ ಕಳ್ಳತನ ಮಾಡಿದ್ದು ನಿಜ. ನಾವು ನಿನ್ನ ಮಕ್ಕಳು.ಮಕ್ಕಳನ್ನು ಕಾಪಾಡುವುದು ತಾಯಿಯ ಹೊಣೆ. ಈಗ ನೀನೇ ನಮ್ಮನ್ನು ಕಾಪಾ ಡಬೇಕು. ನಮ್ಮನ್ನು ಈ ಪರಿಸ್ಥಿತಿಯಿಂದ ಪಾರು ಮಾಡಿದರೆ ಪ್ರತೀ ವರ್ಷ ನಮ್ಮನ್ನು ಸಿಡಿಗೆ ಒಪ್ಪಿಸಿಕೊಳ್ಳುತ್ತೇವೆ.
ಕಳ್ಳರು ಬಚ್ಚಿಟ್ಟಿದ್ದ ಬತ್ತದ ಮೂಟೆಯನ್ನು ಪೋಲೀಸರು ಪರಿಶೀಲಿಸುತ್ತಾರೆ. ಅದೆಲ್ಲಾ ಕೆಂಪು ಬತ್ತ  ಕಳವಾಗಿರುವುದು ಬಿಳಿಯ ಬತ್ತ. ಇಲ್ಲಿರುವುದು ಕೆಂಪುಬತ್ತ!! ಕಳ್ಳರಿಗೂ  ಆಶ್ಚರ್ಯ. ಕಳ್ಳರು ಅಪರಾಧದಿಂದ ಪಾರಾಗಿದ್ದರು. ಬಂದ ದಾರಿಗೆ ಸುಂಕವಿಲ್ಲವೆಂದು ಪೋಲೀಸರು ವಾಪಸ್ ಹೋಗಿ ವರದಿ ಒಪ್ಪಿಸಿದರು. ಅಂದಿನಿಂದ ಶುರುವಾಯ್ತು ಸಿಡಿ ಏರುವ ಪದ್ದತಿ
ಕೊಂಡಿ ಚುಚ್ಚುವುದು:  
ಸಿಡಿಜಾತ್ರೆ ನಡೆಯುವ ಹತ್ತು ದಿನಗಳ ಮುಂಚಿನಿಂದ ಸಿಡಿಯಾಡುವವರ ವ್ರತಾಚರಣೆ ಆರಂಭವಾಗುತ್ತದೆ. ಇವರನ್ನು ಈರಮಕ್ಕಳು ಅರ್ಥಾತ್ ದೇವರ ಮಕ್ಕಳು ಎನ್ನುತ್ತಾರೆ. ಈರ ಮಕ್ಕಳು ಈ ಹತ್ತೂ ದಿನವೂ ಅತ್ಯಂತ ಶ್ರದ್ಧೆಯಿಂದ ವ್ರತಾಚರಣೆ ಮಾಡುತ್ತಾರೆ. ಸಾತ್ವಿಕ ಮಿತ ಆಹಾರ. ಪ್ರತ್ಯೇಕವಾಗಿ ಗುಡಿಯಲ್ಲಿ ವಾಸ. ಪಂಚ ಲೋಹದಿಂದ ಮಾಡಿರುವ ಕೊಂಡಿಯನ್ನು ಸಿಡಿಯ ಹಿಂದಿನ ದಿನ ರಾತ್ರಿ ಈರ ಮಕ್ಕಳ ಬೆನ್ನಿನ ಒಂದು ನರ ಎಳೆದು ಚುಚ್ಚಿ ರಕ್ತಬಾರದಂತೆ ಅರಿಸಿನ ಮೆತ್ತಲಾಗುವುದು. ಅದರ ಮೇಲೆ ಒಂದು ಅರಿಸಿನ ಬಟ್ಟೆಯನ್ನು ಕಟ್ಟಲಾಗುವುದು.
ಸಿಡಿಯಾಟ:
ಊರಾಡಲು ಚಾಕೇನಹಳ್ಳಿಗೆ ದೇವಿಯ ಉತ್ಸವ ಬಂದಾಗ  ಈರಮಕ್ಕಳು ವಿಶೇಷ ವೇಶಧರಿಸಿ ಉತ್ಸವದೊಡನೆ ಹರಿಹರಪುರಕ್ಕೆ ಬರುತ್ತಾರೆ. ಕೈಯ್ಯಲ್ಲಿ ಕತ್ತಿ ಅಥವಾ ಬೆತ್ತವನ್ನು ಹಿಡಿದು ಕುಣಿಯುತ್ತಾ ಬರುವ ಈರಮಕ್ಕಳನ್ನು ನೋಡುವುದೇ ಒಂದು ಸಂಬ್ರಮ!
 ಕೆಂಡವನ್ನು ಜನರು ಹಾಯ್ದ ನಂತರ ತೇರು ಮತ್ತು ಬಂಡಿಗಳನ್ನೂ ಕೆಂಡದ ಮೇಲೆ ಎಳೆಯಲಾಗುತ್ತದೆ. ಆ ನಂತರ ಸಿಡಿಯಾಟ ಆರಂಭವಾಗುತ್ತದೆ. ಸೊಂಟಕ್ಕೆ ಬಟ್ಟೆ ಕಟ್ಟಿಕೊಂಡು ಈರ ಮಕ್ಕಳು ಸಿಡಿ ಮರದ ತುದಿಗೆ ನೇತು ಹಾಕಿಕೊಂಡು ಕಾಲು ಬಡಿಯುತ್ತಾ ಅಲಲಲಲಲೋಯ್, ಅಲಲಲಲಲೋಯ್ ಎಂದು ಕೂಗುತ್ತಿರುವಾಗ  ಮೂರು ಸುತ್ತು ಸಿಡಿ ಮರವನ್ನು ತಿರುಗಿಸುತ್ತಾರೆ. ಹರಕೆ ಹೊತ್ತ ಜನರು ಈರ ಮಕ್ಕಳ ಕೈಗೆ ತಮ್ಮ ಪುಟ್ಟಮಕ್ಕಳನ್ನು ಕೊಡುತ್ತಾರೆ.ಈರ ಮಕ್ಕಳು ಹರಿಜನ ರಾದರೂ ಬ್ರಾಹ್ಮಣರಾದಿಯಾಗಿ ಎಲ್ಲರೂ ಜಾತ್ರೆಯಲ್ಲಿ ಪಾಲ್ಗೊಂಡು ಕೃತಾರ್ಥರಾಗುತ್ತಾರೆ.
ಕೊನೆಯದಾಗಿ:
ಭಾರತವು ಹಳ್ಳಿಗಳ ದೇಶ. ಹಳ್ಳಿಗಳಲ್ಲಿ ನಡೆಯುವ ಹಬ್ಬ ಹರಿದಿನಗಳು,ರಥೋತ್ಸವಗಳು,ಕೆಂಡಕೊಂಡ ತೇರು ಜಾತ್ರೆಗಳು, ನಮ್ಮ ಸಾಂಸ್ಕೃತಕ ಆಚರಣೆಗಳ ಪ್ರತೀಕ. ಅದೊಂದು ಸಂಬ್ರಮ. ಈ ಸಂದರ್ಭಗಳಲ್ಲಿ ನಡೆಯುತ್ತಿದ್ದ ಯಕ್ಷಗಾನ ನಾಟಕಗಳು, ಕೋಲಾಟ, ಗುಂಡು ಎತ್ತುವ ಸ್ಪರ್ಧೆಗಳು, ಹರಿಕಥೆ ಮುಂತಾದವುಗಳು ಹಳ್ಳಿಯ ಸಾಮರಸ್ಯವನ್ನು ಕಾಪಾಡುತ್ತಿದ್ದ ಆಚರಣೆಗಳು. ಇತ್ತೀಚೆಗೆ ಇಂತಾ ಕಾರ್ಯಕ್ರಮಗಳಲ್ಲಿ ಆಸಕ್ತಿ ಕಮ್ಮಿಯಾಗುತ್ತಿದೆ. ಪಾಶ್ಚಾತ್ಯ ನೃತ್ಯಗಳು, ಜೂಜಾಟ,ಮದ್ಯಪಾನ, ಇತ್ಯಾದಿಗಳು ಹಳ್ಳಿಗಳನ್ನೂ ಪ್ರವೇಶಿಸುತ್ತಿವೆ. ಈ ಬಗ್ಗೆ ಜಾಗೃತರಾಗಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸೋಣ. ಸಾಮರಸ್ಯದಿಂದ ಬಾಳೋಣ.
ಹರಿಹರಪುರಕ್ಕೆ ಬಸ್ ಸೌಕರ್ಯಗಳು:
ಮಾರ್ಗ೧] ಹಾಸನ ದಿಂದ ಮಳಲಿ,ತೆರಣ್ಯ ಮಾರ್ಗವಾಗಿ ಹರಿಹರಪುರ
ಮಾರ್ಗ೨] ಹೊಳೆ ನರಸೀಪುರದಿಂದ ಹರಿಹರಪುರ
ಮಾರ್ಗ೩] ಚನ್ನರಾಯ ಪಟ್ಟಣದಿಂದ ದೊಡ್ದಕುಂಚೇ ಮಾರ್ಗ ಹರಿಹರಪುರ
ದಿನಾಂಕ ೫.೪.೨೦೧೩ ಮತ್ತು ೬.೪.೨೦೧೩ ಶುಕ್ರವಾರಮತ್ತು ಶನಿವಾರಗಳಲ್ಲಿ ಕೆ.ಎಸ್.ಆರ್.ಟಿ.ಸಿ ಯವರು ವಿಶೇಷ ಬಸ್ ಕೂದ ವ್ಯವಸ್ಥೆ ಮಾಡಿರುತ್ತಾರೆ.
                                             
-ಹರಿಹರಪುರಶ್ರೀಧರ್
೯೬೬೩೫೭೨೪೦೬

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ