ಸೋಮವಾರ, ಸೆಪ್ಟೆಂಬರ್ 13, 2010

ಚಿಲ್ಲರೆ ಲೆಕ್ಖ ಇಟ್ಟಿದ್ದೇ ಇಟ್ಟಿದ್ದು!!

ಮೊನ್ನೆ ಸತ್ಸಂಗದಲ್ಲಿ ಮಿತ್ರರೊಬ್ಬರು ಒಂದು ಮಾತು ಹೇಳಿದರು " ನಿತ್ಯವೂ ನಾವು ಮಾಡುವ ಹಣದ ಖರ್ಚಿನ ಲೆಕ್ಖವನ್ನು ಡೈರಿಯಲ್ಲಿ ಸಾಮಾನ್ಯವಾಗಿ ಬರೆದಿಡುತ್ತೇವೆ.ಆದರೆ ನಮಗರಿವಿಲ್ಲದಂತೆ ನಾವು ಯಥೇಚ್ಯವಾಗಿ ಖರ್ಚುಮಾಡುವ ನೀರು, ಗಾಳಿ, ಬೆಳಕಿನ ಲೆಕ್ಖ ಇಡುತ್ತೇವೆಯೇ?"

ಪ್ರಶ್ನೆ ಕೇಳಿದೊಡನೆ ಬೆಚ್ಚಿಬಿದ್ದೆ. ಅಲ್ವಾ! ಪ್ರತಿ ಸೆಕೆಂಡಿನಲ್ಲಿ ಉಸಿರಾಡಲು ಗಾಳಿಬೇಕು, ದಿನಕ್ಕೆ ಅದೆಷ್ಟು ಪ್ರಮಾಣದಲ್ಲಿ ನೀರು ವೆಚ್ಚ ಮಾಡುತ್ತೇವೆಯೋ ನಮಗೇ ಗೊತ್ತಿರುವುದಿಲ್ಲ. ಸೂರ್ಯ ಒಂದು ದಿನ ಮಂಕಾದರೆ ಸಾಕು ನಮ್ಮ ಜೀವನದಲ್ಲೂ ಮಂಕು ಕವಿಯದೇ ಇರಲಾರದು. ಇತ್ತೀಚೆಗಂತೂ ಕೆಲವೆಡೆ ಕುಡಿಯಲು ನೀರಿಗೆ ಹಾಹಕಾರವಾದರೆ ಕೆಲವು ಮನೆಗಳಲ್ಲಿ ಪುರಸಭೆಯವರು/ಪಂಚಾಯ್ತಿ ಯವರು ಸರಬರಾಜು ಮಾಡುವ ನೀರು ಮನೆಯ ತೊಟ್ಟಿ ತುಂಬಿ ಓವರಹೆಡ್ ಟ್ಯಾಂಕ್ ತುಂಬಿ ಹೆಚ್ಚಾಗಿ ಮೋರಿಯಲ್ಲಿ ಹರಿದುಹೋಗುವ ಪರಿ! ಆನೆತೊಳೆಯಲು ಸಾಕಾಗುವಷ್ಟು ನೀರನ್ನು ಕಾರ್ ತೊಳೆಯಲು ಉಪಯೋಗಿಸುವ ರೀತಿ!

ಹೌದಲ್ವಾ!

ನಾವು ಖರ್ಚುಮಾಡುವ ಪ್ರತಿ ಹನಿ ನೀರಿಗೆ ಲೆಕ್ಖ ಇಡುವ ಪರಿಸ್ಥಿತಿ ಇದ್ದಿದ್ದರೆ!

ಸಿಲಿಂಡರ್ ನಲ್ಲಿ ಗಾಳಿಯನ್ನು ಕೊಂಡು ಉಪಯೋಗಿಸುವಂತಿದ್ದರೆ!

ಸೂರ್ಯನ ಬೆಳಕಿಗೂ ಕಾಸು ಕೊಡಬೇಕಾಗಿದ್ದರೆ!

ಭಗವಂತನು ಅದೆಷ್ಟು ದಯಾಮಯ! ಅವನು ಕೊಟ್ಟಿದ್ದನ್ನೆಲ್ಲಾ ಬಿಟ್ಟಿ ಪಡೆಯುವ ನಾವು ಅವನನ್ನು ಮರೆತು ಚಿಲ್ಲರೆ ಲೆಕ್ಖ ಇಟ್ಟಿದ್ದೇ ಇಟ್ಟಿದ್ದು!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ